ನವದೆಹಲಿ: ಸುಮಾರು 30 ವರ್ಷಗಳ ಹಿಂದೆ ದಾಖಲಾಗಿದ್ದ 20 ರೂ.ಲಂಚದ ಆರೋಪದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಅಂತ್ಯ ಹಾಡಿದೆ. ಲಂಚದ ಬೇಡಿಕೆ ಇಡಲಾಗಿತ್ತು ಎಂಬುದು ಸಾಬೀತಾಗದ ಹಿನ್ನೆಲೆಯಲ್ಲಿ, ಕೇವಲ 20 ರೂ.ಹಣ ವಸೂಲಾತಿ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರದ ಇಬ್ಬರು ನೌಕರರನ್ನು ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭೂಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಪ್ರಕರಣವು 1996ರ ಫೆಬ್ರವರಿಯಲ್ಲಿ ನಡೆದ ಘಟನೆಯನ್ನು ಆಧರಿಸಿದೆ. ಆನಂದ್ ಜಿಲ್ಲೆಯ ಬೇಚಾರಿ ಗ್ರಾಮ ಪಂಚಾಯಿತಿ ಕಚೇರಿಗೆ ವಿದ್ಯಾರ್ಥಿಯೊಬ್ಬ ಶಿಕ್ಷಣಕ್ಕೆ ಸಂಬಂಧಿಸಿದ ರಿಯಾಯಿತಿ ಪಡೆಯಲು ಅಗತ್ಯವಿದ್ದ ಆದಾಯ ಪ್ರಮಾಣಪತ್ರ ಪಡೆಯಲು ಲಂಚ ಕೇಳಿದ ಪ್ರಕರಣ ಇದಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಪ್ರಮಾಣಪತ್ರ ನೀಡಲು ಗ್ರಾಮ ಪಂಚಾಯಿತಿಯ ಗುಮಾಸ್ತ ವಿದ್ಯಾರ್ಥಿಯಿಂದ 120 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅದರಲ್ಲಿ 100 ರೂ. ತನಗಾಗಿ ಹಾಗೂ 20 ರೂ. ಪ್ಯೂನ್ಗಾಗಿ ಎಂದು ಹೇಳಲಾಗಿತ್ತು. ಈ ಕುರಿತು ವಿದ್ಯಾರ್ಥಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ನೀಡಿದ್ದ.
ಬಳಿಕ ಎಸಿಬಿ ಅಧಿಕಾರಿಗಳು ಬಲೆ ಬೀಸಿ, ಗುರುತು ಹಾಕಿದ 120 ರೂ. ಮೊತ್ತದ ನೋಟುಗಳನ್ನು ವಿದ್ಯಾರ್ಥಿಗೆ ನೀಡಿ ಆರೋಪಿಗಳಿಗೆ ಹಣ ನೀಡುವಂತೆ ಕಳುಹಿಸಿದ್ದರು. ವಿದ್ಯಾರ್ಥಿ ಆದಾಯ ಪ್ರಮಾಣಪತ್ರವನ್ನು ಪಡೆದ ಬಳಿಕ ಪ್ಯೂನ್ಗೆ 20 ರೂ.ನೀಡಿದ್ದ. ಈ ವೇಳೆ ದಾಳಿ ನಡೆಸಿದ ಎಸಿಬಿ ತಂಡವು ಆ ಗುರುತು ಹಾಕಿದ 20 ರೂ.ನೋಟುಗಳನ್ನು ಪ್ಯೂನ್ನಿಂದ ವಶಪಡಿಸಿಕೊಂಡಿತು. ಆದರೆ ಆರೋಪದಂತೆ ಗುಮಾಸ್ತನಿಗೆ ನೀಡಬೇಕಿದ್ದ 100 ರೂ. ಆತನ ಬಳಿ ಪತ್ತೆಯಾಗಲಿಲ್ಲ.
ಪ್ರಾಸಿಕ್ಯೂಷನ್ ಹೇಳಿಕೆಯಲ್ಲಿ ವ್ಯತ್ಯಾಸ
ಪ್ರಕರಣದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ನ ಹೇಳಿಕೆಗಳಲ್ಲಿ ಹಲವು ಅಸಮಂಜಸತೆಗಳಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿತು. ವಿದ್ಯಾರ್ಥಿಯು ಇದೇ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯಲ್ಲಿ, ಆರೋಪಿಗಳು ಮೊದಲು 200 ರೂ. ಲಂಚ ಕೇಳಿದ್ದರು; ಬಳಿಕ 120 ರೂ.ಗಳನ್ನು ನೀಡುವ ಬಗ್ಗೆ ಒಪ್ಪಂದವಾಗಿತ್ತು ಎಂದು ಹೇಳಿದ್ದ. ಆದರೆ ವಿಚಾರಣಾ ನ್ಯಾಯಾಲಯದ ಮುಂದೆ ನೀಡಿದ ಸಾಕ್ಷ್ಯದಲ್ಲಿ ವಿದ್ಯಾರ್ಥಿ ಈ ಅಂಶವನ್ನು ಹೇಳಿರಲಿಲ್ಲ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ತಾನು ಕೊಟ್ಟ ಪೂರ್ಣ 120 ರೂ. ನೀಡುವಂತೆ ಎಸಿಬಿ ಸೂಚಿಸಿತ್ತು
ಲಂಚದ ಬೇಡಿಕೆ ಬಂದರೆ ಪೂರ್ಣ 120 ರೂ. ಹಣವನ್ನು ನೀಡುವಂತೆ ಎಸಿಬಿ ವಿದ್ಯಾರ್ಥಿಗೆ ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ವಿದ್ಯಾರ್ಥಿ ಪ್ಯೂನ್ಗೆ ಕೇವಲ 20 ರೂ. ಮಾತ್ರ ನೀಡಿದ್ದ.
ಇದಲ್ಲದೆ, ವಿದ್ಯಾರ್ಥಿ ಪ್ಯೂನ್ಗೆ 20 ರೂ. ನೀಡುವ ಸಂದರ್ಭದಲ್ಲಿ ಗುಮಾಸ್ತ ಕೂಡ ಪ್ಯೂನ್ನ ಪಕ್ಕದಲ್ಲೇ ಇದ್ದ. ಹಾಗಿದ್ದರೂ ಉಳಿದ 100 ರೂ.ಗಳನ್ನು ಏಕೆ ನೀಡಲಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿತು ಎಂದು ಸುಪ್ರೀಂ ಕೋರ್ಟ್ ಗಮನಿಸಿತು. ವಿಚಾರಣೆ ವೇಳೆ ನಡೆದ ಪಾಟಿ ಸವಾಲಿನಲ್ಲಿ, ಪ್ಯೂನ್ ಸ್ವತಃ ತನ್ನಿಂದ ಯಾವುದೇ ಲಂಚವನ್ನು ಕೇಳಿರಲಿಲ್ಲ ಎಂದು ವಿದ್ಯಾರ್ಥಿ ಒಪ್ಪಿಕೊಂಡಿದ್ದ.
ಪ್ರಮಾಣಪತ್ರ ಪಡೆದ ಬಳಿಕವೇ ಹಣ ಹಸ್ತಾಂತರ
ವಿದ್ಯಾರ್ಥಿಯು ಮೊದಲು ಆದಾಯ ಪ್ರಮಾಣಪತ್ರವನ್ನು ಪಡೆದುಕೊಂಡು, ನಂತರವೇ ಪ್ಯೂನ್ಗೆ 20 ರೂ. ನೀಡಿದ್ದ ಎಂಬುದನ್ನೂ ನ್ಯಾಯಾಲಯ ಗಮನಿಸಿತು. ಈ ಎಲ್ಲ ಸಂದರ್ಭಗಳು ಪ್ರಾಸಿಕ್ಯೂಷನ್ ಮಂಡಿಸಿದ್ದ ಘಟನೆಗಳ ವಿವರಣೆಯ ಬಗ್ಗೆ ಗಂಭೀರ ಅನುಮಾನ ಮೂಡಿಸುತ್ತವೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ಯೂನ್ ನೀಡಿದ್ದ ವಿವರಣೆಯನ್ನೂ ನ್ಯಾಯಾಲಯ ಪರಿಗಣಿಸಿತು. ಮರುದಿನ ಈದ್ ಹಬ್ಬವಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತನಗೆ 20 ರೂ. ನೀಡಿದ್ದ ಎಂದು ಪ್ಯೂನ್ ವಾದಿಸಿದ್ದ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 20 ಅಡಿಯಲ್ಲಿ ಇರುವ ಕಾನೂನುಬದ್ಧ ಊಹೆಯ ವಿಚಾರವನ್ನೂ ಸುಪ್ರೀಂ ಕೋರ್ಟ್ ಪರಿಶೀಲಿಸಿತು. ಲಂಚದ ಬೇಡಿಕೆಯೇ ಸಾಬೀತಾಗದ ಸಂದರ್ಭದಲ್ಲಿ, ಪ್ಯೂನ್ನಿಂದ ಕೇವಲ 20 ರೂ. ವಸೂಲಾತಿ ಮಾಡಿದ ಆದಾರದ ಮೇಲೆ ಪ್ರಾಸಿಕ್ಯೂಷನ್ ಪರವಾಗಿ ಸೆಕ್ಷನ್ 20ರ ಕಾನೂನುಬದ್ಧ ಊಹೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಂದರೆ, ಲಂಚದ ಬೇಡಿಕೆ ಮೊದಲು ಸಾಬೀತಾಗಬೇಕು. ಕೇವಲ ಹಣ ಪತ್ತೆಯಾಗಿದೆ ಎಂಬ ಕಾರಣಕ್ಕೆ ಲಂಚ ಸ್ವೀಕರಿಸಿದ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂಬ ನಿಲುವನ್ನು ನ್ಯಾಯಾಲಯ ವ್ಯಕ್ತಪಡಿಸಿತು.
ಗುಮಾಸ್ತನ ವಿರುದ್ಧದ ಅಭಿಯೋಜನಾ ಅನುಮತಿಯೂ ಅಮಾನ್ಯ
ಇದರ ಜೊತೆಗೆ, ಗುಮಾಸ್ತನ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲು ನೀಡಲಾಗಿದ್ದ ಅಭಿಯೋಜನಾ ಅನುಮತಿ (sanction for prosecution) ಕೂಡ ಅಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡಿತು. ಈ ಅನುಮತಿಯನ್ನು ನೀಡಿದ ಅಧಿಕಾರಿಗೆ ಅದನ್ನು ನೀಡುವ ಕಾನೂನುಬದ್ಧ ಅಧಿಕಾರ ಇರಲಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಲಂಚದ ಬೇಡಿಕೆ ಸಾಬೀತಾಗಿಲ್ಲ ಮತ್ತು ಕೇವಲ 20 ರೂ. ವಸೂಲಿ ಮಾಡಿದ ಆರೋಪವನ್ನು ದೃಢಪಡಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿತು. ಹೀಗಾಗಿ ವಿಚಾರಣಾ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಗುಮಾಸ್ತ ಮತ್ತು ಪ್ಯೂನ್ ಇಬ್ಬರನ್ನೂ ಖುಲಾಸೆಗೊಳಿಸಿತು. ಈ ಮೂಲಕ 1996ರಲ್ಲಿ ಆರಂಭವಾಗಿದ್ದ ರೂ.20 ಲಂಚದ ಆರೋಪದ ಪ್ರಕರಣಕ್ಕೆ ಸುಮಾರು 30 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಅಂತಿಮವಾಗಿ ತೆರೆ ಬಿದ್ದಿದೆ.


ನಿಮ್ಮ ಕಾಮೆಂಟ್ ಬರೆಯಿರಿ