ಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿ

ಬೆಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರಗೊಂಡಿರುವ ಬೆನ್ನಲ್ಲೇ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಂಟೀನ್‌ಗಳು, ಕ್ಯಾಟರಿಂಗ್‌ ಸಂಸ್ಥೆಗಳು, ಧಾಬಾಗಳು ಸೇರಿದಂತೆ ಎಲ್ಲ ಆಹಾರ ಉದ್ಯಮಗಳಿಗೆ 12 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಆಗಸ್ಟ್‌ 11ರಂದು ಹೊರಡಿಸಿರುವ ಈ ಸುತ್ತೋಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2011 ಹಾಗೂ ಎಫ್‌ಎಸ್‌ಎಸ್‌ಎಐ (FSSAI) ನಿಯಮಾವಳಿಗಳ ಅನ್ವಯ ಆಹಾರ ತಯಾರಿಕೆ, ಸಂಗ್ರಹಣೆ, ಸಾಗಣೆ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಕೆಲವು ಪ್ರತಿಷ್ಠಿತ ಪಂಚತಾರಾ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ನಡೆದ ತಪಾಸಣೆ ವೇಳೆ ಅವಧಿ ಮೀರಿದ ಹಾಲು, ಕೊಳೆತ ಮಾಂಸ ಹಾಗೂ ಶಿಲೀಂಧ್ರ ಬೆಳೆದ ತರಕಾರಿಗಳು ಪತ್ತೆಯಾಗಿದ್ದವು. ಬೆಂಗಳೂರು ನಗರದ ಕೆಲವು ಹೈ-ಎಂಡ್‌ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಳು ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಹೊಸ ಮಾರ್ಗಸೂಚಿ ಹೊರಬಿದ್ದಿದೆ.

ಆಯುಕ್ತರ 12 ಅಂಶಗಳ ಮಾರ್ಗಸೂಚಿ
1. ಆವರಣದ ಸ್ವಚ್ಛತೆಗೆ ಆದ್ಯತೆ:
ಆಹಾರ ತಯಾರಿಸುವ ಸ್ಥಳಗಳು ಸ್ವಚ್ಛ, ನೈರ್ಮಲ್ಯಯುತ ಹಾಗೂ ಸಮರ್ಪಕವಾಗಿ ನಿರ್ವಹಿಸಲ್ಪಟ್ಟಿರಬೇಕು. ಆಹಾರದ ಸಂಪರ್ಕಕ್ಕೆ ಬರುವ ಮೇಲ್ಮೈಗಳು, ಪಾತ್ರೆಗಳು ಹಾಗೂ ಉಪಕರಣಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
2. ಆಹಾರ ನಿರ್ವಹಿಸುವ ಸಿಬ್ಬಂದಿಗೆ ವೈಯಕ್ತಿಕ ಸ್ವಚ್ಛತೆ ಕಡ್ಡಾಯ:
ಆಹಾರ ತಯಾರಿಸುವ ಮತ್ತು ನಿರ್ವಹಿಸುವ ಸಿಬ್ಬಂದಿ ಸ್ವಚ್ಛವಾದ ಸಮವಸ್ತ್ರ, ತಲೆ ಮುಚ್ಚುವ ಹೆಡ್‌ಗಿಯರ್‌ ಹಾಗೂ ಕೈಗವಸುಗಳನ್ನು ಧರಿಸಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
3. ಗುಣಮಟ್ಟದ ಕಚ್ಚಾ ವಸ್ತುಗಳ ಬಳಕೆ:
ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನಷ್ಟೇ ಆಹಾರ ತಯಾರಿಕೆಗೆ ಬಳಸಬೇಕು. ಪದಾರ್ಥಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಳದಲ್ಲಿ ಸಂಗ್ರಹಿಸಬೇಕು. ಅವಧಿ ಮೀರಿದ ಮತ್ತು ಗುಣಮಟ್ಟ ಕಳೆದುಕೊಂಡ ಪದಾರ್ಥಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಆಹಾರ ಪದಾರ್ಥಗಳಿಗೆ ಸೂಕ್ತ ಲೇಬಲ್‌ ಅಂಟಿಸಿ, ಸರಿಯಾದ ರೀತಿಯಲ್ಲಿ ಸಂಗ್ರಹಿಸಬೇಕು.
4. ಕಚ್ಚಾ ಮತ್ತು ಬೇಯಿಸಿದ ಆಹಾರ ಪ್ರತ್ಯೇಕವಾಗಿರಲಿ:
ಆಹಾರವನ್ನು ನೈರ್ಮಲ್ಯಯುತವಾಗಿ ತಯಾರಿಸಬೇಕು. ಕಚ್ಚಾ ಆಹಾರ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಇಟ್ಟು, ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ, ತಣ್ಣನೆಯ ಆಹಾರವನ್ನು 4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಹಾಗೂ ಘನೀಕೃತ ಆಹಾರವನ್ನು ಮೈನಸ್‌ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ; ಇಬ್ಬರು ಸಾವು

ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕವಾಗಿ ತಯಾರಿಸಬೇಕು. ಇದಕ್ಕಾಗಿ ಪ್ರತ್ಯೇಕ ಕತ್ತರಿಸುವ ಹಲಗೆಗಳು, ಚಾಕುಗಳು ಹಾಗೂ ಇತರು ಉಪಕರಣಗಳನ್ನು ಬಳಸಬೇಕು. ಸಸ್ಯಾಹಾರಕ್ಕೆ ಪ್ರತ್ಯೇಕ ಪಾತ್ರೆಗಳು ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಪಾತ್ರೆಗಳನ್ನು ಬಳಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

5. ಆಹಾರ ನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ತಪಾಸಣೆ:
ಆಹಾರ ನಿರ್ವಹಿಸುವ ಸಿಬ್ಬಂದಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿ ಆಹಾರ ನಿರ್ವಹಿಸದಂತೆ ನೋಡಿಕೊಳ್ಳಬೇಕು. ಆಗಾಗ್ಗೆ ಕೈತೊಳೆಯುವ ವ್ಯವಸ್ಥೆ ಹಾಗೂ ಅಭ್ಯಾಸವನ್ನು ಪಾಲಿಸಬೇಕು. ಅಲ್ಲದೆ, FoSTaC ಪ್ರಮಾಣೀಕರಣ ಹೊಂದಿರುವ ಆಹಾರ ಸುರಕ್ಷತಾ ಮೇಲ್ವಿಚಾರಕರನ್ನು (Food Safety Supervisor) ನೇಮಿಸಬೇಕು.
6. ಆಹಾರ ಸಾಗಣೆ ವಾಹನಗಳಿಗೂ ನಿಯಮ:
ಆಹಾರ ಸಾಗಿಸುವ ವಾಹನಗಳು ಸ್ವಚ್ಛವಾಗಿದ್ದು, ಮುಚ್ಚಿದ ಸ್ಥಿತಿಯಲ್ಲಿರಬೇಕು. ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಸಾಧ್ಯವಾದಷ್ಟು ಪ್ರತ್ಯೇಕ ವಾಹನಗಳಲ್ಲಿ ಸಾಗಿಸಬೇಕು. ಸಾಗಣೆ ಸಂದರ್ಭದಲ್ಲಿ ಅಗತ್ಯ ತಾಪಮಾನವನ್ನು ಕಾಪಾಡಿಕೊಳ್ಳಬೇಕು.
7. ಕುಡಿಯಲು ಯೋಗ್ಯವಾದ ನೀರನ್ನೇ ಬಳಸಬೇಕು:
ಅಡುಗೆ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಕುಡಿಯಲು ಯೋಗ್ಯವಾಗಿರುವ, ಅನುಮೋದಿತ ನೀರನ್ನಷ್ಟೇ ಬಳಸಬೇಕು. ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ನೀರನ್ನು ಪರೀಕ್ಷಿಸಬೇಕು.
8. ಶೌಚಾಲಯ ಹಾಗೂ ಕೈತೊಳೆಯುವ ವ್ಯವಸ್ಥೆ:
ಸಿಬ್ಬಂದಿ ಮತ್ತು ಗ್ರಾಹಕರಿಗಾಗಿ ಸ್ವಚ್ಛವಾದ ಶೌಚಾಲಯಗಳನ್ನು ಒದಗಿಸಬೇಕು. ಶೌಚಾಲಯಗಳಲ್ಲಿ ಸಮರ್ಪಕ ಕೈತೊಳೆಯುವ ಸೌಲಭ್ಯ ಕಡ್ಡಾಯವಾಗಿ ಇರಬೇಕು.

9. ಕೀಟ ನಿಯಂತ್ರಣ:
ಆಹಾರ ತಯಾರಿಕಾ ಹಾಗೂ ಸಂಗ್ರಹಣಾ ಸ್ಥಳಗಳು ಕೀಟಗಳಿಂದ ಮುಕ್ತವಾಗಿರಬೇಕು. ನಿಯಮಿತವಾಗಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
10. ತ್ಯಾಜ್ಯ ನಿರ್ವಹಣೆಯಲ್ಲಿ ಕಟ್ಟುನಿಟ್ಟು:
ತ್ಯಾಜ್ಯ ಸಂಗ್ರಹಿಸುವ ಕಸದ ಬುಟ್ಟಿಗಳು ಮುಚ್ಚಳ ಹೊಂದಿರಬೇಕು ಮತ್ತು ಅವುಗಳನ್ನು ನಿಯಮಿತವಾಗಿ ಖಾಲಿ ಮಾಡಬೇಕು. ಎಲ್ಲಿಯೂ ತೆರೆದ ಸ್ಥಳದಲ್ಲಿ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಲಾಗಿದೆ. ತ್ಯಾಜ್ಯವನ್ನು ಅಧಿಕೃತ ಸಂಸ್ಥೆಗಳ ಮೂಲಕವೇ ವಿಲೇವಾರಿ ಮಾಡಬೇಕು.
11. ಅಡ್ಡ ಮಾಲಿನ್ಯ ತಡೆ, ಅಲರ್ಜಿ ಮಾಹಿತಿ ಕಡ್ಡಾಯ:
ಕಚ್ಚಾ ಮತ್ತು ಬೇಯಿಸಿದ ಆಹಾರದ ನಡುವೆ ಅಡ್ಡ ಮಾಲಿನ್ಯವಾಗದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು. ಆಹಾರದಲ್ಲಿ ಶಿಲೀಂಧ್ರ ಬೆಳವಣಿಗೆ ಕಂಡುಬಂದರೆ ಅಂತಹ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಆಹಾರದಲ್ಲಿರುವ ಅಲರ್ಜಿನ್‌ಗಳ ವಿವರಗಳನ್ನು ಪ್ರದರ್ಶಿಸಬೇಕು. ಪೌಷ್ಟಿಕಾಂಶದ ಮಾಹಿತಿಯನ್ನೂ ನೀಡಬೇಕು.
12. ಬಳಸಿದ ಅಡುಗೆ ಎಣ್ಣೆ ಮರುಬಳಕೆ ಬೇಡ:
ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಬಾರದು. ಬಳಸಿದ ಎಣ್ಣೆಯನ್ನು ಅಧಿಕೃತ ಸಂಸ್ಥೆಗಳ ಮೂಲಕವೇ ವಿಲೇವಾರಿ ಮಾಡಬೇಕು.
ಉಲ್ಲಂಘಿಸಿದರೆ ಕಾನೂನು ಕ್ರಮ
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
“ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಂಟೀನ್‌ಗಳು ಹಾಗೂ ಕ್ಯಾಟರಿಂಗ್‌ ಘಟಕಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವುದು, ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಸಂಸ್ಥೆಗಳನ್ನು ಮುಚ್ಚುವ ಕ್ರಮಕ್ಕೂ ಮುಂದಾಗಲಾಗುವುದು,” ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಈ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅವುಗಳ ಅನುಷ್ಠಾನ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಶಿವಂ ಅಸೋಸಿಯೇಟ್ಸ್‌ ಮೇಲೆ ಇ.ಡಿ. ದಾಳಿ : ₹1,777 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement