ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡುವಾಗ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಮಾಡಿದೆ.
ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್ಐಆರ್ ರದ್ದು ಕೋರಿ ಸಿ.ಟಿ. ರವಿ ಅವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ಆದೇಶ ಮಾಡಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಅರ್ಜಿಯಲ್ಲಿ ಮೊದಲನೇ ಪ್ರತಿವಾದಿಯಾದ ಸರ್ಕಾರಕ್ಕೆ (ಚಿಕ್ಕಮಗಳೂರು ಟೌನ್ ಪೊಲೀಸರು) ನೋಟಿಸ್ ಜಾರಿಗೊಳಿಸಿದ ಪೀಠವು ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.ಇದಕ್ಕೂ ಮುನ್ನ, ಪ್ರಕರಣದ ಎಫ್ಐಆರ್ ಗಮನಿಸಿದ ಪೀಠವು “ಏಕೆ ಬೇಕು? ಯಾಕೆ ಈ ರೀತಿ ಹೇಳಿದಿರಿ? ಇದೆಲ್ಲ ಏಕೆ ಬೇಕು” ಎಂದು ಸಿ ಟಿ ರವಿ ಪರ ವಕೀಲರನ್ನು ಪ್ರಶ್ನಿಸಿತು ಎಂದು ವರದಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿ ಟಿ ರವಿ ಪರ ಹಿರಿಯ ವಕೀಲ ಅರುಣಶ್ಯಾಮ ಅವರು “ಯಾರ ಭಾವನೆಗೂ ಧಕ್ಕೆ ತರುವ ಕೆಲಸವಾಗಿಲ್ಲ. ಮೂರನೇ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ” ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರು, ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಅರ್ಜಿದಾರರು ಸರಿಯಾಗಿ ಸ್ಪಂದಿಸಿಲ್ಲ. ತಮ್ಮ ಬೆಂಬಲಿಗರ ಜತೆ ಕುಳಿತು ಕಾಂಗರೂ ಕೋರ್ಟ್ ನಡೆಸಿ, ನೋಟಿಸ್ ನೀಡಲು ತೆರಳಿದ್ದ ಅಧಿಕಾರಿಗಳನ್ನೇ ನಿಂದಿಸಿ, ಬೆದರಿಸಿದ್ದಾರೆ ಎಂದರು.
ಇದನ್ನು ನಿರಾಕರಿಸಿದ ವಕೀಲ ಅರುಣಶ್ಯಾಮ, ಪೊಲೀಸರು ಎಫ್ಐಆರ್ ಪ್ರತಿ ಒದಗಿಸದೆಯೇ ನೋಟಿಸ್ ನೀಡಲು ತೆರಳಿದ್ದರು. ಇದರಿಂದ ಅರ್ಜಿದಾರರು ಎಫ್ಐಆರ್ ಎಲ್ಲಿ, ಯಾವ ಪ್ರಕರಣ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ತಮ್ಮ ಹಕ್ಕಿನ ಭಾಗವಾಗಿ ಎಫ್ಐಆರ್ ಪ್ರತಿಯನ್ನು ಕೇಳಿದ್ದಾರೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದರು.
ವಿಡಿಯೊ ಎಲ್ಲಿದೆ ಎಂದು ಪೀಠವು ಎಸ್ಪಿಪಿ ಅವರನ್ನು ಪ್ರಶ್ನಿಸಿತು. ವಿಡಿಯೊ ಪಡೆದುಕೊಂಡು ನ್ಯಾಯಾಲಯಕ್ಕೆ ಒದಗಿಸುವುದಾಗಿ ಎಸ್ಪಿಪಿ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಿತು.
ಪ್ರಕರಣದ ಹಿನ್ನೆಲೆ: ಮುದಾಸಿರ್ ಪಾಷಾ ಎಂಬುವರು 2026ರ ಜುಲೈ 24ರ ರಾತ್ರಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಜುಲೈ 23ರಂದು ಸಂಜೆ 6 ಗಂಟೆ ಸಮಯದಲ್ಲಿ ‘ಯೂತ್ ಫಾರ್ ನೇಷನ್ ಚಿಕ್ಕಮಗಳೂರು’ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಂತರ ಆಜಾದ್ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ ಟಿ ರವಿ ಅವರು ತಮ್ಮ ಭಾಷಣದ ವೇಳೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಧರ್ಮ ಹಾಗೂ ಸಮುದಾಯದ ಆಧಾರದ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿ, ಎರಡು ಸಮುದಾಯ ನಡುವೆ ಸಂಘರ್ಷ ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಹಬ್ಬಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿರುವ ಸಿ ಟಿ ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು. ಈ ದೂರು ಆಧರಿಸಿ, ಪೊಲೀಸರು ಸಿ ಟಿ ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ