ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ದೆಹಲಿಯ ಮಾಜಿ ಜಲ ಸಚಿವ ಸತ್ಯೇಂದ್ರ ಜೈನ್ ಅವರನ್ನು ದೆಹಲಿ ಜಲ ಮಂಡಳಿ (DJB) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಮಾರು 18 ತಿಂಗಳು ಜೈಲಿನಲ್ಲಿ ಕಳೆದಿದ್ದ ಜೈನ್ ಅವರ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅವರ ಬಂಧನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ದೆಹಲಿ ವಿಜಿಲೆನ್ಸ್ ನಿರ್ದೇಶನಾಲಯ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕಗಳ (STP) ಉನ್ನತೀಕರಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು, ಟೆಂಡರ್ ಷರತ್ತುಗಳ ತಿರುಚುವಿಕೆ ಹಾಗೂ ಕ್ರಿಮಿನಲ್ ಸಂಚು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ACB) ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜೈನ್ ಹೊರತುಪಡಿಸಿ ದೆಹಲಿ ಜಲ ಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಉದಿತ್ ಪ್ರಕಾಶ ರೈ, ಮಾಜಿ ಗುತ್ತಿಗೆ ಆಧಾರಿತ ಸಲಹೆಗಾರ ಅಂಕಿತ ಶ್ರೀವಾಸ್ತವ, ಎಎನ್ ಎಂಟರ್ಪ್ರೈಸಸ್ (AN Enterprises) ಸಂಸ್ಥೆಯ ಮಾಲೀಕ ನಾಗೇಂದ್ರ ಯಾದವ್, ಯುರೋ ಟೆಕ್ ಎನ್ವೈರನ್ಮೆಂಟ್ ಪ್ರೈ ಲಿ(Euroteck Environment Pvt Ltd) ಮಾಲೀಕ ರಾಜಾ ಕುಮಾರ ಕುರ್ರಾ ಹಾಗೂ ಸೃಜನ್ಹರ್ (Srijanhar) ಸಂಸ್ಥೆಯ ಮಾಲೀಕ ಪಂಕಜ ವರ್ಮಾ ಸೇರಿದ್ದಾರೆ.
ಎಸಿಬಿ ಪ್ರಕಾರ, ಟೆಂಡರ್ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ತಂತ್ರಜ್ಞಾನ ಪೂರೈಕೆದಾರ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಬಂಧಿತ ತಾಂತ್ರಿಕ ಮಾನದಂಡಗಳು ಮತ್ತು ಷರತ್ತುಗಳನ್ನು ರೂಪಿಸಲಾಗಿತ್ತು. ಈ ಷರತ್ತುಗಳು ಯುರೋ ಟೆಕ್ ಎನ್ವೈರನ್ಮೆಂಟ್ ಪ್ರೈ ಲಿಗೆ ಅನುಕೂಲವಾಗುವಂತೆ ಮಾಡಲಾಗಿತ್ತು ಎಂಬುದು ತನಿಖೆಯ ಆರೋಪವಾಗಿದೆ.
ತನಿಖೆಯಲ್ಲಿ ಪ್ರಸ್ತಾಪಿಸಲಾಗಿದ್ದ ಪೈಲಟ್ ಅಧ್ಯಯನವನ್ನು ನಡೆಸಲಾಗಿಲ್ಲ ಎಂದು ಎಸಿಬಿ ಹೇಳಿದೆ. ಇದರ ಜೊತೆಗೆ, ಟೆಂಡರ್ನಲ್ಲಿ ಕೆಲವು ನಿರ್ಬಂಧಿತ ಷರತ್ತುಗಳನ್ನು ಸೇರಿಸಲಾಗಿತ್ತು ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿಗೆ ಸಂಬಂಧಿಸಿದ ಕೆಲವು ಅಗತ್ಯ ಮಾನದಂಡಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಎಎನ್ ಎಂಟರ್ಪ್ರೈಸಸ್ (AN Enterprises) ಮತ್ತು ಸೃಜನ್ಹರ್ (Srijanhar) ಸೇರಿದಂತೆ ಮಧ್ಯವರ್ತಿ ಸಂಸ್ಥೆಗಳನ್ನು ಬಳಸಿಕೊಂಡು ಹಣವನ್ನು ವರ್ಗಾಯಿಸಲಾಗಿತ್ತು ಎಂಬುದೂ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.
₹1.52 ಕೋಟಿ ಲಂಚ ಆರೋಪ
ಎಸಿಬಿ ಹೇಳಿಕೆಯ ಪ್ರಕಾರ, ದೆಹಲಿ ಜಲ ಮಂಡಳಿಯ ಆಗಿನ ಸಿಇಒ ಉದಿತ್ ಪ್ರಕಾಶ್ ರೈ ಅವರು ತಮ್ಮ ಹಾಗೂ ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ₹1.52 ಕೋಟಿ ಲಂಚ ಸ್ವೀಕರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಣವನ್ನು ಎಎನ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕ ನಾಗೇಂದ್ರ ಯಾದವ್ ಅವರ ಮೂಲಕ ಬ್ಯಾಂಕಿಂಗ್ ಮಾರ್ಗದಲ್ಲಿ ವರ್ಗಾಯಿಸಲಾಗಿತ್ತು ಎಂದು ಎಸಿಬಿ ಆರೋಪಿಸಿದೆ. ಬಳಿಕ ಈ ಹಣವನ್ನು ಸ್ಥಿರಾಸ್ತಿ ಖರೀದಿಗೆ ಬಳಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಸದ್ಯ ದೆಹಲಿ ಜಲ ಮಂಡಳಿಯ ಎಸ್ಟಿಪಿ (STP) ಉನ್ನತೀಕರಣ ಟೆಂಡರ್ನಲ್ಲಿ ಅಕ್ರಮ, ಟೆಂಡರ್ ಷರತ್ತುಗಳ ತಿರುಚುವಿಕೆ, ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡುವಿಕೆ ಹಾಗೂ ಲಂಚದ ಹಣದ ವಹಿವಾಟು ನಡೆದಿದೆ ಎಂಬ ಆರೋಪಗಳ ಕುರಿತು ಎಸಿಬಿ ತನಿಖೆ ಮುಂದುವರಿಸಿದೆ.
“ಜೈನ್ ಜೈಲಿನಲ್ಲಿದ್ದಾಗ ಟೆಂಡರ್ ನಡೆದಿತ್ತು” : ಎಎಪಿ
ಸತ್ಯೇಂದ್ರ ಜೈನ್ ಅವರ ಬಂಧನವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸಿದೆ. ಈ ಬಂಧನ ರಾಜಕೀಯ ಪ್ರೇರಿತ ಎಂದು ಅದು ಆರೋಪಿಸಿದೆ.
ಎಎಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ ಧಾಂಡಾ ಅವರು, ಆರೋಪಿತ ಜಲ ಮಂಡಳಿ ಟೆಂಡರ್ ನಡೆದ ಸಂದರ್ಭದಲ್ಲಿ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದರು ಎಂದು ಹೇಳಿದ್ದಾರೆ.
“ಬಿಜೆಪಿಗೆ ಎಎಪಿ ಬಗ್ಗೆ ಭಯವಿದೆ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು? ಆ ಜಲ ಮಂಡಳಿ ಟೆಂಡರ್ ನಡೆದ ಸಮಯದಲ್ಲಿ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದ ಅವರು ಹೇಗೆ ಈ ಪ್ರಕರಣಕ್ಕೆ ಹೊಣೆಗಾರರಾಗುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಪಂಜಾಬ್ನಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸತ್ಯೇಂದ್ರ ಜೈನ್ ಅವರನ್ನು ಎಎಪಿಯ ಪಂಜಾಬ್ ಸಹ-ಉಸ್ತುವಾರಿಯಾಗಿ ನೇಮಕ ಮಾಡಿರುವುದೇ ಈ ಬಂಧನಕ್ಕೆ ನಿಜವಾದ ಕಾರಣ ಎಂದು ಧಾಂಡಾ ಆರೋಪಿಸಿದ್ದಾರೆ.
“ಬಿಜೆಪಿ ಸೂಚನೆಯ ಮೇರೆಗೆ ಬಂಧನ” : ಕೇಜ್ರಿವಾಲ್
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ಜೈನ್ ಬಂಧನವನ್ನು ಖಂಡಿಸಿದ್ದಾರೆ. ಬಿಜೆಪಿ ಸೂಚನೆಯ ಮೇರೆಗೆ ಸತ್ಯೇಂದ್ರ ಜೈನ್ ಅವರನ್ನು ಮತ್ತೊಮ್ಮೆ ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಹಿಂದಿನ ಪ್ರಕರಣದಲ್ಲಿಯೂ ಜೈನ್ ಅವರನ್ನು ಜೈಲಿಗೆ ಕಳುಹಿಸಿ ಕಿರುಕುಳ ನೀಡಲಾಗಿತ್ತು ಮತ್ತು ಆ ಪ್ರಕರಣ ಸುಳ್ಳು ಎಂದು ಸಾಬೀತಾಗಲಿದೆ; ಇದೇ ರೀತಿ ಈ ಪ್ರಕರಣವೂ ಸುಳ್ಳು ಎಂದು ಸಾಬೀತಾಗಲಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದ್ದಾರೆ.
“ಎಎಪಿಯ ನೈಜ ಮುಖ ಬಯಲಾಗಿದೆ”: ಬಿಜೆಪಿ
ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಹಾಗೂ ದೆಹಲಿಯ ಮಾಜಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವಾ ಅವರು ಎಎಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಜನರ ಹಣವನ್ನು ಎಎಪಿ ಲೂಟಿ ಮಾಡಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಅವರು, ದೆಹಲಿ ಜಲ ಮಂಡಳಿಯ ಎಸ್ಟಿಪಿ (STP) ಟೆಂಡರ್ ಹಗರಣದಲ್ಲಿ ನಡೆದ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಎಎಪಿಯ “ನೈಜ ಮುಖ” ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಟೆಂಡರ್ಗಳನ್ನು ತಿರುಚಿ ಕೋಟ್ಯಂತರ ರೂಪಾಯಿ ಲಂಚ ಪಡೆಯುವುದು ಎಎಪಿಯ “ಪ್ರಾಮಾಣಿಕ ಮಾದರಿ” ಎಂದು ವ್ಯಂಗ್ಯವಾಡಿದ ಸಚ್ದೇವಾ, ನೀರು ಮತ್ತು ಸ್ವಚ್ಛತೆಯ ಹೆಸರಿನಲ್ಲಿ ಮತ ಕೇಳಿ ಬಳಿಕ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.
ಸತ್ಯೇಂದ್ರ ಜೈನ್ ಅವರ ಹಿಂದಿನ ಪ್ರಕರಣ
ಸತ್ಯೇಂದ್ರ ಜೈನ್ ಅವರು 2015ರಿಂದ 2023ರವರೆಗೆ ದೆಹಲಿ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿರ್ವಹಿಸಿದ್ದರು. 2022ರ ಮೇನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತ್ತು.
2023ರ ಮೇನಲ್ಲಿ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಅವರಿಗೆ ಮಧ್ಯಂತರ ಜಾಮೀನು ದೊರೆತು ಅವರು ಜೈಲಿನಿಂದ ಹೊರಬಂದಿದ್ದರು. ಬಳಿಕ ಮತ್ತೆ ಸುಮಾರು ಆರು ತಿಂಗಳು ಜೈಲಿನಲ್ಲಿ ಕಳೆದ ಅವರು, ನಿಯಮಿತ ಜಾಮೀನು ದೊರೆತ ನಂತರ 2024ರ ಅಕ್ಟೋಬರ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಅವರಿಗೆ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನು ದೊರೆತ ಕೆಲವೇ ಸಮಯದ ಬಳಿಕ ಜೈನ್ ಅವರಿಗೂ ಜಾಮೀನು ದೊರೆತಿತ್ತು. ಸಿಸೋಡಿಯಾ ಕೂಡ ಇದೇ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ