ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೀ ಸ್ಟುಡಿಯೋಸ್‌ನಲ್ಲಿ ಭಾನುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟವನ್ನು ತಮ್ಮದಾಗಿಸಿಕೊಂಡರು.
ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಸಿದ್ದ 52 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿ ಕಾಜಿಯಾ ಈ ಗೌರವಕ್ಕೆ ಪಾತ್ರರಾದರು. ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮನಿಕಾ ವಿಶ್ವಕರ್ಮ ಅವರು ಕಾಜಿಯಾ ಲಿಜ್ ಮೆಜೊ ಅವರಿಗೆ ಕಿರೀಟ ತೊಡಿಸಿದರು.
ಈ ಗೆಲುವಿನೊಂದಿಗೆ ಕಾಜಿಯಾ ಲಿಜ್ ಮೆಜೊ ಅವರು ನವೆಂಬರ್‌ನಲ್ಲಿ ಪ್ಯೂರ್ಟೋ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ಪರ್ಧೆಯಲ್ಲಿ ವೈಷ್ಣವಿ ಗಣೇಶ ಅವರು ಮೊದಲ ರನ್ನರ್-ಅಪ್ ಹಾಗೂ ಮಿಸ್ ಇಂಟರ್‌ನ್ಯಾಷನಲ್ ಇಂಡಿಯಾ 2026 ಪ್ರಶಸ್ತಿಯನ್ನು ಪಡೆದರು. ಅನುಶ್ರಿ ಸತಾವ್ಲೇಕರ್ ದ್ವಿತೀಯ ರನ್ನರ್-ಅಪ್ ಆಗಿ ಆಯ್ಕೆಯಾಗಿದ್ದರೆ, ತೇಜಸ್ವಿನಿ ಶ್ರೀವಾಸ್ತವ ತೃತೀಯ ರನ್ನರ್-ಅಪ್ ಸ್ಥಾನವನ್ನು ಗಳಿಸಿದರು. ಅನುಭಾ ವಶಿಷ್ಠ್ ಚೌಧರಿ ನಾಲ್ಕನೇ ರನ್ನರ್-ಅಪ್ ಆಗಿ ಘೋಷಿಸಲ್ಪಟ್ಟರು.
ಮಿಸ್ ಯೂನಿವರ್ಸ್ ಇಂಡಿಯಾ 2026 ವಿಜೇತರಾದ ಬಳಿಕ ಮಾತನಾಡಿದ ಕಾಜಿಯಾ, “ ಇದು ನನ್ನ ಜೀವನದ ಅತ್ಯಂತ ಐತಿಹಾಸಿಕ ಕ್ಷಣ. ಕಳೆದ ಮೂರು ವರ್ಷಗಳಿಂದ ನಾನು ಈ ಕ್ಷಣಕ್ಕಾಗಿ ಶ್ರಮಿಸುತ್ತಿದ್ದೆ. ಈ ಕಿರೀಟವನ್ನು ನನ್ನ ಕೇರಳಕ್ಕೆ ತಂದುಕೊಡಲು ಸಾಧ್ಯವಾಗಿರುವುದು ನನಗೆ ಅಪಾರ ಸಂತೋಷ ತಂದಿದೆ. ನನ್ನ ಊರನ್ನು ಜಗತ್ತಿಗೆ ಪರಿಚಯಿಸುವ ಹಾಗೂ ಅದನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದರು.
“ಮನುಷ್ಯನು ಎದುರಿಸುವ ಅತಿ ದೊಡ್ಡ ಹೋರಾಟ ತನ್ನೊಳಗೇ ಇರುತ್ತದೆ. ತಾನು ಅಂದುಕೊಳ್ಳುವುದಕ್ಕಿಂತ ಹೆಚ್ಚು ಮೌಲ್ಯವುಳ್ಳವನು ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಕಷ್ಟ. ಕೇವಲ 19ನೇ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಎಂಬ ದೊಡ್ಡ ವೇದಿಕೆಯಲ್ಲಿ ನಿಲ್ಲಲು ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸ ಬೇಕಿತ್ತು. ಆ ಒಳಗಿನ ಹೋರಾಟವನ್ನು ನಾನು ಗೆದ್ದಿದ್ದೇನೆ. ಇಂದು ಈ ಕಿರೀಟದೊಂದಿಗೆ ನಿಂತಿರುವುದು ಅದಕ್ಕೇ ಸಾಕ್ಷಿ” ಎಂದರು.
“ಮಿಸ್ ಯೂನಿವರ್ಸ್ ಕಿರೀಟವನ್ನು ಭಾರತಕ್ಕೆ ತಂದುಕೊಡುವುದೇ ನನ್ನ ಮೊದಲ ಮತ್ತು ಅತಿದೊಡ್ಡ ಗುರಿ. ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಭಾರತವನ್ನು, ಕೇರಳವನ್ನು ಮತ್ತು ಭಾರತೀಯತೆಯ ಅರ್ಥವನ್ನು ಜಗತ್ತಿನ ಮುಂದೆ ಪ್ರತಿನಿಧಿಸಲು ಬಯಸುತ್ತೇನೆ” ಎಂದು ಹೇಳಿದರು.
ಸ್ಪರ್ಧೆಯ ತೀರ್ಪುಗಾರರ ಮಂಡಳಿಯಲ್ಲಿ ಭಾರತದ ಮೊದಲ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್, ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ಉರ್ವಶಿ ರೌಟೆಲಾ, ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ, ಪರಿಸರ ಹೋರಾಟಗಾರ್ತಿ ಹಾಗೂ ಚಲನಚಿತ್ರ ನಿರ್ಮಾಪಕಿ ಪ್ರಜ್ಞಾ ಕಪೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಾಜಿ ಮಿಸ್ ಇಂಡಿಯಾ ಯೂನಿವರ್ಸ್ ಹಾಗೂ ಮಿಸ್ ಯೂನಿವರ್ಸ್ ರನ್ನರ್-ಅಪ್ ಸೆಲಿನಾ ಜೇಟ್ಲಿಯೂ ತೀರ್ಪುಗಾರರ ತಂಡದಲ್ಲಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ