ಪಾಟ್ನಾ : ಊಟ ಬಡಿಸಲು ತಡವಾಯಿತು ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಮೈದುನನೇ (ಗಂಡನ ಸಹೋದರ) ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬಿಹಾರದ ಜಹಾನಾಬಾದ್ ಜಿಲ್ಲೆಯ ಪರ್ಸಾಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್ಪುರಾ ಇಮಾದ್ಪುರ ಗ್ರಾಮದಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ಮಹಿಳೆಯನ್ನು ಅನ್ಶುದೇವಿ ಎಂದು ಗುರುತಿಸಲಾಗಿದ್ದು, ಆಕೆಗೆ ಮದುವೆಯಾಗಿ ಕೇವಲ ಒಂದು ವರ್ಷ ಮಾತ್ರವಾಗಿತ್ತು. ಅನ್ಶು ಮೂಲತಃ ಅರ್ವಾಲ್ ಜಿಲ್ಲೆಯ ಮಾಣಿಕಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಪುರ ಗ್ರಾಮದ ನಿವಾಸಿ.
ಘಟನೆ ನಡೆದ ವೇಳೆ ಮನೆಯ ಇತರ ಸದಸ್ಯರು ಸಮೀಪದ ಹೊಲದಲ್ಲಿ ಭತ್ತ ನಾಟಿ ಕಾರ್ಯದಲ್ಲಿ ನಿರತರಾಗಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಕುನಾಲಕುಮಾರ ತನ್ನ ಅತ್ತಿಗೆ ಅನ್ಶುದೇವಿ ಅವರಿಗೆ ಊಟ ಬಡಿಸಲು ಹೇಳಿದ್ದಾನೆ. ಅವರು ಊಟ ತರಲು ಸ್ವಲ್ಪ ತಡವಾಯಿತು ಎಂಬ ಕಾರಣಕ್ಕೆ ಕುಪಿತಗೊಂಡ ಕುನಾಲಕುಮಾರ ಮೊದಲು ಅನ್ಶುವನ್ನು ನೆಲಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾನೆ. ಬಳಿಕ ಅಲ್ಲೇ ಇದ್ದ ಕೊಡಲಿಯಿಂದಮಾರಣಾಂತಿಕವಾಗಿ ದಾಳಿ ನಡೆಸಿ, ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ನಂತರ ಮನೆಯ ಮುಂದಿನ ಆಲದ ಮರಕ್ಕೆ ಮಹಿಳೆಯ ಕತ್ತರಿಸಿದ ತಲೆ ನೇತು ಹಾಕಿದ್ದಾನೆ ಎಂದು ಹೇಳಲಾಗಿದೆ.
ಆಲದ ಮರಕ್ಕೆ ಹೆಂಗಸಿನ ತಲೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾರ್ಸಾ ಬಿಘಾ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ತಲುಪಿತು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.
ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಆಯುಧದ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಪೊಲೀಸರು **ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita – BNS)ಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯ ನಿಖರ ಕಾರಣದ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ