ವಿಜಯಪುರ : ಬಾವಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆ, ತಂದೆಯೂ ನಾಪತ್ತೆ

ವಿಜಯಪುರ: ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ (Vijayapura Tragedy) ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಇದೇ ವೇಳೆ ತಂದೆಯೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಬಾಲಕಿಯರನ್ನು ಸಾಕ್ಷಿ (15) ಮತ್ತು ರಕ್ಷಿತಾ (10) ಎಂದು ಗುರುತಿಸಲಾಗಿದೆ. ಇವರ ತಂದೆ ಸಾಬಣ್ಣ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಕೃಷಿಕ ಸಾಬಣ್ಣ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಸೇರಿದಂತೆ ಐವರು ಮಕ್ಕಳಿದ್ದಾರೆ.

ಶುಕ್ರವಾರ ಅವರ ಪತ್ನಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಹೊರಗೆ ತೆರಳಿದ್ದರು. ಮಗ ಅಜ್ಜನೊಂದಿಗೆ ಇದ್ದ ಎನ್ನಲಾಗಿದ್ದು, ಹೀಗಾಗಿ ಮನೆಯಲ್ಲಿ ಸಾಕ್ಷಿ, ರಕ್ಷಿತಾ ಹಾಗೂ ಸಾಬಣ್ಣ ಮಾತ್ರ ಇದ್ದರು ಎಂದು ಹೇಳಲಾಗಿದೆ.
ನಿಖರವಾಗಿ ಏನಾಯಿತು ಎಂಬುದು ತಿಳಿದುಬಂದಿಲ್ಲ. ಶುಕ್ರವಾರ ಸಂಜೆ ಮೂವರು ತೆರೆದ ಬಾವಿಗೆ ಬಿದ್ದಿದ್ದಾರೆ ಎಂಬ ಶಂಕೆ ವ್ಯಕ್ತವಾದ ನಂತರ ಗ್ರಾಮಸ್ಥರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದಾಗ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿವೆ. ಸಾಬಣ್ಣ ಅವರ ಬಟ್ಟೆಗಳು ಬಾವಿಯ ದಡದಲ್ಲಿ ಪತ್ತೆಯಾಗಿವೆ. ಸಾಬಣ್ಣನೂ ಬಾವಿಗೆ ಬಿದ್ದಿರಬಹುದು ಎಂಬ ಶಂಕೆ ಮೇಲೆ ಅವರಿಗಾಗಿ ಹುಡುಕಾಟ ನಡೆಸಲಾಯಿತಾದರೂ ಸಾಬಣ್ಣ ಪತ್ತೆಯಾಗಿಲ್ಲ. ಈ ಕುರಿತು ನಿಡಗುಂದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ಯಮುನಾ ಪ್ರವಾಹ ಪ್ರದೇಶ ಹಾನಿ ಪ್ರಕರಣ : ʼಆರ್ಟ್ ಆಫ್ ಲಿವಿಂಗ್ʼ ಫೌಂಡೇಶನ್‌ಗೆ ₹5 ಕೋಟಿ ದಂಡ ಮರುಪಾವತಿಸಲು ಸುಪ್ರೀಂ ಕೋರ್ಟ್‌ ಆದೇಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement