ಶಿರಸಿ; ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಶಿರಸಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೆ ನೀರು ನಿಂತಿರುವುದರಿಂದ ವಾಹನ ಸಂಚಾರ ನಿಧಾನಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವ ಕಾರಣ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿರಸಿ ನಗರದ ಹಲವು ಬಡಾವಣೆಗಳು ಜಲಾವೃತ
ಶಿರಸಿ ನಗರದಲ್ಲಿ ಹಲವೆಡೆ ರಸ್ತೆಗಳು ನೀರಿನಿಂದ ಆವೃತಗೊಂಡ ಪರಿಣಾಮ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಕೋಟೆಕೆರೆ ಉಕ್ಕಿದ ಪರಿಣಾಮ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ನುಗ್ಗಿದೆ. ಸಮೃದ್ಧ ನಗರ, ಶ್ರೀಧರ ನಗರ, ಶ್ರೀರಾಮ ಕಾಲೋನಿ ಹಾಗೂ ಅಯ್ಯಪ್ಪ ನಗರ ಬಡಾವಣೆ ಮೊದಲಾದಡೆ ಮನೆಗಳು ಜಲಾವೃತವಾಗಿವೆ.
ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಯ ಬಹುತೇಕ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿದೆ. ಜಲಾವೃತಗೊಂಡ ರಸ್ತೆಗಳಲ್ಲಿ ವಾಹನ ಸವಾರರು ಮತ್ತು ಪಾದಾಚಾರಿಗಳು ಸಂಚರಿಸಲು ಪರದಾಡುತ್ತಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ನಿಂತಿವೆ.
ಶಿರಸಿ ನಗರವಷ್ಟೇ ಅಲ್ಲ, ತಾಲೂಕಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಗ್ರಾಮೀಣ ಪ್ರದೇಶಗಳ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಅಘನಾಶಿನಿ ಹಾಗೂ ಶಾಲ್ಮಲಾ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಹಾಗೂ ರಭಸವಾಗಿ ಹರಿಯುತ್ತಿವೆ. ನದಿ ತೀರದ ಜನರು ಅನಗತ್ಯವಾಗಿ ನದಿಯ ಸಮೀಪ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ