ಪಣಜಿ: 2013ರಲ್ಲಿ ತಮ್ಮ ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ತೆಹಲ್ಕಾದ ಮಾಜಿ ಸಂಪಾದಕ ತರುಣ ತೇಜಪಾಲ್ ದೋಷಿ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್ನ ಗೋವಾ ಪೀಠವು ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಮೂಲಕ 2021ರಲ್ಲಿ ಮಪುಸಾ ವಿಚಾರಣಾ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದೆ.
ತೀರ್ಪು ಪ್ರಕಟಿಸಿದ ನ್ಯಾಯಾಲಯವು ತರುಣ ತೇಜಪಾಲ್ ಅವರಿಗೆ ಎರಡು ವಾರಗಳೊಳಗೆ ಶರಣಾಗುವಂತೆ ನಿರ್ದೇಶನ ನೀಡಿದೆ. ತೀರ್ಪಿನ ಬಳಿಕ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ತೇಜಪಾಲ್, ತಮ್ಮ ವಿರುದ್ಧದ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣವು 2013ರ ನವೆಂಬರ್ನಲ್ಲಿ ಗೋವಾದಲ್ಲಿ ನಡೆದ ಥಿಂಕ್ಫೆಸ್ಟ್ ಕಾರ್ಯಕ್ರಮದ ವೇಳೆ ಹೋಟೆಲ್ನ ಲಿಫ್ಟ್ನಲ್ಲಿ ತಮ್ಮ ಕಿರಿಯ ಮಹಿಳಾ ಸಹೋದ್ಯೋಗಿ ಮೇಲೆ ತೇಜಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.
ಈ ಪ್ರಕರಣದ ವಿಚಾರಣೆ 2017ರಲ್ಲಿ ಮಪುಸಾ ನ್ಯಾಯಾಲಯದಲ್ಲಿ ಆರಂಭವಾಗಿತ್ತು. ಬಳಿಕ 2021ರಲ್ಲಿ ವಿಚಾರಣಾ ನ್ಯಾಯಾಲಯ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮ್ಸಾಂದೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಉಭಯ ಪಕ್ಷಗಳ ಸುದೀರ್ಘ ವಾದ ಆಲಿಸಿದ ಬಳಿಕ ಗುರುವಾರ ತೀರ್ಪು ಪ್ರಕಟಿಸಿತು.
ರಾಜ್ಯ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದ ಖುಲಾಸೆ ತೀರ್ಪನ್ನು ರದ್ದುಗೊಳಿಸುವಂತೆ ಕೋರಿದರು. ತೇಜಪಾಲ್ ಪರವಾಗಿ ಹಿರಿಯ ವಕೀಲ ಅಬಾದ್ ಪೊಂಡಾ ವಾದ ಮಂಡಿಸಿದರು.
ಮೇಲ್ಮನವಿ ವಿಚಾರಣೆ ವೇಳೆ ತುಷಾರ್ ಮೆಹ್ತಾ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಹೇಗೆ ವರ್ತಿಸಬೇಕು ಎಂಬ ಪೂರ್ವಾಗ್ರಹಿತ ಕಲ್ಪನೆಗಳ ಆಧಾರದ ಮೇಲೆ ದೂರುದಾರೆಯ ವರ್ತನೆಯನ್ನು ವಿಚಾರಣಾ ನ್ಯಾಯಾಲಯ ಮೌಲ್ಯಮಾಪನ ಮಾಡಿರುವುದು ಗಂಭೀರ ದೋಷ ಎಂದು ವಾದಿಸಿದರು.
ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರ ಪ್ರತಿಕ್ರಿಯೆಗೆ ಯಾವುದೇ ಸಾರ್ವತ್ರಿಕ ಮಾನದಂಡ ಇರುವುದಿಲ್ಲ. ಪ್ರತಿಯೊಬ್ಬರ ಶಿಕ್ಷಣ, ವ್ಯಕ್ತಿತ್ವ, ಸಾಮಾಜಿಕ ಹಿನ್ನೆಲೆ ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ಅವರ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ತೀರ್ಪಿನ ಬಳಿಕ ತುಷಾರ್ ಮೆಹ್ತಾ, ತೇಜಪಾಲ್ ಅವರನ್ನು ಕೂಡಲೇ ಬಂಧಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. “ಸಂತ್ರಸ್ತೆ ತನ್ನ ಮಗಳ ವಯಸ್ಸಿನವರಾಗಿದ್ದರೂ ತೇಜಪಾಲ್ ಈ ಕೃತ್ಯ ಎಸಗಿದ್ದಾರೆ. ಅವರು ಸಂತ್ರಸ್ತೆಗೆ ತಂದೆಯ ಸಮಾನ ವ್ಯಕ್ತಿಯಾಗಿದ್ದರು. ಇಂತಹ ಕೃತ್ಯದಲ್ಲಿ ತೊಡಗಬಾರದಿತ್ತು. ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ಅಗತ್ಯವಿದೆ ಎಂದು ಅವರು ವಾದಿಸಿದರು.
ದೋಷಿ ಎಂದು ಘೋಷಿಸಿದ ಬಳಿಕ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ತರುಣ ತೇಜ್ಪಾಲ್, “ನನಗೆ ಈಗ 62 ವರ್ಷ ವಯಸ್ಸಾಗಿದೆ. ನಾನು ಈ ಪ್ರಕರಣದಲ್ಲಿ ಬಲಿಪಶುವಾಗಿದ್ದೇನೆ ಎಂದು ನಂಬಿದ್ದೇನೆ. ನನಗೆ ಪತ್ನಿ ಇದ್ದಾರೆ. ಹೇಳಲು ಹೆಚ್ಚಿನದೇನೂ ಇಲ್ಲ. ನಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ದಯವಿಟ್ಟು ನನ್ನ ಬಗ್ಗೆ ಸಹಾನುಭೂತಿ ತೋರಿಸಿ. ಉಳಿದ ಎಲ್ಲಾ ವಿಚಾರಗಳು ನ್ಯಾಯಾಲಯದ ದಾಖಲೆಗಳಲ್ಲಿ ಇವೆ” ಎಂದು ಶಿಕ್ಷೆಯಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ