ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್ ಪ್ಲಾಟ್‌ಫಾರ್ಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಜೆನ್-ಝಡ್ (Gen Z) ಯುವಕರನ್ನು ಉದ್ದೇಶಿಸಿ ಬಿಡುಗಡೆ ಮಾಡಿದ್ದ ಸೆಲ್ಫಿ ಶೈಲಿಯ ವಿಡಿಯೊವನ್ನು ಭಾರತದಲ್ಲಿ ಕೆಲಕಾಲ ನಿರ್ಬಂಧಿಸಿದ ವಿದ್ಯಮಾನ ವರದಿಯಾಗಿದೆ. ಆದರೆ ಕೆಲವೇ ಗಂಟೆಗಳಲ್ಲೇ ಮತ್ತೆ ಲಭ್ಯವಾಗುವಂತೆ ಮಾಡಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಟೀಕೆಗೆ ಕಾರಣವಾಗಿದ್ದು, ಭಾರತದಲ್ಲಿ ಮೆಟಾದ ವಿಷಯ ನಿಯಂತ್ರಣ (Content Moderation) ಕ್ರಮಗಳ ಪಾರದರ್ಶಕತೆ ಕುರಿತು ಹೊಸ ಪ್ರಶ್ನೆಗಳನ್ನು ಎತ್ತಿದೆ.
ಆರಂಭದಲ್ಲಿ ವಿಡಿಯೊ ತೆರೆಯಲು ಯತ್ನಿಸಿದ ಬಳಕೆದಾರರಿಗೆ, “ಕಾನೂನು ಸಂಬಂಧಿತ ವಿನಂತಿಯ ಹಿನ್ನೆಲೆಯಲ್ಲಿ ಈ ವಿಡಿಯೊ ಭಾರತದಲ್ಲಿ ಲಭ್ಯವಿಲ್ಲ” ಎಂಬ ಸಂದೇಶ ಕಾಣಿಸಿಕೊಂಡಿತ್ತು. ಆದರೆ, ಈ ನಿರ್ಬಂಧ ಯಾವ ಕಾನೂನು ಪ್ರಕ್ರಿಯೆ ಅಥವಾ ಯಾವ ಅಧಿಕಾರಿಯ ಮನವಿಯ ಮೇರೆಗೆ ವಿಧಿಸಲಾಗಿದೆ ಎಂಬುದನ್ನು ಫೇಸ್‌ಬುಕ್ ಸ್ಪಷ್ಟಪಡಿಸಿರಲಿಲ್ಲ.
ಈ ತಾತ್ಕಾಲಿಕ ನಿರ್ಬಂಧವು ಭಾರತದಲ್ಲಿ ವಿಷಯ ನಿಯಂತ್ರಣ ಮತ್ತು ವೇದಿಕೆ ಸುರಕ್ಷತೆ ಕುರಿತಾಗಿ ಮೆಟಾ ಈಗಾಗಲೇ ಹೆಚ್ಚಿದ ಪರಿಶೀಲನೆ ಮತ್ತು ಒತ್ತಡವನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ನಡೆದಿದೆ. ವಿಡಿಯೊವನ್ನು ಏಕೆ ನಿರ್ಬಂಧಿಸಲಾಯಿತು, ಯಾರು ಈ ಕ್ರಮಕ್ಕೆ ಕಾರಣರಾದರು ಅಥವಾ ಇದು ಸ್ವಯಂಚಾಲಿತ (Automated) ವ್ಯವಸ್ಥೆಯ ದೋಷವೇ ಅಥವಾ ಅಧಿಕೃತ ಕಾನೂನು ವಿನಂತಿಯ ಆಧಾರದ ಮೇಲೆ ನಡೆದ ಕ್ರಮವೇ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ವರದಿ ಪ್ರಕಟವಾಗುವ ವೇಳೆಯವರೆಗೂ ಮೆಟಾ ಈ ಕುರಿತು ಯಾವುದೇ ವಿವರವಾದ ಹೇಳಿಕೆ ನೀಡಿಲ್ಲ.
ಬಿಜೆಪಿ ನಾಯಕರ ಆಕ್ರೋಶ
ಪ್ರಧಾನಮಂತ್ರಿಯವರ ಪೋಸ್ಟ್ ಭಾರತದಲ್ಲಿ ಮಾತ್ರ ನಿರ್ಬಂಧಿತವಾಗಿದೆ ಎಂಬ ವಿಚಾರವನ್ನು ಬಿಜೆಪಿ ನಾಯಕರು ಸಾರ್ವಜನಿಕವಾಗಿ ಪ್ರಸ್ತಾಪಿಸಿದರು. ಉತ್ತರ ಪ್ರದೇಶ ಬಿಜೆಪಿ ನಾಯಕ ತಜಿಂದರ್ ಬಗ್ಗಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೈಗೊಂಡ ಕ್ರಮ ಕುರಿತು ಪ್ರಧಾನಿ ಮೋದಿ ಪ್ರಕಟಿಸಿದ್ದ ಪೋಸ್ಟ್ ಅನ್ನು ಫೇಸ್‌ಬುಕ್ ನಿರ್ಬಂಧಿಸಿದೆ ಎಂದು ಆರೋಪಿಸಿ, ಪ್ರಧಾನಮಂತ್ರಿಯವರ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡಲು ಫೇಸ್‌ಬುಕ್‌ಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. ಆದರೆ, ಅವರು ಬಳಿಕ ಆ ಪೋಸ್ಟ್ ಅನ್ನು ಅಳಿಸಿದರು.
ಮಹಾರಾಷ್ಟ್ರ ಬಿಜೆಪಿ ಅಧಿಕೃತ ವಕ್ತಾರೆ ಹಾಗೂ ಏಳು ಮೋರ್ಚಾಗಳ ಉಸ್ತುವಾರಿ ಪ್ರೀತಿ ಗಾಂಧಿ ಕೂಡ ಮೆಟಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತದ ಯುವಕರಿಗಾಗಿ ಪ್ರಧಾನಿ ಬಿಡುಗಡೆ ಮಾಡಿದ್ದ ಮೊದಲ ನೇರ ಸೆಲ್ಫಿ ವಿಡಿಯೊವನ್ನು ಏಕೆ ಭಾರತದಲ್ಲೇ ನಿರ್ಬಂಧಿಸಲಾಯಿತು ಎಂಬುದನ್ನು ಮೆಟಾ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು. ಇದು ಕೇವಲ ವಿಷಯ ನಿಯಂತ್ರಣದ ಸಮಸ್ಯೆಯಲ್ಲ, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸಂಬಂಧಿಸಿದ ಗಂಭೀರ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.
ಕೆಲವೇ ಗಂಟೆಗಳಲ್ಲಿ ನಿರ್ಬಂಧ ತೆರವು
‘See Why’ ಆಯ್ಕೆಯನ್ನು ಕ್ಲಿಕ್ ಮಾಡಿದ ಬಳಕೆದಾರರಿಗೆ, “ಕಾನೂನು ಸಂಬಂಧಿತ ವಿನಂತಿಯ ಹಿನ್ನೆಲೆಯಲ್ಲಿ ಈ ಮಾಧ್ಯಮ ಭಾರತದಲ್ಲಿ ಲಭ್ಯವಿಲ್ಲ” ಎಂಬ ಸಂದೇಶ ಕಾಣಿಸಿಕೊಂಡಿತ್ತು ಎಂದು ಕೆಲ ವರದಿಗಳು ತಿಳಿಸಿವೆ. ಆದರೆ, ಯಾವ ಅಧಿಕಾರ ಸಂಸ್ಥೆಯು ಈ ವಿನಂತಿ ಸಲ್ಲಿಸಿತ್ತು ಅಥವಾ ಯಾವ ಕಾನೂನಿನ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಸಂದೇಶದಲ್ಲಿ ಉಲ್ಲೇಖಿಸಲಾಗಿರಲಿಲ್ಲ.
ಕೆಲವೇ ಗಂಟೆಗಳ ನಂತರ ಈ ಸೂಚನೆಯನ್ನು ತೆಗೆದುಹಾಕಲಾಗಿದ್ದು, ವಿಡಿಯೊವನ್ನು ಭಾರತದಲ್ಲಿಯೂ ಮತ್ತೆ ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು. ಈ ನಿರ್ಬಂಧ ತಾಂತ್ರಿಕ ದೋಷವೇ, ಸ್ವಯಂಚಾಲಿತ ವ್ಯವಸ್ಥೆಯ ಪರಿಣಾಮವೇ ಅಥವಾ ಅಧಿಕೃತ ಕಾನೂನು ವಿನಂತಿಯ ಫಲಿತಾಂಶವೇ ಎಂಬ ಬಗ್ಗೆ ಮೆಟಾ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಜೆನ್-ಝಡ್ ಯುವಕರಿಗಾಗಿ ಪ್ರಧಾನಿ ಮೋದಿ ವಿಡಿಯೊ
ಈ ವಿಡಿಯೊ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಜೆನ್-ಝಡ್ ಯುವಕರೊಂದಿಗೆ ನೇರ ಸಂವಾದ ನಡೆಸುವ ಸೆಲ್ಫಿ ವಿಡಿಯೊಗಳ ಸರಣಿಯ ಭಾಗವಾಗಿದೆ. ಮೊದಲ ವಿಡಿಯೊದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ವಿವರಿಸಿದ್ದರು. ಸೋರಿಕೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದ್ದು, ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗದಂತೆ ಕಾನೂನು ತಿದ್ದುಪಡಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.
ಮುಂದಿನ ವಿಡಿಯೊಗಳಲ್ಲಿ ಯುವ ಸಮೂಹದಿಂದ ಬಂದ ಪ್ರತಿಕ್ರಿಯೆಗಳಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದು, ದೇಶದ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹೊಸ ಕ್ರಮಗಳನ್ನು ಘೋಷಿಸಿದ್ದರು. ಅದರ ಭಾಗವಾಗಿ, ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಸುಧಾರಣಾ ಶಿಫಾರಸುಗಳನ್ನು ನೀಡುವ ಉದ್ದೇಶದಿಂದ ತಂತ್ರಜ್ಞಾನ ತಜ್ಞ ನಂದನ ನೀಲೇಕಣಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗುವುದು ಎಂದು ಪ್ರಕಟಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ