ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಂನಲ್ಲಿ 10.5 ಕೋಟಿ (105 ಮಿಲಿಯನ್) ಫಾಲೋವರ್ಸ್ಗಳ ಮೈಲುಗಲ್ಲು ತಲುಪಿದ್ದಾರೆ. ಕೇವಲ ಒಂದೇ ವಾರದಲ್ಲಿ 40 ಲಕ್ಷ (4 ಮಿಲಿಯನ್) ಹೊಸ ಫಾಲೋವರ್ಸ್ಗಳು ಸೇರ್ಪಡೆಯಾಗಿದ್ದು, ಅವರ ಒಟ್ಟು ಫಾಲೋವರ್ಸ್ಗಳ ಸಂಖ್ಯೆ 10.1 ಕೋಟಿಯಿಂದ (101 ಮಿಲಿಯನ್) 10.5 ಕೋಟಿಗೆ (105 ಮಿಲಿಯನ್) ಏರಿಕೆಯಾಗಿದೆ. ಇನ್ಸ್ಟಾಗ್ರಾಂನಲ್ಲಿ ವಿಶ್ವದ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜಕೀಯ ನಾಯಕ ಎಂಬ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕಾಯ್ದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸೆಲ್ಫಿ ವಿಡಿಯೊಗಳ ಸರಣಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಅವರಿಗೆ ಕೇವಲ ನಾಲ್ಕು ದಿನಗಳಲ್ಲೇ ಸುಮಾರು 40 ಲಕ್ಷ ಹೊಸ ಫಾಲೋವರ್ಸ್ಗಳು ಹೆಚ್ಚಾಗಿದ್ದಾರೆ. ಇದು, ಇತ್ತೀಚಿನ ದಿನಗಳಲ್ಲಿ ಅವರ ಖಾತೆಯಲ್ಲಿ ಕಂಡುಬಂದ ಅತಿ ವೇಗದ ಫಾಲೋವರ್ಗಳ ಏರಿಕೆಯಾಗಿವೆ.
ಈ ಬೆಳವಣಿಗೆಗೆ ಶುಕ್ರವಾರ ಮುಂಜಾನೆ ಮೋದಿ ಅವರು ಮೊದಲ ಬಾರಿಗೆ ಹಂಚಿಕೊಂಡ ಸೆಲ್ಫಿ ವಿಡಿಯೊ ಕಾರಣವಾಯಿತು. ತಮ್ಮ ಸಾಮಾನ್ಯ ಸಾಮಾಜಿಕ ಜಾಲತಾಣ ಪೋಸ್ಟ್ಗಳಿಗಿಂತ ಭಿನ್ನ ಶೈಲಿಯಲ್ಲಿ ಪ್ರಕಟಿಸಿದ ಈ ವಿಡಿಯೊ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ, ನೂರಾರು ಮಿಲಿಯನ್ ವೀಕ್ಷಣೆಗಳನ್ನು ದಾಖಲಿಸಿತು. ಜೊತೆಗೆ ಸುಮಾರು 14 ಲಕ್ಷ ಹೊಸ ಫಾಲೋವರ್ಸ್ಗಳು ಅವರ ಖಾತೆಗೆ ಸೇರ್ಪಡೆಯಾದರು.
ಮೊದಲ ವೀಡಿಯೊಗೆ ದೊರೆತ ಭಾರೀ ಪ್ರತಿಕ್ರಿಯೆಯ ಕೆಲವೇ ಗಂಟೆಗಳ ನಂತರ ಮೋದಿ ಮತ್ತೊಂದು ಸೆಲ್ಫಿ ವೀಡಿಯೊವನ್ನು ಹಂಚಿಕೊಂಡರು. ಈ ಬಾರಿ ಯಾವುದೇ ಹೊಸ ನೀತಿ ಘೋಷಣೆ ಮಾಡುವ ಬದಲು, ಮೊದಲ ವಿಡಿಯೊಕ್ಕೆ ಬಳಕೆದಾರರು ನೀಡಿದ ಅಭೂತಪೂರ್ವ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದರು. ಕೆಲವೇ ಗಂಟೆಗಳಲ್ಲಿ ದೊರೆತ ಅಪಾರ ಬೆಂಬಲವನ್ನು ಉಲ್ಲೇಖಿಸಿ, ಇನ್ಸ್ಟಾಗ್ರಾಂ ಬಳಕೆದಾರರೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಇದಾದ ಬಳಿಕ ಬಿಡುಗಡೆಯಾದ ಮೂರನೇ ಸೆಲ್ಫಿ ವಿಡಿಯೊದಲ್ಲೂ ಹೊಸ ಸ್ಥಳದಿಂದ ಮಾತನಾಡಿದ ಪ್ರಧಾನಿ ಮೋದಿ, ದೇಶದ ಪರೀಕ್ಷಾ ವ್ಯವಸ್ಥೆಯನ್ನು ಕುರಿತ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಪರೀಕ್ಷಾ ಸುಧಾರಣೆಗಾಗಿ ಉನ್ನತ ಮಟ್ಟದ ಕಾರ್ಯಪಡೆಯ ರಚನೆ ಮಾಡುವುದಾಗಿ ಘೋಷಿಸಿದರು. ಈ ಘೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಸೆಲ್ಫಿ ವಿಡಿಯೊಗಳ ಸರಣಿಗೆ ಹೊಸ ವೇಗ ನೀಡಿತು.
ಈ ಮೂರು ವೀಡಿಯೊಗಳ ಒಟ್ಟಾರೆ ಪರಿಣಾಮವಾಗಿ, ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರ ಇನ್ಸ್ಟಾಗ್ರಾಂ ಖಾತೆಗೆ ಸುಮಾರು 40 ಲಕ್ಷ ಹೊಸ ಫಾಲೋವರ್ಸ್ಗಳು ಸೇರ್ಪಡೆಯಾಗಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅವರ ಖಾತೆಯಲ್ಲಿ ದಾಖಲಾಗಿರುವ ಅತಿ ವೇಗದ ಫಾಲೋವರ್ಗಳ ಏರಿಕೆಯಾಗಿ ಇದು ಗಮನ ಸೆಳೆದಿದೆ.
ಈ ಬೆಳವಣಿಗೆ ರಾಜಕೀಯ ಸಂವಹನದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾಷಣಗಳು, ಪತ್ರಿಕಾಗೋಷ್ಠಿಗಳು ಅಥವಾ ದೂರದರ್ಶನದ ಮೂಲಕ ಮಾತ್ರವಲ್ಲದೆ, ಇನ್ಸ್ಟಾಗ್ರಾಂನಂತಹ ವೇದಿಕೆಗಳ ಮೂಲಕ ಜನರಿಗೆ ನೇರವಾಗಿ ಮಾಹಿತಿ ತಲುಪಿಸುವ ಪ್ರವೃತ್ತಿ ವಿಶ್ವದ ನಾಯಕರುಗಳಲ್ಲಿ ಹೆಚ್ಚುತ್ತಿದೆ.
ಪ್ರಧಾನಿ ಮೋದಿ ಅವರ ಡಿಜಿಟಲ್ ಸಂವಹನ ತಂತ್ರದಲ್ಲಿ ಈಗಾಗಲೇ ನಿಯಮಿತ ಪೋಸ್ಟ್ಗಳು, ವಿವಿಧ ಕಾರ್ಯಕ್ರಮಗಳ ಪ್ರಮುಖ ಕ್ಷಣಗಳು ಹಾಗೂ ಸಾರ್ವಜನಿಕ ಸಂದೇಶಗಳು ಪ್ರಮುಖ ಸ್ಥಾನ ಪಡೆದಿವೆ. ಇದೀಗ ಸೆಲ್ಫಿ ವೀಡಿಯೊಗಳು ಆ ತಂತ್ರಕ್ಕೆ ಹೊಸ ಸೇರ್ಪಡೆಯಾಗಿದ್ದು, ಸರ್ಕಾರದ ಅಧಿಕೃತ ಹಾಗೂ ಅಲಂಕೃತ ವೀಡಿಯೊಗಳಿಗಿಂತ ಹೆಚ್ಚು ಸಹಜ ಮತ್ತು ಜನಸಾಮಾನ್ಯರು ಬಳಸುವ ಇನ್ಸ್ಟಾಗ್ರಾಂ ಶೈಲಿಗೆ ಹತ್ತಿರವಾಗಿರುವುದರಿಂದ ಹೆಚ್ಚಿನ ಜನರನ್ನು ಆಕರ್ಷಿಸುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ