ಲಕ್ನೋ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದ ದುರುಪಯೋಗ ನಡೆದಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಯನ್ನು ಉತ್ತರ ಪ್ರದೇಶ ಸರ್ಕಾರ ಪುನರ್ರಚಿಸಿದೆ. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಹೊಸ ತನಿಖಾ ತಂಡಕ್ಕೆ ಸೇರಿಸಲಾಗಿದೆ.
ಹೊಸದಾಗಿ ರಚಿಸಲಾದ ಎಸ್‌ಐಟಿಯ ಮುಖ್ಯಸ್ಥರಾಗಿ ಇನ್‌ಸ್ಪೆಕ್ಟರ್ ಜನರಲ್ (ಐಜಿ) ಕಿರಣ್ ಎಸ್ ಅವರನ್ನು ನೇಮಕ ಮಾಡಲಾಗಿದೆ. ತಂಡದ ಸದಸ್ಯರಾಗಿ ಅಯೋಧ್ಯೆ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಡಿಐಜಿ) ಸೋಮೆನ್ ವರ್ಮಾ ಹಾಗೂ ಅಯೋಧ್ಯೆ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಡಾ. ಗೌರವ್ ಗ್ರೋವರ್ ಕಾರ್ಯನಿರ್ವಹಿಸಲಿದ್ದಾರೆ.
ಈ ಹಿಂದೆ ರಚಿಸಲಾಗಿದ್ದ ಎಸ್‌ಐಟಿಯಲ್ಲಿ ಲಕ್ನೋ ಪೊಲೀಸ್ ಆಯುಕ್ತ ವಿಜಯ ವಿಶ್ವಾಸ್ ಪಂತ್, ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ ರತನ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಸದಸ್ಯರಾಗಿದ್ದರು.
ಜುಲೈ 27ಕ್ಕೆ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ನಿರ್ದೇಶನ
ಜುಲೈ 13ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ಎಸ್‌ಐಟಿ ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಸದಸ್ಯರಾಗಿದ್ದರು.
ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್, ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಎಸ್‌ಐಟಿ ರಚಿಸಲಾಗಿದ್ದು, ಅದರ ತನಿಖೆಯಲ್ಲಿ ಕಾಗ್ನೈಸಬಲ್ (ಪೊಲೀಸರು ನೇರವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಬಹುದಾದ) ಅಪರಾಧ ನಡೆದಿದೆ ಎಂಬುದು ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಆಗಿನ ಎಸ್‌ಐಟಿಯಲ್ಲಿ ಲಕ್ನೋ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹಾಗೂ ಇಬ್ಬರು ಹಿರಿಯ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳು ಸದಸ್ಯರಾಗಿರುವುದನ್ನು ಉಲ್ಲೇಖಿಸಿ, ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಸಲು ಅವರೇ ಮುಖ್ಯ ತನಿಖೆ ನಡೆಸುವುದು ಸೂಕ್ತವೇ? ಎಂದು ಪ್ರಶ್ನಿಸಿತು.
ಇದೇ ವೇಳೆ, ಜುಲೈ 27ರಂದು ಪ್ರಕರಣದ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಸರ್ಕಾರ ಎಸ್‌ಐಟಿಯನ್ನು ಪುನರ್ರಚಿಸಿದ್ದು, ಮೂಲಗಳ ಪ್ರಕಾರ ಹೊಸ ತಂಡ ಈಗಾಗಲೇ ತನಿಖೆ ಆರಂಭಿಸಿದೆ.
ಸೀಲ್ ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದ ಎಸ್‌ಐಟಿ
ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಒಂದು ದಿನ ಮುನ್ನ ಎಸ್‌ಐಟಿ ತನ್ನ ಸ್ಥಿತಿಗತಿ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿತ್ತು. ಜುಲೈ 13ರ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಅದೇ ವೇಳೆ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ರಾಮಮಂದಿರ ಕಾಣಿಕೆ ದುರುಪಯೋಗ ಪ್ರಕರಣ
ಈ ಪ್ರಕರಣವು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದೆ.
ಈ ಹಿಂದೆ ಕಾರ್ಯನಿರ್ವಹಿಸಿದ್ದ ಎಸ್‌ಐಟಿಯು ಸಿಸಿಟಿವಿ ದೃಶ್ಯಾವಳಿಗಳು, ಕಾಣಿಕೆ ನೋಂದಣಿ ಪುಸ್ತಕಗಳು, ನಗದು ನಿರ್ವಹಣೆಯ ವಿಧಾನಗಳು ಹಾಗೂ ಹಣಕಾಸು ದಾಖಲೆಗಳ ಸವಿಸ್ತಾರ ಪರಿಶೀಲನೆ ನಡೆಸಿತ್ತು. ಅಲ್ಲದೆ ದೇವಸ್ಥಾನದ ಹಲವು ಸಿಬ್ಬಂದಿಯನ್ನು ವಿಚಾರಣೆ ನಡೆಸಿ, ಕಾಣಿಕೆ ಹಣ ಎಣಿಕೆ ಹಾಗೂ ಬ್ಯಾಂಕ್‌ಗೆ ಜಮೆ ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಕುರಿತು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿತ್ತು.
ತನಿಖೆಯ ನಂತರ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರಿಂದ ನಗದು, ವಾಹನಗಳು, ಹೂಡಿಕೆ ದಾಖಲೆಗಳು ಹಾಗೂ ದುರುಪಯೋಗಪಡಿಸಿಕೊಂಡ ಹಣದಿಂದ ಖರೀದಿಸಲಾಗಿದೆ ಎಂದು ಶಂಕಿಸಲಾದ ಇತರೆ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರು. ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಹಣಕಾಸು ವಹಿವಾಟುಗಳನ್ನೂ ತನಿಖೆಗೆ ಒಳಪಡಿಸಲಾಗಿತ್ತು.
ಹೊಸದಾಗಿ ರಚನೆಯಾದ ಎಸ್‌ಐಟಿ ಈಗ ತನಿಖೆಯನ್ನು ಮುಂದುವರಿಸಿ, ಜುಲೈ 27ರೊಳಗೆ ಸುಪ್ರೀಂ ಕೋರ್ಟ್‌ಗೆ ತನ್ನ ಸ್ಥಿತಿಗತಿ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ