ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿಡಿಯೊಕ್ಕೆ ಪಾಕಿಸ್ತಾನ ಪರ ಹಾಡು ಬಳಕೆ; ಎಫ್‌ಐಆರ್‌ ದಾಖಲು

ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ 40 ಅಡಿ ಎತ್ತರದ ಕಟೌಟ್‌ ಸಂಬಂಧ ಹೊಸ ವಿವಾದವೊಂದು ಭುಗಿಲೆದ್ದಿದೆ. ಕಟೌಟ್‌ ಒಳಗೊಂಡ ವಿಡಿಯೋಗೆ ದೇಶವಿರೋಧಿ ಹಾಗೂ ಹಿಂಸಾಚಾರ ಪ್ರಚೋದಿಸುವ ಹಾಡನ್ನು ಹಿನ್ನೆಲೆಯಾಗಿ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ (Chikkamagaluru) 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ (Tipu Sultan cutout) ಹಾಕಲಾಗಿದೆ. ಆದರೆ, ಕಟೌಟ್ ವಿಡಿಯೊನಲ್ಲಿ ಪಾಕ್‌ ಸೇನೆಯ ಮುಜಾಹಿದ್‌ ಹಾಡು ಬಳಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ.

ಈ ವಿಡಿಯೊ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲ ಯುವಕರು ಈ ವಿಡಿಯೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಟಿಪ್ಪು ಸುಲ್ತಾನ್​ ಕಟೌಟ್​ ರೀಲ್ಸ್​​ಗೆ ವಿಡಿಯೊದಲ್ಲಿ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಪಾಕಿಸ್ತಾನ ಪರ ಹಾಡು ಬಳಕೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಭಾವೈಕ್ಯತೆಗೆ ಘಾತಕವಾಗವ ರೀತಿಯಲ್ಲಿ ಮತ್ತು ಕೋಮುಗಳ ನಡುವೆ ಸೌಹಾರ್ದತೆಗೆ ಬಾಧಕವಾಗುವ ರೀತಿಯಲ್ಲಿ, ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡುವ ಉದ್ದೇಶ ಪೂರ್ವಕವಾಗಿ ದ್ವೇಷ ಭಾವವನ್ನುಂಟು ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ಕೋರಲಾಗಿದೆ. ಹೀಗಾಗಿ ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಇನ್ಸ್ಟಾ ಪೇಜ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.
ಈ ಘಟನೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.

ಕೆಲವರು ವಶಕ್ಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಏಳು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಡಿಯೋವನ್ನು ಏಕೆ ಪೋಸ್ಟ್ ಮಾಡಲಾಯಿತು, ಯಾರ ಸೂಚನೆಯ ಮೇರೆಗೆ ಮಾಡಲಾಯಿತು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಯಾರು ಅಪ್‌ಲೋಡ್ ಮಾಡಿದರು ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯಿಸಿ, “ದೇಶದಲ್ಲೇ ಇದ್ದು ದೇಶವಿರೋಧಿ ಚಟುವಟಿಕೆ ನಡೆಸುವವರನ್ನು ಸಹಿಸಬಾರದು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಗೋಹತ್ಯೆ ತಡೆಯಲು ಮುಂದಾದವರ ವಿರುದ್ಧವೂ, ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಸರ್ಕಾರವೇ ಭಾರತ ವಿರೋಧಿ ನಿಲುವುಗಳಿಗೆ ಬೆಂಬಲ ನೀಡುವಂತಿದ್ದರೆ ಅದರ ಅರ್ಥವೇನು ಎಂಬ ಬಗ್ಗೆ ಚರ್ಚೆಯಾಗಬೇಕು. ಬಿಜೆಪಿ ಇಂತಹ ವಿಚಾರಗಳಲ್ಲಿ ದೃಢವಾಗಿ ನಿಲ್ಲಬೇಕು” ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಕೆಲ ಅಪ್ರಾಪ್ತರು ಬೈಕ್‌ಗಳಿಗೆ ಪ್ಯಾಲೆಸ್ತೀನ್ ಧ್ವಜ ಕಟ್ಟಿ ಸಂಚರಿಸಿದ್ದ ಘಟನೆ ವರದಿಯಾಗಿತ್ತು. ಇದೀಗ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲೇ ಪಾಕಿಸ್ತಾನ ಪರ ವಿಡಿಯೋ ವಿವಾದ ಬೆಳಕಿಗೆ ಬಂದಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ನಗರ ಪೊಲೀಸರು ಮುಂದುವರಿಸಿದ್ದು, ವಶಕ್ಕೆ ಪಡೆದಿರುವ ಏಳು ಮಂದಿಯ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಮಂಡ್ಯ : ವೃದ್ಧ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಳಲ್ಲಿ ತುಂಬಿದ್ದ ಕಂತೆ ಕಂತೆ ಹಣ ಪತ್ತೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement