ಬಿಜೆಪಿಗೆ ಭಾರಿ ಶಾಕ್‌ ; ಉಪಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಸೋಲು ; ಪ್ರಶಾಂತ ಕಿಶೋರಗೆ ಗೆಲುವು

ಪಾಟ್ನಾ : ಜನ ಸುರಾಜ್ ಪಕ್ಷದ (JSP) ಸಂಸ್ಥಾಪಕ ಪ್ರಶಾಂತ ಕಿಶೋರ ಅವರು ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಶಾಕ್‌ ನೀಡಿದ್ದು, ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.
ಪ್ರಶಾಂತ ಕಿಶೋರ ಅವರು ಬಿಜೆಪಿ ಅಭ್ಯರ್ಥಿ ನೀರಜಕುಮಾರ ಅವರನ್ನು 18,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪ್ರಶಾಂತ ಕಿಶೋರ ಅವರು 59,213 ಮತಗಳನ್ನು ಪಡೆದುಕೊಂಡರೆ, ನೀರಜಕುಮಾರ 39,794 ಮತಗಳನ್ನು ಗಳಿಸಿದ್ದಾರೆ. ರಾಷ್ತ್ರೀಯ ಜನತಾ ದಳ (ಆರ್‌ಜೆಡಿ) ಅಭ್ಯರ್ಥಿ ರೇಖಾ ಕುಮಾರಿ 13,260 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

ಈ ಫಲಿತಾಂಶವು ಪ್ರಶಾಂತ ಕಿಶೋರ ಅವರು ತಾವು ಜನ ಸುರಾಜ್ ಪಕ್ಷವನ್ನು ಸ್ಥಾಪಿಸಿದ ಬಳಿಕ ನೇರವಾಗಿ ಸ್ಪರ್ಧಿಸಿದ ಮೊದಲ ಚುನಾವಣೆಯಾಗಿರುವುದರಿಂದ, ಬಿಹಾರದ ರಾಜಕೀಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಕಣವಾಗಿತ್ತು.ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಜುಲೈ 30ರಂದು ನಡೆದ ಮತದಾನದಲ್ಲಿ ಕೇವಲ 34.30%ರಷ್ಟು ಮಾತ್ರ ಮತದಾನವಾಗಿತ್ತು. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗಿದ್ದ 41.45 ಶೇಕಡಾ ಮತದಾನಕ್ಕಿಂತ ಏಳು ಶೇಕಡಕ್ಕೂ ಹೆಚ್ಚು ಕಡಿಮೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಬಂಕಿಪುರ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಉಪಚುನಾವಣೆ ಅನಿವಾರ್ಯವಾಯಿತು.

ಪ್ರಮುಖ ಸುದ್ದಿ :-   ಬಂಕಿಪುರದಲ್ಲಿ ಪ್ರಶಾಂತ ಕಿಶೋರ ಐತಿಹಾಸಿಕ ಗೆಲುವು : ಬಿಜೆಪಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಅದರ ಭದ್ರಕೋಟೆ ಭೇದಿಸಿದ್ದು ಹೇಗೆ ?

ನಿತಿನ್ ನಬೀನ್ ಅವರ ಪ್ರಾಬಲ್ಯ
ನಿತಿನ್ ನಬೀನ್ ಅವರು 2025ರ ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸತತ ಐದನೇ ಬಾರಿ ಬಂಕಿಪುರ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್‌ಜೆಡಿ ಅಭ್ಯರ್ಥಿ ರೇಖಾ ಗುಪ್ತಾ ಅವರನ್ನು 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯ ಉಪಚುನಾವಣೆಯಲ್ಲೂ ಆರ್‌ಜೆಡಿ ಮತ್ತೆ ರೇಖಾ ಗುಪ್ತಾ ಅವರನ್ನೇ ಕಣಕ್ಕಿಳಿಸಿತ್ತು.
1995ರಿಂದ, ಆಗ ಪಾಟ್ನಾ ವೆಸ್ಟ್ ಎಂದು ಕರೆಯಲ್ಪಡುತ್ತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿರಲಿಲ್ಲ. ಈ ಬಾರಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಬಿಜೆಪಿ ಮೊದಲಿಗೆ ಅಭಿಷೇಕಕುಮಾರ ಸಿನ್ಹಾ (ಬಂಟಿ) ಅವರನ್ನು ಕಣಕ್ಕಿಳಿಸಿತ್ತು. ಅವರೂ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ಆದರೆ ನಾಟಕೀಯ ತಿರುವಿನಲ್ಲಿ, ಪಕ್ಷವು ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ಯುವ ಮೋರ್ಚಾ ನಾಯಕ ನೀರಜಕುಮಾರ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಈ ಹಠಾತ್ ಬದಲಾವಣೆಯು ಪಾಟ್ನಾದಲ್ಲಿ ತೀವ್ರ ರಾಜಕೀಯ ಊಹಾಪೋಹಗಳಿಗೆ ಕಾರಣವಾಯಿತು. ಆದರೆ ಈಗ ಇಲ್ಲಿ ಪ್ರಶಾಂತ ಕಿಶೋರ ಅವರ ಗೆಲುವಿನೊಂದಿಗೆ ಬಿಜೆಪಿಯ ಹಲವು ದಶಕಗಳ ಪ್ರಾಬಲ್ಯ ಅಂತ್ಯಗೊಂಡಿದೆ.

2025ರ ಚುನಾವಣೆಯಲ್ಲಿ ಏನಾಗಿತ್ತು?
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತಿನ್ ನಬೀನ್ ಅವರು 98,299 ಮತಗಳನ್ನು ಪಡೆದು 62.66 ಶೇಕಡಾ ಮತ ಹಂಚಿಕೆಯನ್ನು ದಾಖಲಿಸಿದ್ದರು. ಆರ್‌ಜೆಡಿ ಅಭ್ಯರ್ಥಿ ರೇಖಾ ಕುಮಾರಿ 46,363 ಮತಗಳನ್ನು ಪಡೆದು 29.55 ಶೇಕಡಾ ಮತ ಹಂಚಿಕೆ ಗಳಿಸಿದ್ದರು. ಆಗ ನಬೀನ್ ಅವರು 51,000ಕ್ಕೂ ಹೆಚ್ಚು ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದು, ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲೇ ಅತಿದೊಡ್ಡ ಗೆಲುವುಗಳಲ್ಲಿ ಒಂದಾಗಿತ್ತು.
ಈ ಬಾರಿ ಆರ್‌ಜೆಡಿ ಮತಗಳ ಅಂತರವನ್ನು ಕಡಿಮೆ ಮಾಡಿ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೂ, ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಕಡಿಮೆ ಮತದಾನ
ಉಪಚುನಾವಣೆಯಲ್ಲಿ ಕೇವಲ 34 ಶೇಕಡಕ್ಕೂ ಹೆಚ್ಚು ಮತದಾನ ದಾಖಲಾಗಿದ್ದು, ಪ್ರಶಾಂತ ಕಿಶೋರ ಅವರ ಚುನಾವಣಾ ಚೊಚ್ಚಲ ಸ್ಪರ್ಧೆ ಹಾಗೂ ಬಿಜೆಪಿಯ ದಶಕಗಳ ಪ್ರಾಬಲ್ಯಕ್ಕೆ ಸವಾಲು ಎಂಬ ಕಾರಣಕ್ಕೆ ಈ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಚುನಾವಣಾ ಆಯೋಗದ ಪ್ರಕಾರ, ಅಂತಿಮ ಮತದಾನ ಪ್ರಮಾಣ 34.24 ಶೇಕಡಾ ದಾಖಲಾಗಿದ್ದು, ಕಳೆದ ನವೆಂಬರ್‌ನ ವಿಧಾನಸಭಾ ಚುನಾವಣೆಯ 41.45 ಶೇಕಡಾ ಮತದಾನಕ್ಕೆ ಹೋಲಿಸಿದರೆ ಏಳು ಶೇಕಡಕ್ಕೂ ಹೆಚ್ಚು ಕುಸಿತವಾಗಿದೆ.
ಪ್ರಶಾಂತ ಕಿಶೋರ ಅವರ ಈ ಗೆಲುವು ಬಿಹಾರದ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಪ್ರಮುಖ ಸುದ್ದಿ :-   ಅಪರಿಚಿತ ಬಂದೂಕುಧಾರಿಗಳಿಂದ ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆ' ; ಕ್ಯಾಮೆರಾ ಮುಂದೆಯೇ ಉಗ್ರನ ಒಪ್ಪಿಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement