ಕೆಲವರನ್ನೇ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಯಾಕೆ ? ಅಧ್ಯಯನದಲ್ಲಿ ಕಾರಣಗಳು ಬಹಿರಂಗ…

 ಮನೆ ಸುತ್ತಮುತ್ತ ಮಾತ್ರವಲ್ಲ, ಜಗತ್ತಿನ ಯಾವುದೇ ಭಾಗಕ್ಕೆ ಪ್ರವಾಸ ಹೋದರೂ ಕೆಲವರನ್ನು ಸೊಳ್ಳೆಗಳು ಬಿಡುವುದೇ ಇಲ್ಲ. ಕೆಲವರಿಗೆ ಒಂದು ಸೊಳ್ಳೆ ಕಚ್ಚಿದರೂ ಸಾಕು, ದೊಡ್ಡದಾಗಿ ಊದಿಕೊಂಡು ತೀವ್ರವಾಗಿ ತುರಿಸುವ ಗುಳ್ಳೆಗಳು ಕಾಣಿಸಿಕೊಂಡು ವಾರಗಳ ಕಾಲ ಕಾಡುತ್ತವೆ. ಆದರೆ ಅವರ ಜೊತೆಯಲ್ಲಿರುವ ಕೆಲವರಿಗೆ ಸೊಳ್ಳೆ ಕಚ್ಚಿದರೂ ಯಾವುದೇ ಗುರುತು ಕಾಣಿಸುವುದಿಲ್ಲ. ಇನ್ನೂ ಕೆಲವರಿಗೆ ಕೇವಲ ಸಣ್ಣ ಕೆಂಪು ಚುಕ್ಕೆ ಮಾತ್ರ ಉಳಿಯುತ್ತದೆ. ಹಾಗಾದರೆ ಸೊಳ್ಳೆಗಳು ಕೆಲವರನ್ನು ಮಾತ್ರ ಹೆಚ್ಚು ಕಚ್ಚುತ್ತವೆ ಯಾಕೆ..? ಕೆಲವರಿಗೆ ಮಾತ್ರಸೊಳ್ಳೆಗಳು ಕಚ್ಚಿದರೆ ಆ ಭಾಗದಲ್ಲಿ ಗುಳ್ಳೆಯಾಗುತ್ತದೆ ಯಾಕೆ..?
ವಿಜ್ಞಾನಿಗಳ ಪ್ರಕಾರ, ಇದಕ್ಕೆ ಒಂದೇ ಕಾರಣವಿಲ್ಲ. ಇದಕ್ಕೆ ಹಲವು ಅಂಶಗಳು ಕಾರಣವಾಗಿದೆ. ನಮ್ಮ ದೇಹದಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್ (CO₂), ದೇಹದ ಉಷ್ಣತೆ, ಬೆವರು, ಚರ್ಮದ ವಾಸನೆ, ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳು ಮತ್ತು ಕೆಲವು ವಂಶವಾಹಿನಿ ಅಂಶಗಳು ಸೊಳ್ಳೆಗಳಿಗೆ ನಾವು ಎಷ್ಟು ಆಕರ್ಷಕವಾಗುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ.
ಉಸಿರಿನಿಂದಲೇ ಸೊಳ್ಳೆಗೆ ಸುಳಿವು ಸಿಗುತ್ತದೆ
ಮಾನವರನ್ನು ಕಚ್ಚುವುದು ಹೆಣ್ಣು ಸೊಳ್ಳೆಗಳು. ಅವುಗಳಿಗೆ ತಮ್ಮ ಮೊಟ್ಟೆಗಳನ್ನು ಬೆಳೆಸಲು ಅಗತ್ಯವಿರುವ ಪ್ರೋಟೀನ್‌ಗಾಗಿ ಅವು ರಕ್ತವನ್ನು ಸೇವಿಸುತ್ತವೆ. ಸೊಳ್ಳೆಗಳು ಸುಮಾರು 10 ಮೀಟರ್ ದೂರದಿಂದಲೇ ಮನುಷ್ಯರನ್ನು ಗುರುತಿಸಲು ಆರಂಭಿಸಬಹುದು. ಇದಕ್ಕಾಗಿ ಅವು ದೃಷ್ಟಿ ಮತ್ತು ವಾಸನೆಯ ಜೊತೆಗೆ ದೇಹದಿಂದ ಹೊರಬರುವ ಹಲವು ಸಂಕೇತಗಳನ್ನು ಬಳಸುತ್ತವೆ.
ಅದರಲ್ಲೂ ಪ್ರಮುಖವಾದದ್ದು ನಾವು ಉಸಿರಾಡುವಾಗ ಹೊರಬಿಡುವ ಕಾರ್ಬನ್ ಡೈಆಕ್ಸೈಡ್. ಮನುಷ್ಯನ ಉಸಿರಿನಿಂದ ಹೊರಬರುವ CO₂ ಸೊಳ್ಳೆಗಳ ಘ್ರಾಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ, ಆಹಾರಕ್ಕಾಗಿ ನಮ್ಮನ್ನು ಹುಡುಕುವಂತೆ ಮಾಡುತ್ತದೆ.
ವಯಸ್ಕರು ಸಾಮಾನ್ಯವಾಗಿ ಮಕ್ಕಳಿಗಿಂತ ಹೆಚ್ಚು CO₂ ಹೊರಬಿಡುವುದರಿಂದ ಸೊಳ್ಳೆಗಳಿಗೆ ಅವರತ್ತ ಹೆಚ್ಚು ಆಕರ್ಷಣೆ ಉಂಟಾಗಬಹುದು. ಮನುಷ್ಯರಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್ (CO₂) ಮಾತ್ರವಲ್ಲ, ಇತರ ಮೂಲಗಳಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್ (CO₂)  ಕೂಡ ಸೊಳ್ಳೆಗಳನ್ನು ಸೆಳೆಯುತ್ತದೆ. ಇದೇ ಕಾರಣಕ್ಕೆ ಒಣಹಿಮ ಅಥವಾ CO₂ ಅನ್ನು ಸೊಳ್ಳೆ ಬಲೆಗಳಲ್ಲಿ ಬಳಸಲಾಗುತ್ತದೆ.
ಒಂದೇ ಜಾಗದಲ್ಲಿ ನಾಲ್ವರು ವ್ಯಕ್ತಿಗಳಿದ್ದರೆ, ಅವರಲ್ಲಿ ಒಬ್ಬರೇ ಸುಮಾರು 90% ಸೊಳ್ಳೆ ಕಡಿತಕ್ಕೆ ಒಳಗಾಗುವ ಸಾಧ್ಯತೆ ಇರಬಹುದು ಎಂದು ವೈದ್ಯಕೀಯ ಕೀಟಶಾಸ್ತ್ರ ತಜ್ಞ ಹೆದರ್ ಫರ್ಗುಸನ್ ಹೇಳಿದ್ದಾರೆ.
ದೇಹ ಬಿಸಿಯಾದಷ್ಟೂ ಸೊಳ್ಳೆಯ ಗಮನ ಹೆಚ್ಚು ಸೆಳೆಯುತ್ತದೆ…
ಕೇವಲ ಕಾರ್ಬನ್ ಡೈಆಕ್ಸೈಡ್ (CO₂) ಮಾತ್ರವಲ್ಲ, ದೇಹದ ಉಷ್ಣತೆ ಮತ್ತು ತೇವಾಂಶವೂ ಸೊಳ್ಳೆಗಳನ್ನು ಸೆಳೆಯುತ್ತವೆ. ಕಾರ್ಬನ್ ಡೈಆಕ್ಸೈಡ್ (CO₂) ಇರುವಿಕೆ ಸೊಳ್ಳೆಗಳಿಗೆ ದೇಹದ ಉಷ್ಣತೆಯತ್ತ ಇರುವ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.
ಇದಕ್ಕೆ ಗರ್ಭಿಣಿಯರು ಒಂದು ಉದಾಹರಣೆ. ಕೆಲವು ಅಧ್ಯಯನಗಳ ಪ್ರಕಾರ, ಗರ್ಭಿಣಿಯರು ಗರ್ಭಿಣಿಯರಲ್ಲದ ಮಹಿಳೆಯರಿಗಿಂತ ಸೊಳ್ಳೆಗಳಿಗೆ ಸುಮಾರು ಎರಡು ಪಟ್ಟು ಹೆಚ್ಚು ಆಕರ್ಷಕರಾಗಿರಬಹುದು ಅಂದರೆ ಗರಭಿಣಿಯರು ಎರಡು ಪಟ್ಟು ಹೆಚ್ಚು ಸೊಳ್ಳೆಗಳನ್ನು ಸೆಳೆಯಬಹುದು. ಗರ್ಭಾವಸ್ಥೆಯಲ್ಲಿ ದೇಹದ ಚಯಾಪಚಯದ ಬೇಡಿಕೆ ಹೆಚ್ಚುತ್ತದೆ. ಉಸಿರಾಟದ ಪ್ರಮಾಣವೂ ಹೆಚ್ಚಾಗುವುದರಿಂದ ಕಾರ್ಬನ್ ಡೈಆಕ್ಸೈಡ್ (CO₂) ಹೊರಸೂಸುವಿಕೆ ಹೆಚ್ಚಬಹುದು. ದೇಹದ ಉಷ್ಣತೆಯಲ್ಲಿಯೂ ಬದಲಾವಣೆ ಉಂಟಾಗಬಹುದು. ಈ ಕಾರಣಕ್ಕೆ ಸೊಳ್ಳೆಗಳು ಗರ್ಭಿಣಿಯರತ್ತ ಹೆಚ್ಚು ಆಕರ್ಷಿತವಾಗುತ್ತವೆ.
ಬ್ರಿಟನ್‌ನ ಡರ್ಹಮ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕೀಟಶಾಸ್ತ್ರ ಪ್ರಾಧ್ಯಾಪಕ ಸ್ಟೀವ್ ಲಿಂಡ್ಸೇ ಅವರ ಪ್ರಕಾರ, ಗರ್ಭಾವಸ್ಥೆಯಲ್ಲಿ ದೇಹದ ಚಯಾಪಚಯ ಹೆಚ್ಚಾಗುವುದರಿಂದ ದೇಹವು ಒಂದು ಸಣ್ಣ “ಕುಲುಮೆ”ಯಂತೆ ಹೆಚ್ಚು ಉಷ್ಣತೆ ಉತ್ಪಾದಿಸಬಹುದು.
ವ್ಯಾಯಾಮ ಮಾಡಿದ ಬಳಿಕ ಸೊಳ್ಳೆಗಳು ಏಕೆ ಹೆಚ್ಚು ಕಚ್ಚುತ್ತವೆ?
ವ್ಯಾಯಾಮ ಮಾಡುವವರನ್ನು ಸೊಳ್ಳೆಗಳು ವ್ಯಾಯಾಮದ ವೇಳೆ ಮತ್ತು ಅದರ ನಂತರ ಹೆಚ್ಚು ಗಮನಿಸುವ ಸಾಧ್ಯತೆಯಿದೆ.
ಕಾರಣ ಸರಳ. ವ್ಯಾಯಾಮದಿಂದ ದೇಹದ ಚಯಾಪಚಯ ಹೆಚ್ಚುತ್ತದೆ. ಇದರಿಂದ ಕಾರ್ಬನ್ ಡೈಆಕ್ಸೈಡ್ (CO₂) ಉತ್ಪಾದನೆ ಹೆಚ್ಚುತ್ತದೆ. ದೇಹದ ಉಷ್ಣತೆ ಏರುತ್ತದೆ ಮತ್ತು ಬೆವರು ಕೂಡ ಹೆಚ್ಚಾಗುತ್ತದೆ. ಈ ಎಲ್ಲ ಸಂಕೇತಗಳು ಸೊಳ್ಳೆಗಳಿಗೆ ವ್ಯಕ್ತಿಯನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತವೆ.
ಅದೇ ರೀತಿ, ದೊಡ್ಡ ದೇಹ ಹೊಂದಿರುವವರು ಸಾಮಾನ್ಯವಾಗಿ ಹೆಚ್ಚು ಉಷ್ಣತೆ ಉತ್ಪಾದಿಸುತ್ತಾರೆ ಮತ್ತು ಹೆಚ್ಚು ಕಾರ್ಬನ್ ಡೈಆಕ್ಸೈಡ್ (CO₂) ಹೊರಬಿಡುವುದರಿಂದ ಸೊಳ್ಳೆಗಳು ಅವರತ್ತಲೂ ಹೆಚ್ಚು ಆಕರ್ಷಿತವಾಗಬಹುದು.
“ಸಿಹಿ ರಕ್ತ” ಇರುವುದರಿಂದ ಸೊಳ್ಳೆ ಕಚ್ಚುತ್ತದೆಯೇ?
ಇಲ್ಲ. “ನನ್ನ ರಕ್ತ ಸಿಹಿಯಾಗಿದೆ, ಅದಕ್ಕೇ ಸೊಳ್ಳೆ ಹೆಚ್ಚು ಕಚ್ಚುತ್ತದೆ” ಎಂಬ ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಸೊಳ್ಳೆಗಳು ನಮ್ಮ ರಕ್ತದ ರುಚಿಯನ್ನು ನೋಡಿ ದೂರದಿಂದ ಬರುವುದಿಲ್ಲ. ಬದಲಾಗಿ, ನಮ್ಮ ದೇಹದಿಂದ ಹೊರಬರುವ ವಿಶಿಷ್ಟ ವಾಸನೆಯಿಂದ ಅವು ನಮ್ಮ ಬಳಿ ಬರುತ್ತವೆ.
ಸೊಳ್ಳೆಗಳು ಹತ್ತಿರ ಬಂದಂತೆ ಚರ್ಮ ಮತ್ತು ಉಸಿರಿನಿಂದ ಹೊರಬರುವ ವಾಸನೆಗಳನ್ನು ಗುರುತಿಸುತ್ತವೆ. ಮನುಷ್ಯರ ಚರ್ಮದಿಂದ ನೂರಾರು ಬಗೆಯ ಬಾಷ್ಪಶೀಲ ಸಾವಯವ ಸಂಯುಕ್ತಗಳು (VOCs) ಹೊರಬರುತ್ತವೆ. ಪ್ರತಿಯೊಬ್ಬರಲ್ಲಿಯೂ ಇವುಗಳ ಪ್ರಮಾಣ ಮತ್ತು ಸಂಯೋಜನೆ ಒಂದೇ ರೀತಿಯಾಗಿರುವುದಿಲ್ಲ ; ಅವು ಬೇರೆ ಬೇರೆ ರೀತಿಯಾಗಿರುತ್ತವೆ.
ಚರ್ಮದ ಮೇಲಿರುವ ಸೂಕ್ಷ್ಮಜೀವಿಗಳು ಅಥವಾ ಸ್ಕಿನ್ ಮೈಕ್ರೋಬಯೋಮ್ ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಚರ್ಮದ ಮೇಲಿರುವ ವಿವಿಧ ಪದಾರ್ಥಗಳನ್ನು ವಿಭಜಿಸುವಾಗ ಸೊಳ್ಳೆಗಳಿಗೆ ವಾಸನೆಯ ಮೂಲಕ ಗುರುತಿಸಬಹುದಾದ ರಾಸಾಯನಿಕಗಳನ್ನು ಉತ್ಪಾದಿಸುತ್ತವೆ.
ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲದಂತಹ ಕೆಲವು ರಾಸಾಯನಿಕಗಳತ್ತ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಚರ್ಮದಲ್ಲಿರುವ ಕೆಲವು ಕಾರ್ಬಾಕ್ಸಿಲಿಕ್ ಆಮ್ಲಗಳು ಹೆಚ್ಚಾದಾಗ ಈ ಆಕರ್ಷಣೆ ಇನ್ನಷ್ಟು ಬಲವಾಗಬಹುದು.
ಕೆಲವರ ಚರ್ಮದ ವಾಸನೆ ಸೊಳ್ಳೆಗಳಿಗೆ 100 ಪಟ್ಟು ಹೆಚ್ಚು ಆಕರ್ಷಕ!
ಅಮೆರಿಕದ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು 64 ಜನರ ಚರ್ಮದ ವಾಸನೆಯನ್ನು ಪರೀಕ್ಷಿಸಿದ್ದರು. ಇದಕ್ಕಾಗಿ ಅವರು ಭಾಗವಹಿಸಿದವರಿಗೆ ಆರು ಗಂಟೆಗಳ ಕಾಲ ನೈಲಾನ್ ತೋಳುಪಟ್ಟಿಗಳನ್ನು ಧರಿಸುವಂತೆ ಸೂಚಿಸಿದ್ದರು.  ಈ ನೈಲಾನ್ ತೋಳುಪಟ್ಟಿಗಳು ಅವರ ದೇಹದ ವಾಸನೆಯನ್ನು ಸಂಗ್ರಹಿಸಿಕೊಂಡವು.
ನಂತರ ಸೊಳ್ಳೆಗಳಿಗೆ ವಿವಿಧ ವ್ಯಕ್ತಿಗಳ ಮಾದರಿಗಳ ನಡುವೆ ಆಯ್ಕೆಗಳನ್ನು ನೀಡಲಾಯಿತು. ಹೆಚ್ಚಿನ ಪ್ರಮಾಣದ ಕಾರ್ಬಾಕ್ಸಿಲಿಕ್ ಆಮ್ಲಗಳ ವಾಸನೆಯಿದ್ದವರ ಮಾದರಿಗಳತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗಿರುವುದು ಕಂಡುಬಂದವು. ಸಂಶೋಧಕರು ಪ್ರತಿಯೊಬ್ಬರಿಗೂ ಸೊಳ್ಳೆ-ಆಕರ್ಷಣೆಯ ಅಂಕ ನೀಡಿದಾಗ, ಅತಿ ಹೆಚ್ಚು ಆಕರ್ಷಕ ವ್ಯಕ್ತಿ ಮತ್ತು ಅತಿ ಕಡಿಮೆ ಆಕರ್ಷಕ ವ್ಯಕ್ತಿಯ ನಡುವೆ 100 ಪಟ್ಟು ವ್ಯತ್ಯಾಸ ಕಂಡುಬಂದಿತು.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ವ್ಯತ್ಯಾಸ ಹಲವು ವರ್ಷಗಳವರೆಗೆ ಬಹುಮಟ್ಟಿಗೆ ಸ್ಥಿರವಾಗಿತ್ತು. ಅಂದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳಾದರೂ ವ್ಯಕ್ತಿಯ ಸೊಳ್ಳೆ-ಆಕರ್ಷಣೆಯ ಮಟ್ಟ ಸಂಪೂರ್ಣವಾಗಿ ಬದಲಾಗುವುದಿಲ್ಲ. “ಸೊಳ್ಳೆಗಳಿಗೆ ನಿಮ್ಮ ಸಾಪೇಕ್ಷ ಆಕರ್ಷಣೆ ಬಹುಮಟ್ಟಿಗೆ ಸ್ಥಿರವಾಗಿರುತ್ತದೆ” ಎಂದು ಲಿಂಡ್ಸೇ ಹೇಳಿದ್ದಾರೆ.
ಚರ್ಮದ ಬ್ಯಾಕ್ಟೀರಿಯಾಗಳೂ ಕಾರಣವಾಗಬಹುದು
ನಮ್ಮ ಚರ್ಮದ ಮೇಲೆ ಕೋಟ್ಯಂತರ ಸೂಕ್ಷ್ಮಜೀವಿಗಳು ವಾಸಿಸುತ್ತವೆ. ಇವುಗಳಲ್ಲಿ ಬ್ಯಾಕ್ಟೀರಿಯಾಗಳೂ ಸೇರಿವೆ. ಇವು ನಮ್ಮ ದೇಹದ ವಾಸನೆ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ನೆದರ್ಲೆಂಡ್‌ನ ವಾಗೆನಿಂಗನ್ ವಿಶ್ವವಿದ್ಯಾಲಯದ ಸಂಶೋಧಕರು ಮಲೇರಿಯಾ ಹರಡುವ ಸೊಳ್ಳೆಗಳಿಗೆ ಹೆಚ್ಚು ಆಕರ್ಷಿತರಾದವರ ಚರ್ಮವನ್ನು ಅಧ್ಯಯನ ಮಾಡಿದಾಗ, ಅವರ ಚರ್ಮದಲ್ಲಿ ಕಡಿಮೆ ಆಕರ್ಷಿತರಾದವರಿಗಿಂತ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಿದ್ದರೂ, ಬ್ಯಾಕ್ಟೀರಿಯಾಗಳ ವೈವಿಧ್ಯತೆ ಕಡಿಮೆ ಇರುವುದು ಕಂಡುಬಂದಿತು.
ಮಾನವನ ಬೆವರು ಸ್ವತಃ ಹೆಚ್ಚು ವಾಸನೆ ನೀಡುವುದಿಲ್ಲ. ಆದರೆ ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳು ಬೆವರಿನಲ್ಲಿರುವ ಪದಾರ್ಥಗಳನ್ನು ವಿಭಜಿಸಿದಾಗ ವಿವಿಧ ವಾಸನೆಯ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಈ ವಾಸನೆಗಳು ಸೊಳ್ಳೆಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ವಂಶವಾಹಿನಿಗಳೂ ಪ್ರಮುಖ ಪಾತ್ರವಹಿಸುತ್ತವೆ
ಸೊಳ್ಳೆಗಳು ಯಾರನ್ನು ಹೆಚ್ಚು ಕಚ್ಚುತ್ತವೆ ಎಂಬುದರಲ್ಲಿ ನಮ್ಮ ವಂಶವಾಹಿನಿಗಳೂ ಕೆಲವು ಪಾತ್ರವಹಿಸಬಹುದು ಎಂಬುದು ಕಂಡುಬಂದಿದೆ.
ಅವಳಿ ಮಕ್ಕಳ ಮೇಲೆ ನಡೆದ ಅಧ್ಯಯನಗಳಲ್ಲಿ ಒಂದೇ ರೀತಿಯ ವಂಶವಾಹಿನಿಗಳನ್ನು ಹೊಂದಿರುವ ಒಂದೇ ಮೊಟ್ಟೆಯ ಅವಳಿಗಳು ಸೊಳ್ಳೆಗಳನ್ನು ಬಹುತೇಕ ಸಮಾನವಾಗಿ ಆಕರ್ಷಿಸಿದರೆ, ವಿಭಿನ್ನ ವಂಶವಾಹಿನಿಗಳನ್ನು ಹೊಂದಿರುವ ಅವಳಿಗಳಲ್ಲಿ ಈ ಆಕರ್ಷಣೆ ಭಿನ್ನವಾಗಿರುವುದು ಕಂಡುಬಂದಿದೆ.
ಇದರಿಂದ ಸೊಳ್ಳೆಗಳಿಗೆ ವ್ಯಕ್ತಿಯೊಬ್ಬರ ದೇಹದ ವಾಸನೆ ಎಷ್ಟು ಆಕರ್ಷಕವಾಗಿರುತ್ತದೆ ಎಂಬುದರ ಕೆಲವು ಅಂಶಗಳು ವಂಶಪಾರಂಪರ್ಯವೂ ಆಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸೊಳ್ಳೆ ಕಚ್ಚಿದರೂ ಎಲ್ಲರ ದೇಹದ ಪ್ರತಿಕ್ರಿಯೆ ಬೇರೆ ಬೇರೆ ಏಕೆ..?
ಇಲ್ಲಿ ಮತ್ತೊಂದು ಪ್ರಮುಖ ವಿಷಯವಿದೆ. ಸೊಳ್ಳೆ ಕಚ್ಚುವ ಪ್ರಮಾಣ ಮತ್ತು ಕಚ್ಚಿದ ನಂತರ ದೇಹದಲ್ಲಿ ಕಾಣಿಸುವ ಪ್ರತಿಕ್ರಿಯೆ ಒಂದೇ ರೀತಿಯಲ್ಲಿ ಇರುವುದಿಲ್ಲ.
ಒಬ್ಬರಿಗೆ ಸೊಳ್ಳೆ ಕಚ್ಚಿದರೆ ದೊಡ್ಡದಾಗಿ ಊದಿಕೊಂಡು ತೀವ್ರವಾಗಿ ತುರಿಸಬಹುದು. ಮತ್ತೊಬ್ಬರಿಗೆ ಅದೇ ರೀತಿಯ ಕಡಿತ ಕೇವಲ ಸಣ್ಣ ಕೆಂಪು ಚುಕ್ಕೆಯಾಗಿ ಕಾಣಿಸಿಕೊಳ್ಳಬಹುದು. ಮತ್ತೊಬ್ಬರಿಗೆ ಈ ತರಹದ ಯಾವ ಗುರುತೂ ಆಗದಿರಬಹುದು. ಇದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ನಡೆಸಿದ ಜಿನೋಮ್‌-ವ್ಯಾಪಿ ಅಧ್ಯಯನಗಳಲ್ಲಿ ಸೊಳ್ಳೆ ಕಡಿತಕ್ಕೆ ನಮ್ಮ ದೇಹ ನೀಡುವ ಪ್ರತಿಕ್ರಿಯೆಯಲ್ಲಿ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ವಂಶವಾಹಿನಿಗಳು ಪ್ರಮುಖ ಪಾತ್ರವಹಿಸಬಹುದು ಎಂದು ಕಂಡುಬಂದಿವೆ. ಈ ವಂಶವಾಹಿನಿ ಪ್ರದೇಶಗಳ ಕೆಲವು ಭಾಗಗಳು ಅಲರ್ಜಿಗೆ ಸಂಬಂಧಿಸಿದ ಪ್ರದೇಶಗಳೊಂದಿಗೂ ಹೊಂದಿಕೆಯಾಗಿವೆ.
ಹೀಗಾಗಿ, “ನನ್ನನ್ನು ಸೊಳ್ಳೆಗಳು ತುಂಬಾ ಕಚ್ಚುತ್ತವೆ” ಎಂದು ಕೆಲವರು ಭಾವಿಸುವುದಕ್ಕೆ ಅವರು ಹೆಚ್ಚು ಬಾರಿ ಕಚ್ಚಿಸಿಕೊಂಡಿರುವುದಷ್ಟೇ ಕಾರಣವಾಗಿರಬೇಕಿಲ್ಲ. ಅವರ ದೇಹವು ಸೊಳ್ಳೆ ಕಡಿತಕ್ಕೆ ಹೆಚ್ಚು ತೀವ್ರವಾಗಿ ಪ್ರತಿಕ್ರಿಯಿಸುವುದು ಸಹಕಾರಣವಾಗಿರಬಹುದು. ಇದಕ್ಕೆ ವಿರುದ್ಧವಾಗಿ, ಕೆಲವರಿಗೆ ಸೊಳ್ಳೆ ಕಡಿದರೂ ದೇಹದಲ್ಲಿ ಯಾವುದೇ ದೊಡ್ಡ ಗುರುತು ಕಾಣಿಸಿಕೊಳ್ಳದಿರಬಹುದು.
ಹೀಗಾಗಿ, ಕೆಲವರನ್ನು ಸೊಳ್ಳೆಗಳು ಹೆಚ್ಚು ಕಚ್ಚುವುದಕ್ಕೆ “ಸಿಹಿ ರಕ್ತ” ಕಾರಣವಲ್ಲ. ಉಸಿರಿನಿಂದ ಹೊರಬರುವ ಕಾರ್ಬನ್‌ ಡೈ ಆಕ್ಸೈಡ್‌ (CO₂), ದೇಹದ ಉಷ್ಣತೆ, ಬೆವರು, ಚರ್ಮದ ವಾಸನೆ, ಚರ್ಮದ ಬ್ಯಾಕ್ಟೀರಿಯಾಗಳು ಮತ್ತು ವಂಶವಾಹಿನಿಗಳಂತಹ ಹಲವು ಅಂಶಗಳು ಸೇರಿ ವ್ಯಕ್ತಿಯೊಬ್ಬರತ್ತ ಸೊಳ್ಳೆಗಳು ಎಷ್ಟು ಆಕರ್ಷಿತರಾಗಬಹುದು ಅಥವಾ ಅವರತ್ತ ಸೆಳೆಯಲ್ಪಡಬಹುದು ಎಂಬುದನ್ನು ನಿರ್ಧರಿಸುತ್ತವೆ. ಇದಲ್ಲದೆ, ಸೊಳ್ಳೆ ಕಚ್ಚಿದ ನಂತರ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಆದ್ದರಿಂದ “ನನ್ನನ್ನು ಸೊಳ್ಳೆಗಳು ಕಚ್ಚುವುದಿಲ್ಲ” ಎಂದು ಭಾವಿಸುವುದು ಸುರಕ್ಷಿತ ಎಂಬ ಅರ್ಥವಲ್ಲ. ಸೊಳ್ಳೆಗಳು ಹರಡುವ ರೋಗಗಳ ಅಪಾಯವಿರುವ ಪ್ರದೇಶಗಳಲ್ಲಿ ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಒಟ್ಟಿನಲ್ಲಿ, ಕೆಲವರಿಗೆ ಸೊಳ್ಳೆಗಳು ನಿಜಕ್ಕೂ ಹೆಚ್ಚು ಆಕರ್ಷಿತರಾಗಬಹುದು. ಅದಕ್ಕೆ ನಮ್ಮ ದೇಹದಿಂದ ಹೊರಬರುವ ರಾಸಾಯನಿಕ ಸಂಕೇತಗಳ ವಿಶಿಷ್ಟ ಸಂಯೋಜನೆಯೇ ಪ್ರಮುಖ ಕಾರಣ ಎಂಬುದು ಕಂಡುಬಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement