

ರಾಂಚಿ: ಪತ್ನಿಯರ ನಡುವೆ ದೀರ್ಘಕಾಲದಿಂದ ನಡೆಯುತ್ತಿದ್ದ ಜಗಳದಿಂದ ಆಕ್ರೋಶಗೊಂಡ ಇಬ್ಬರು ಸಹೋದರರು ತಮ್ಮ ಪತ್ನಿಯರನ್ನೇ ಹತ್ಯೆ ಮಾಡಿ, ಆ್ಯಂಬುಲೆನ್ಸ್‌ನಲ್ಲಿ ಶವಗಳನ್ನು ಸಾಗಿಸಿ ನೆರೆಯ ಜಿಲ್ಲೆಯ ಕಾಡಿನಲ್ಲಿ ಹೂತುಹಾಕಿದ ಭೀಕರ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳಲ್ಲದೆ, ಅವರ ತಂದೆ-ತಾಯಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಗುಮ್ಲಾ ಜಿಲ್ಲೆಯ ಶಿವಶಂಕರ ಸಾಹು ಎಂಬಾತ ಆ್ಯಂಬುಲೆನ್ಸ್ ಚಾಲಕನಾಗಿದ್ದು, ಈತ ತನ್ನ ಸಹೋದರ ನವೀನ್ ಸಾಹು ಜೊತೆ ಸೇರಿ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಅವರನ್ನು ಸೋಮವಾರ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಇಬ್ಬರ ಶವಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದ ಸಹೋದರರು, ನೆರೆಯ ಸಿಮ್ಡೇಗಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೂತುಹಾಕಿದ್ದರು ಎಂದು ಗುಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾರಿಸ್ ಬಿನ್ ಜಮಾ ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಯರಿಬ್ಬರ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಸಹೋದರರು ಅಸಮಾಧಾನಗೊಂಡಿದ್ದರು. ಆದರೆ, ಹತ್ಯೆ ನಡೆಯುವುದಕ್ಕೆ ಕೇವಲ ಎರಡು ದಿನಗಳ ಮೊದಲು ಮಹಿಳೆಯರಿಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ರಾಜಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಆರಂಭದಲ್ಲಿ ತಮ್ಮ ಪತ್ನಿಯರು ಯಾವುದೇ ಮಾಹಿತಿ ನೀಡದೆ ಮನೆಯಿಂದ ಹೊರಟುಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದರು. ಆದರೆ, ಸತತ ವಿಚಾರಣೆಗೆ ಒಳಪಡಿಸಿದಾಗ ಕೊನೆಗೂ ತಾವೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳ ವಿಚಾರಣೆಯ ಬಳಿಕ ಮಹಿಳೆಯರ ಶವಗಳನ್ನು ಪತ್ತೆಹಚ್ಚಲಾಯಿತು. ಬಳಿಕ ಅವುಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮೃತ ಮಹಿಳೆಯರ ಕುಟುಂಬದವರು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆ ಸಂದರ್ಭದಲ್ಲಿ ಎಲ್ಲವೂ ಸಹಜವಾಗಿಯೇ ಕಂಡುಬಂದಿತ್ತು. ಯಾವುದೇ ಅಸಹಜ ಘಟನೆ ನಡೆದಿರುವ ಬಗ್ಗೆ ಕುಟುಂಬದವರಿಗೆ ಅನುಮಾನ ಬಂದಿರಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಹತ್ಯೆಗೆ ಬಳಸಲಾಗಿದ್ದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಮಹಿಳೆಯರ ಶವಗಳನ್ನು ಸಾಗಿಸಲು ಬಳಸಿದ್ದ ಆ್ಯಂಬುಲೆನ್ಸ್ ಅನ್ನೂ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಶಂಕರ ಸಾಹು ಮತ್ತು ನವೀನ್ ಸಾಹು ಅವರ ತಂದೆ ಸಮೇಶ್ವರ ಸಾಹು ಹಾಗೂ ತಾಯಿ ತಿಲೇಶ್ವರಿ ದೇವಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ