5 ವರ್ಷದಲ್ಲಿ ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ 32.42% ಹೆಚ್ಚಳ ; ಆದ್ರೆ ಉತ್ಪಾದನೆ, ಉತ್ಪಾದಕತೆಯಲ್ಲಿ ಭಾರಿ ಕುಸಿತ..!

ನವದೆಹಲಿ : ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಅಡಿಕೆ ಬೆಳೆ ವಿಸ್ತೀರ್ಣವು ಶೇ.30.25ರಷ್ಟು ಹೆಚ್ಚಳ ಕಂಡಿದ್ದರೂ, ಉತ್ಪಾದನೆ ಮಾತ್ರ ಶೇ.8.22ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮನಾಥ ಠಾಕೂರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಅವರು ನೀಡಿದ ಮಾಹಿತಿ ಪ್ರಕಾರ, 2021-22ರಲ್ಲಿ ದೇಶದಲ್ಲಿ ಅಡಿಕೆ ಬೆಳೆ 8.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. 2025-26ರ ಎರಡನೇ ಮುಂಗಡ ಅಂದಾಜಿನಂತೆ ಈ ವಿಸ್ತೀರ್ಣ 11.06 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಅಡಿಕೆ ಉತ್ಪಾದನೆ 16.66 ಲಕ್ಷ ಟನ್‌ನಿಂದ 15.29 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಉತ್ಪಾದಕತೆ ಕುಸಿತವೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಪ್ರತಿ ಹೆಕ್ಟೇರ್‌ಗೆ 1.96 ಟನ್ ಇದ್ದ ಉತ್ಪಾದಕತೆ 1.38 ಟನ್‌ಗೆ ಇಳಿದಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಗ್ರಸ್ಥಾನದಲ್ಲಿರುವ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಇಳಿಕೆ
ಅಡಿಕೆ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆ ಎರಡರಲ್ಲೂ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ದೇಶದ ಒಟ್ಟು ಅಡಿಕೆ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಶೇ.71.56 ಇದ್ದರೆ, ಒಟ್ಟು ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.75.47 ಆಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಶೇ.32.42ರಷ್ಟು ಹೆಚ್ಚಳ ಕಂಡಿದೆ. ಆದರೆ ಪ್ರತಿ ಹೆಕ್ಟೇರ್ ಉತ್ಪಾದಕತೆ ಶೇ.37ರಷ್ಟು ಕುಸಿದಿದೆ. 2021-22ರಲ್ಲಿ 6.03 ಲಕ್ಷ ಹೆಕ್ಟೇರ್ ಇದ್ದ ವಿಸ್ತೀರ್ಣವು 2025-26ರ ಎರಡನೇ ಮುಂಗಡ ಅಂದಾಜಿನಂತೆ 7.98 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ.
ಆದರೆ ಉತ್ಪಾದನೆ 13.48 ಲಕ್ಷ ಟನ್‌ನಿಂದ 11.32 ಲಕ್ಷ ಟನ್‌ಗೆ ಇಳಿಕೆಯಾಗಿದ್ದು, ಇದು ಶೇ.16.05ರಷ್ಟು ಕುಸಿತವಾಗಿದೆ. ಉತ್ಪಾದಕತೆಯೂ ಪ್ರತಿ ಹೆಕ್ಟೇರ್‌ಗೆ 2.24 ಟನ್‌ನಿಂದ 1.42 ಟನ್‌ಗೆ ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡುʼ ; ರಾಘವೇಂದ್ರ ಮಠದ ಹುಂಡಿಯಲ್ಲಿ ವಿಚಿತ್ರ ಪತ್ರ ಪತ್ತೆ

ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮುದಾಯ ಆಧಾರಿತ ಯೋಜನೆ
ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ ರೋಗ (Leaf Spot Disease–LSD) ನಿಯಂತ್ರಣಕ್ಕಾಗಿ ಸಮುದಾಯ ಆಧಾರಿತ ನಿರ್ವಹಣಾ ಕಾರ್ಯಕ್ರಮವನ್ನು 2025-26ರಿಂದ ಕರ್ನಾಟಕದ ರೋಗಬಾಧಿತ 10 ಅಡಿಕೆ ಬೆಳೆಯುವ ತಾಲ್ಲೂಕುಗಳಲ್ಲಿ ಅಡಿಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ (DASD) ಆರಂಭಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಆಯ್ದ ರೈತರ ತೋಟಗಳಲ್ಲಿ ತಲಾ 5 ಹೆಕ್ಟೇರ್‌ನಂತೆ ಒಟ್ಟು 50 ಹೆಕ್ಟೇರ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಶಿಫಾರಸು ಮಾಡಿರುವ ವೈಜ್ಞಾನಿಕ ಕ್ರಮಗಳನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ.
ಈ ಯೋಜನೆಗೆ ಮೂರು ವರ್ಷಗಳ ಅವಧಿಗೆ ₹6.32 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ರೋಗ ಮುನ್ಸೂಚನೆಗೆ ಹವಾಮಾನ ಅಧ್ಯಯನ
ಎಲೆಚುಕ್ಕೆ ರೋಗದ ಮುನ್ಸೂಚನೆ ನೀಡುವ ಉದ್ದೇಶದಿಂದ ಹವಾಮಾನ ಮತ್ತು ರೋಗದ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI)ಗೆ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆ ನಿಯಂತ್ರಕ (Temperature and Relative Humidity Controller Unit) ಘಟಕವನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಡಿಕೆ ಮೌಲ್ಯ ಸರಪಳಿ ಕುರಿತು ಪ್ರಾಯೋಗಿಕ ಅಧ್ಯಯನ
ಅಡಿಕೆ ಕ್ಷೇತ್ರದಲ್ಲಿನ ಪ್ರಸ್ತುತ ಮೌಲ್ಯ ಸರಪಳಿಯನ್ನು ಅರ್ಥಮಾಡಿಕೊಳ್ಳಲು, ಅಡಿಕೆ ಹಾಗೂ ಅದರ ಉತ್ಪನ್ನಗಳ ಬಳಕೆ ಮಾದರಿ ಮತ್ತು ವಿತರಣಾ ವ್ಯವಸ್ಥೆಯನ್ನು ವಿಶ್ಲೇಷಿಸಲು ಅಡಿಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯವು (DASD), ಐಸಿಎಆರ್-ಸಿಪಿಸಿಆರ್‌ಐ (ICAR-CPCRI) ಸಹಯೋಗದಲ್ಲಿ ಅಡಿಕೆ ಮೌಲ್ಯ ಸರಪಳಿ ಕುರಿತು ಪ್ರಾಯೋಗಿಕ ಅಧ್ಯಯನವನ್ನು ನಡೆಸುತ್ತಿದೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಬಸ್‌ನಲ್ಲೇ ಮಹಿಳೆಗೆ ಹೃದಯಾಘಾತ ; ನೇರ ಆಸ್ಪತ್ರೆಗೆ ಬಸ್‌ ಚಲಾಯಿಸಿಕೊಂಡು ಬಂದು ಸಮಯಪ್ರಜ್ಞೆ ಮೆರೆದ ಚಾಲಕ

ರೋಗ ಮತ್ತು ಹವಾಮಾನ ವೈಪರೀತ್ಯ ಅಡಿಕೆ ಉತ್ಪಾದನೆ ಕುಂಠಿತಕ್ಕೆ ಪ್ರಮುಖ ಕಾರಣ
ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಹಳದಿ ಎಲೆ ರೋಗ (Yellow Leaf Disease), ಕೊಳೆರೋಗ (Fruit Rot) ಹಾಗೂ ಎಲೆಚುಕ್ಕೆ ರೋಗ (Leaf Spot Disease) ಅಡಿಕೆ ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ ಅನಿಯಮಿತ ಮುಂಗಾರು, ಅಸಮರ್ಪಕ ಮಳೆ ಹಾಗೂ ಹವಾಮಾನ ಬದಲಾವಣೆಗಳು ಬೆಳೆ ಬೆಳವಣಿಗೆಯನ್ನು ಹಾನಿಗೊಳಿಸಿವೆ.
ಈ ಪರಿಸ್ಥಿತಿಯಿಂದ ಅಡಿಕೆ ಬೆಳೆಯನ್ನು ಅವಲಂಬಿಸಿರುವ ಸಣ್ಣ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ವೆಚ್ಚವನ್ನು ಹೆಚ್ಚಿಸಿದ್ದು, ಇದೇ ವೇಳೆ ಉತ್ಪಾದನೆಯನ್ನು ಕಡಿಮೆ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement