ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದ ತೀವ್ರಗೊಂಡಿರುವ ನಡುವೆಯೇ, ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 12,000 ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮಂಗಳವಾರ ನಿರ್ದೇಶನ ನೀಡಿದೆ.
ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಅಧ್ಯಕ್ಷ ವಿನೀತ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ. ಇದೇ ವೇಳೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ (CWMA) ಸಭೆ ಮಂಗಳವಾರದಂದೇ ನಂತರ ನಡೆಯಲಿದೆ.
ಈ ಹಿಂದೆ ಕೂಡ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಜುಲೈ 28ರಂದು ನಡೆದ ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆಯಲ್ಲಿ, ಜುಲೈ 29ರಿಂದ 15 ದಿನಗಳ ಕಾಲ ಬಿಳಿಗುಂಡ್ಲು ಪ್ರದೇಶದಲ್ಲಿ 3,500 ಕ್ಯುಸೆಕ್ ನೀರಿನ ಹರಿವು ಖಚಿತಪಡಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿತ್ತು.
ನಂತರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಕೂಡ ಈ ಆದೇಶವನ್ನು ಎತ್ತಿಹಿಡಿದು, ಅದನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಆದರೆ, ನಿಗದಿಪಡಿಸಿದ ಪ್ರಮಾಣದ ನೀರನ್ನು ಕರ್ನಾಟಕ ಹರಿಸಿಲ್ಲ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.
ಈ ಬೆಳವಣಿಗೆಯ ನಡುವೆಯೇ ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ನಡೆಸುತ್ತಿರುವ ಕಾನೂನು ಹೋರಾಟವೂ ಮುಂದುವರಿದಿದೆ. ಕರ್ನಾಟಕದಿಂದ ತನ್ನ ಪಾಲಿನ ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಆಗಸ್ಟ್ 13ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ