ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆ ಕಳವು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ಕ್ಲೀನ್‌ಚಿಟ್ ನೀಡಿದೆ ಹಾಗೂ ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ ಮಿಶ್ರಾ ಅವರ ಮೇಲಿದ್ದ ಆರೋಪಗಳಿಗೂ ಎಸ್‌ಐಟಿ ತನಿಖೆಯಲ್ಲಿ ಯಾವುದೇ ಆಕ್ಷೇಪಾರ್ಹ ಅಂಶ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ ಎಂದು ಎನ್‌ಡಿಟಿವಿ (NDTV) ವರದಿ ಮಾಡಿದೆ.
ಕಾಣಿಕೆ ಕಳವು ಆರೋಪಗಳು ಕೇಳಿಬಂದ ಬಳಿಕ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಇಬ್ಬರೂ ತಾವು ಹೊಂದಿದ್ದ ಟ್ರಸ್ಟ್‌ನ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಜೂನ್ 27ರಂದು ಇಬ್ಬರೂ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ದೇವಾಲಯದಲ್ಲಿ ಕಾಣಿಕೆ ಸಂಗ್ರಹ ಮತ್ತು ನಿರ್ವಹಣೆ ನಡೆಯುವ ಪ್ರಕ್ರಿಯೆ ಕುರಿತು ಎಸ್‌ಐಟಿ ಇಬ್ಬರನ್ನೂ ವಿಚಾರಣೆ ನಡೆಸಿತ್ತು.
ಆರೋಪಗಳನ್ನು ತಳ್ಳಿಹಾಕಿದ್ದ ಚಂಪತ್ ರೈ
ಮೂಲಗಳ ಪ್ರಕಾರ, ವಿಚಾರಣೆ ವೇಳೆ ಚಂಪತ್ ರೈ ಅವರು ರಾಮ ಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ ತಮಗೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಬದಲಾಗಿ, ಪ್ರಕರಣದಲ್ಲಿ ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲು ತಾವೇ ದೂರು ನೀಡಿದ್ದು ಕಾರಣವಾಗಿತ್ತು ಎಂದು ಅವರು ಎಸ್‌ಐಟಿ ಮುಂದೆ ಹೇಳಿದ್ದರು ಎಂದು ವರದಿ ಹೇಳಿದೆ.
ದೇವಾಲಯದಲ್ಲಿ ಕಾಣಿಕೆ ಸಂಗ್ರಹಿಸುವ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿತ್ತು. ಕಾಣಿಕೆ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ತಮ್ಮ ಗಮನಕ್ಕೆ ಬಂದ ಕೂಡಲೇ ತಾವು ಕ್ರಮ ಕೈಗೊಂಡಿದ್ದಾಗಿ ರೈ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಎಸ್‌ಐಟಿ ಅಂತಿಮ ವರದಿ ಟ್ರಸ್ಟ್‌ಗೆ ಹಸ್ತಾಂತರ
ಈ ನಡುವೆ, ಅಯೋಧ್ಯೆ ರಾಮ ಮಂದಿರ ಕಾಣಿಕೆ ಕಳವು ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ಸಿದ್ಧಪಡಿಸಿರುವ ಅಂತಿಮ ವರದಿಯನ್ನು ಉತ್ತರ ಪ್ರದೇಶ ಗೃಹ ಇಲಾಖೆ ಸೋಮವಾರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ಟ್ರಸ್ಟ್‌ಗೆ ನೀಡಲಾಗಿದೆ.
ಮೂವರು ಸದಸ್ಯರ ಎಸ್‌ಐಟಿಯನ್ನು ಉತ್ತರ ಪ್ರದೇಶ ಸರ್ಕಾರ ಜೂನ್ 13ರಂದು ರಚಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಕ್ಕೂ ಮುನ್ನ, ಟ್ರಸ್ಟ್‌ನ ಮನವಿಯ ಮೇರೆಗೆ ರಾಜ್ಯ ಸರ್ಕಾರ ತನಿಖಾ ತಂಡವನ್ನು ರಚಿಸಿತ್ತು.
ಲಕ್ನೋ ವಿಭಾಗೀಯ ಆಯುಕ್ತ ವಿಜಯ ವಿಶ್ವಾಸ ಪಂತ್ ಅವರು ಎಸ್‌ಐಟಿಯ ನೇತೃತ್ವ ವಹಿಸಿದ್ದರು. ರೇಂಜ್ ಐಜಿ ಜನರಲ್ ಕಿರಣ ಎಸ್. ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಕುಮಾರ ತಂಡದ ಇತರ ಇಬ್ಬರು ಸದಸ್ಯರಾಗಿದ್ದಾರೆ.
ಎಸ್‌ಐಟಿ ಜೂನ್ 23ರಂದು ರಾಜ್ಯ ಸರ್ಕಾರಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಹಲವು ಕಠಿಣ ಹಾಗೂ ಮಹತ್ವದ ಶಿಫಾರಸುಗಳನ್ನು ಮಾಡಲಾಗಿತ್ತು.
ಪ್ರಾಥಮಿಕ ವರದಿ ಆಧರಿಸಿ ಎಫ್‌ಐಆರ್
ಎಸ್‌ಐಟಿಯ ಪ್ರಾಥಮಿಕ ವರದಿಯ ಆಧಾರದ ಮೇಲೆ ಟ್ರಸ್ಟ್ ಸದಸ್ಯ ಕೃಷ್ಣಮೋಹನ ಅವರು ಶ್ರೀ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಜೂನ್ 25ರಂದು ಪ್ರಕರಣದಲ್ಲಿ ಮೊದಲ ಎಫ್‌ಐಆರ್ ದಾಖಲಿಸಲಾಗಿತ್ತು.
ಎಫ್‌ಐಆರ್‌ನಲ್ಲಿ ಅವಿನಾಶ ಶುಕ್ಲಾ, ಅನಕಲ್ಪ ಮಿಶ್ರಾ, ಲವಕುಶ ಮಿಶ್ರಾ, ಮನೀಶಕುಮಾರ ಯಾದವ್, ಕರುಣೇಶ ಪಾಂಡೆ, ರಾಮಶಂಕರ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ ಶಂಕರ ಯಾದವ್ ಅಲಿಯಾಸ್ ಟಿನ್ನು ಸೇರಿದಂತೆ ಎಂಟು ಮಂದಿಯನ್ನು ಹೆಸರಿಸಲಾಗಿತ್ತು. ಇವರ ಜೊತೆಗೆ ಗುರುತು ಪತ್ತೆಯಾಗದ ಇತರ ವ್ಯಕ್ತಿಗಳನ್ನೂ ಆರೋಪಿಗಳೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು.
ಈ ಎಂಟು ಮಂದಿಯನ್ನೂ ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ (Prevention of Corruption Act)ಯ ಸೆಕ್ಷನ್ 13(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್‌ಐಟಿಯ ಪ್ರಾಥಮಿಕ ವರದಿಯೇ ನಂತರ ದಾಖಲಾದ ಇತರ ಎಫ್‌ಐಆರ್‌ಗಳು ಹಾಗೂ ಬಂಧನ ಸೇರಿದಂತೆ ಪ್ರಕರಣದಲ್ಲಿ ಕೈಗೊಳ್ಳಲಾದ ಮುಂದಿನ ಕಾನೂನು ಕ್ರಮಗಳಿಗೂ ಪ್ರಮುಖ ಆಧಾರವಾಗಿತ್ತು.
ಇದೀಗ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಚಂಪತ್ ರೈ ಮತ್ತು ಅನಿಲ ಮಿಶ್ರಾ ಅವರಿಗೆ ತನಿಖೆಯಿಂದ ಕ್ಲೀನ್‌ಚಿಟ್ ದೊರೆತಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ