ನೀವು ಸಂಭ್ರಮದಲ್ಲಿ ಮುಳುಗಿದಿರಿ, ಪ್ರತಿಭಟನಾಕಾರರು ಹಸಿವಿನಿಂದ ನರಳುತ್ತಿದ್ದರು”; ಸಿಜೆಪಿ ನಾಯಕರ ನೃತ್ಯ ವಿಡಿಯೊಗಳಿಗೆ ಭಾರಿ ಆಕ್ರೋಶ

ನವದೆಹಲಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಾದ ನಂತರ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಾಯಕರು ನೃತ್ಯ ಮಾಡಿ ಸಂಭ್ರಮಿಸಿದ ವಿಡಿಯೊಗಳಿಂದ ಆರಂಭವಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಪ್ರತಿಭಟನೆ ಮುಕ್ತಾಯವಾದ ತಕ್ಷಣವೇ ಈ ರೀತಿಯ ಸಂಭ್ರಮಾಚರಣೆ ನಡೆಸಿರುವುದು “ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯ ಕೊರತೆ” ಎಂದು ಸಿಜೆಪಿಗೆ ಸಂಬಂಧಿಸಿದ ಅನೇಕರು ಟೀಕಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಖಂಡಿಸಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಾಯಕರು ನೃತ್ಯ ಮಾಡಿ ಸಂಭ್ರಮಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ನಂತರ ಹಲವಾರು ನೆಟಿಜನ್‌ಗಳು ಪಕ್ಷದ ವೀಡಿಯೊದ ‘ಅಸಂವೇದನಾಶೀಲತೆ’ಯ ಬಗ್ಗೆ ಧ್ವನಿ ಎತ್ತಿದ್ದಾರೆ.
ಸಿಜೆಪಿ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಗೆಲುವಿನೊಂದಿಗೆ ವಿನಯವೂ ಇರಬೇಕು” ಎಂದು ಹೇಳಿರುವ ವಾಂಗ್ಚುಕ್, ಬೆಂಬಲಿಗರು “ಘನತೆ, ಸಂಯಮ ಮತ್ತು ಜವಾಬ್ದಾರಿಯೊಂದಿಗೆ ಸಂಭ್ರಮಿಸಬೇಕು” ಎಂದು ಕರೆ ನೀಡಿದ್ದಾರೆ.
ಯಶಸ್ಸು ಸಾಧಿಸುವುದು ಎಷ್ಟು ಮುಖ್ಯವೋ, ಅದನ್ನು ವಿನಯ ಮತ್ತು ಪರಸ್ಪರ ಗೌರವದಿಂದ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಿಂಗಳ ಕಾಲ ನಡೆದ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸಿಜೆಪಿಯ ಪ್ರಮುಖ ಸದಸ್ಯರು ನೃತ್ಯ ಮಾಡಿ ಸಂಭ್ರಮಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಸಿಜೆಪಿಯ ಸಂಭ್ರಮಾಚರಣೆಯ ವಿಡಿಯೊಗಳಿಗೆ ಪಕ್ಷದ ಬೆಂಬಲಿಗರ ವಲಯದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಆನ್‌ಲೈನ್ ವೇದಿಕೆಯ ಸಂಸ್ಥಾಪಕ ಸದಸ್ಯರೂ ಆಗಿರುವ ವಿಶ್ಲೇಷಕ ಹಾಗೂ ಯೂಟ್ಯೂಬರ್ ಮೇಘನಾದ ಅವರು, ಪ್ರತಿಭಟನೆ ಮುಗಿದ ಬಳಿಕ ಡಜನ್‌ಗಟ್ಟಲೆ ಪ್ರತಿಭಟನಾಕಾರರನ್ನು “ಮನೆಗೆ ಹೋಗಲಾಗದೆ, ಹಸಿವಿನಿಂದ” ಬೀದಿಯಲ್ಲಿದ್ದರೂ, ಸಿಜೆಪಿ ನಾಯಕರು ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಿಜೆಪಿ ನಾಯಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವಾರು ಪ್ರತಿಭಟನಾಕಾರರು ಮತ್ತು ಸ್ವಯಂಸೇವಕರಿಗೆ ತಾವು ಹಾಗೂ ಕೆಲವರು ತಮ್ಮ ಸ್ವಂತ ಹಣದಿಂದ ಆಹಾರ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ ಎಂದು ಮೇಘನಾದ ತಿಳಿಸಿದ್ದಾರೆ.
“ಬೆಳಗಿನ 4 ಗಂಟೆಗೆ ಈ ವಿಡಿಯೊ ನೋಡುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನಾನು ಮತ್ತು ಇನ್ನೂ ಕೆಲವರು ನಮ್ಮ ಸ್ವಂತ ಹಣದಲ್ಲಿ ನಿರ್ಲಕ್ಷ್ಯಕ್ಕೊಳಗಾದ, ಹಸಿದಿದ್ದ ಸಿಜೆಪಿ ಸ್ವಯಂಸೇವಕರು ಹಾಗೂ ಪ್ರತಿಭಟನಾಕಾರರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ನಾನು ಏನೂ ಹೇಳಬಾರದೆಂದುಕೊಂಡಿದ್ದೆ. ಆದರೆ ಈ ವಿಡಿಯೊ ನೋಡಿದ ನಂತರ ನನಗೆ ತುಂಬಾ ಕೋಪ ಬಂದಿದೆ” ಎಂದು ಅವರು ಬರೆದಿದ್ದಾರೆ.
ಪೋಸ್ಟ್‌ನ ಕೊನೆಯಲ್ಲಿ ಅವರು ಸಿಜೆಪಿಯನ್ನು ಉದ್ದೇಶಿಸಿ, “ನೀವು ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ, 70ಕ್ಕೂ ಹೆಚ್ಚು ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳು ದೆಹಲಿಯಲ್ಲಿ ಹಸಿವಿನಿಂದ ನರಳುತ್ತಿದ್ದರು. ಏಕೆಂದರೆ ಅವರ ಬಗ್ಗೆ ನೀವು ಕಾಳಜಿ ವಹಿಸಲಿಲ್ಲ. ಅಭಿನಂದನೆಗಳು ಸಿಜೆಪಿ, ಕೊನೆಗೂ ನೀವು ಕೂಡ ಸಾಮಾನ್ಯ ರಾಜಕೀಯ ಪಕ್ಷದಂತೆಯೇ ಆಗಿದ್ದೀರಿ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ, ವೈರಲ್ ಆಗಿರುವ ವಿಡಿಯೊಗಳು ಯುವ ಪೀಳಿಗೆಯ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಸಮರ್ಥಿಸಿಕೊಂಡಿದೆ.
ಪಕ್ಷದ ವಕ್ತಾರ ಸೌರವ ದಾಸ್, ಸೋಮವಾರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿ, “ಎಷ್ಟು ದಿನ ಬೇಕಾದರೂ ನಾವು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡಬಹುದು. ನೃತ್ಯ ಮಾಡುತ್ತಲೇ ಪ್ರತಿಭಟನೆ ನಡೆಸಬಹುದು. ತಣ್ಣನೆಯ ಕಾಫಿ ಕುಡಿಯುತ್ತಲೇ ಸಂಘಟನೆ ಮಾಡಬಹುದು” ಎಂದು ಹೇಳಿದ್ದಾರೆ.
“ಇದೇ ಈ ಪೀಳಿಗೆಯ ಸ್ವಭಾವ. ಆತ್ಮವಿಶ್ವಾಸ, ಸೃಜನಶೀಲತೆ, ದೃಢತೆ ಮತ್ತು ಯಾವುದೇ ಚೌಕಟ್ಟಿಗೆ ಸೀಮಿತಗೊಳಿಸಲಾಗದ ಗುಣವೇ ನಮ್ಮದು” ಎಂದು ಅವರು ಹೇಳಿಕೊಂಡಿದ್ದಾರೆ.
ಸರ್ಕಾರ ಮತ್ತು ಕೆಲವು ಟಿವಿ ನಿರೂಪಕರಿಗೆ “ಜೆನ್ Z ಮತ್ತು ಯುವ ಪೀಳಿಗೆಯ ಭಾಷೆ ಅರ್ಥವಾಗುತ್ತಿಲ್ಲ” ಎಂದು ಆರೋಪಿಸಿದ ಅವರು, “ಅಂಕಲ್-ಆಂಟಿಯರು ಎಷ್ಟು ಬೇಕಾದರೂ ದೂರು ಹೇಳಲಿ. ನಮ್ಮನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅವರಿಗೆ ಬೇರೆ ದಾರಿ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೌರವ್ ದಾಸ್, ವೈರಲ್ ಆಗಿರುವುದು ಕೇವಲ ಸಂಭ್ರಮದ ದೃಶ್ಯಗಳಷ್ಟೇ ಎಂದು ಸ್ಪಷ್ಟಪಡಿಸಿದರು.”ವಾಸ್ತವವಾಗಿ ಅದು ನಮ್ಮ ಚಳವಳಿಗೆ ಬೆಂಬಲವಾಗಿ ದುಡಿದ ಸ್ವಯಂಸೇವಕರನ್ನು ಗೌರವಿಸಲು ಆಯೋಜಿಸಿದ್ದ ಸಭೆಯಾಗಿತ್ತು. ದುರದೃಷ್ಟವಶಾತ್ ನಾವು ನೃತ್ಯ ಮಾಡಿದ ದೃಶ್ಯಗಳೇ ಹೊರಬಂದಿವೆ. ಆದರೆ ಅದಕ್ಕೂ ಮೊದಲು ಪ್ರತಿಯೊಬ್ಬ ಸ್ವಯಂಸೇವಕರೊಂದಿಗೆ ನೆಲದ ಮೇಲೆ ಕುಳಿತು ಮನಸಾರೆ ಮಾತನಾಡಿದ್ದೇವೆ. ಅದು ಅತ್ಯಂತ ಅಗತ್ಯವಾಗಿತ್ತು” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಊಟ ಬಡಿಸಲು ತಡವಾಗಿದ್ದಕ್ಕೆ ಅತ್ತಿಗೆ ತಲೆಯನ್ನೇ ಕತ್ತರಿಸಿ ಮರಕ್ಕೆ ನೇತು ಹಾಕಿದ ಮೈದುನ !

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement