ನಾಂದೇಡ್‌ನಲ್ಲಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಕಿರ್ಪಾನ್‌ನಿಂದ ದಾಳಿ : ಆಸ್ಪತ್ರೆಗೆ ದಾಖಲು

ನಾಂದೇಡ್: ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರದಲ್ಲಿ ಗುರುವಾರ ದಾಳಿ ನಡೆದಿದೆ.
ತೀಕ್ಷ್ಣವಾದ ಆಯುಧದಿಂದ ನಡೆದ ದಾಳಿಯಲ್ಲಿ ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಂದೇಡ್ ಜಿಲ್ಲೆಯ ಮುಗಟ್‌ (ಮುಡ್ಖೇಡ್ ತಾಲೂಕು)ನ ಗುರುದ್ವಾರ ಮಾತಾ ಸಾಹಿಬ್ ದೇವಾಜಿಯಲ್ಲಿ ಮಧ್ಯಾಹ್ನ ಸುಮಾರು 1:50ರ ವೇಳೆಗೆ ಈ ಘಟನೆ ನಡೆದಿದೆ. ಗುರುದ್ವಾರದಲ್ಲಿ ನಮಸ್ಕರಿಸಿ ಮೆಟ್ಟಿಲು ಇಳಿಯುತ್ತಿದ್ದ ವೇಳೆ ಸಿಖ್ ಸ್ವಯಂಸೇವಕನೊಬ್ಬ ಬಾದಲ್ ಅವರ ಮೇಲೆ ಕೈಗೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯ ವೇಳೆ ಬಾದಲ್ ಅವರ ಭದ್ರತಾ ಸಿಬ್ಬಂದಿಯಲ್ಲಿದ್ದ ಎಸ್‌ಪಿಯು ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕೇಂದ್ರೇ ಅವರು ಮಧ್ಯಪ್ರವೇಶಿಸಿ ದಾಳಿಯನ್ನು ತಡೆಯಲು ಯತ್ನಿಸಿದ್ದು, ಅವರ ಕೈಗೂ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನೂ ನಾಂದೇಡ್‌ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜಸ್ಪಾಲ್ ಸಿಂಗ್ ಬಂಧನ
ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಜಸ್ಪಾಲ್ ಸಿಂಗ್ ಎಂಬಾತ ನಿಹಾಂಗ್‌ ಸಿಖ್ಖ್‌ ಸಮುದಾಯಕ್ಕೆ ಸೇರಿದವನಾಗಿದ್ದು, ಕಳೆದ ಎರಡು ವರ್ಷಗಳಿಂದ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಯ ಹಿಂದಿನ ಉದ್ದೇಶ ಸೇರಿದಂತೆ ಹೆಚ್ಚಿನ ವಿವರಗಳನ್ನು ತನಿಖೆಯ ಬಳಿಕ ಬಹಿರಂಗಪಡಿಸುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಮನೆಯಲ್ಲಿ ಹಣ ಪತ್ತೆ ಪ್ರಕರಣ ; ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ 3 ಆರೋಪಗಳು ಸಾಬೀತು : ಸದನ ಸಮಿತಿ

ದಾಳಿಕೋರ ಯಾರು…?
ಆರೋಪಿಯನ್ನು 62 ವರ್ಷದ ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಮೂಲತಃ ಪುಣೆ ನಿವಾಸಿ. ಈ ಹಿಂದೆ ಆತ ಪುಣೆ ನ್ಯಾಯಾಲಯದಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ.
ಕಳೆದ ಎರಡು ವರ್ಷಗಳಿಂದ, ಆತ ನಾಂದೇಡ್ ಬಳಿಯ ಮುಗತ್‌ನಲ್ಲಿರುವ ಮಾತಾ ಸಾಹಿಬ್ ಗುರುದ್ವಾರದಲ್ಲಿ ಸೇವೆ ಸಲ್ಲಿಸುತ್ತಿದ್ದ. ಇಂದು, ಗುರುವಾರ ಸುಖಬೀರ್ ಸಿಂಗ್ ಬಾದಲ್ ಮಾತಾ ಸಾಹಿಬ್ ಗುರುದ್ವಾರದಲ್ಲಿ ಪೂಜೆ ಸಲ್ಲಿಸಿ ಹೊರಬಂದಾಗ, ಅವರ ಮೇಲೆ ಜಸ್ಪಾಲ್ ಸಿಂಗ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.ಜಸ್ಪಾಲ್ ಸಿಂಗ್‌ನನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಪೊಲೀಸರು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ.

ಎರಡು ವರ್ಷಗಳಲ್ಲಿ ಎರಡನೇ ದಾಳಿ
ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಕಳೆದ ಎರಡು ವರ್ಷಗಳಲ್ಲಿ ನಡೆದಿರುವುದು ಇದು ಎರಡನೇ ದಾಳಿ. 2024ರ ಡಿಸೆಂಬರ್‌ನಲ್ಲಿ ಅಮೃತಸರದ ಸ್ವರ್ಣಮಂದಿರದ ಪ್ರವೇಶದ್ವಾರದಲ್ಲಿ ಬಾದಲ್ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಲಾಗಿತ್ತು. ಆ ಪ್ರಕರಣದಲ್ಲಿ ನಾರಾಯಣ್ ಸಿಂಗ್ ಚೌರಾ ಎಂಬಾತನನ್ನು ಬಂಧಿಸಲಾಗಿತ್ತು.
2007ರಲ್ಲಿ ನಡೆದ ಗುರುಗ್ರಂಥ ಸಾಹಿಬ್ ಅಪವಿತ್ರಗೊಳಿಸುವಿಕೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರಿಗೆ ಬೆಂಬಲ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಕಾಲ್ ತಖ್ತ್ ಬಾದಲ್ ಅವರಿಗೆ ‘ತಂಖಾ’ ಶಿಕ್ಷೆ ವಿಧಿಸಿದ ಬಳಿಕ ಈ ದಾಳಿ ನಡೆದಿತ್ತು.

ಪ್ರಮುಖ ಸುದ್ದಿ :-   6 ಸ್ನೇಹಿತರು...ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕ

ಇತ್ತೀಚೆಗೆ ಸುಖ್ಬೀರ್ ಸಿಂಗ್ ಬಾದಲ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬೆನ್ನಲ್ಲೇ ಶಿರೋಮಣಿ ಅಕಾಲಿ ದಳವು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳಬಹುದೇ ಎಂಬ ರಾಜಕೀಯ ಚರ್ಚೆ ತೀವ್ರಗೊಂಡಿದೆ.
ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಮರುದಿನ, ಮಹಿಳಾ ಮೀಸಲಾತಿ ಕಾಯ್ದೆ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಅಕಾಲಿ ದಳ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ನಾಂದೇಡ್‌ನಲ್ಲಿ ನಡೆದ ದಾಳಿ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement