ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಕೆಲದಿನಗಳ ಹಿಂದೆ ತನ್ನ ನೂತನ ರಾಷ್ಟ್ರೀಯ ಪದಾಧಿಕಾರಿಗಳನ್ನು ಘೋಷಿಸಿದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
2029ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜೊತೆಗೆ ಮುಂಬರುವ ವಿವಿಧ ರಾಜ್ಯ ವಿಧಾನಸಭೆ ಚುನಾವಣೆಗಳ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈಗ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 69 ಸದಸ್ಯರಿದ್ದಾರೆ. ಸಂವಿಧಾನದ 75(1A)ನೇ ವಿಧಿಯ ಪ್ರಕಾರ ಸಚಿವ ಸಂಪುಟದ ಗರಿಷ್ಠ ಸಂಖ್ಯೆ 81ರ ವರೆಗೆ ಇರಬಹುದಾಗಿದ್ದರಿಂದ ಇನ್ನೂ 12 ಸ್ಥಾನಗಳು ಖಾಲಿ ಇವೆ. ಈ ಹುದ್ದೆಗಳನ್ನು ಮಿತ್ರಪಕ್ಷಗಳ ಪ್ರತಿನಿಧಿಗಳು, ಯುವ ನಾಯಕರು ಮತ್ತು ಮಹಿಳಾ ನಾಯಕರಿಗೆ ನೀಡುವ ಸಾಧ್ಯತೆಗಳಿವೆ.
ಸಚಿವ ಸಂಪುಟದಿಂದ ಯಾರು ಹೊರಬೀಳಬಹುದು?
ಇತ್ತೀಚಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಮೂರು ಪ್ರಮುಖ ಬದಲಾವಣೆಗಳು ನಡೆದಿವೆ. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಹಾಗೂ ರೈಲ್ವೆ ಖಾತೆಯ ರಾಜ್ಯ ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರ ರಾಜ್ಯಸಭಾ ಅವಧಿ ಮುಕ್ತಾಯವಾದ ಕಾರಣ ಸಚಿವ ಸ್ಥಾನ ತೊರೆದಿದ್ದಾರೆ.
ಇದೀಗ ಪಕ್ಷದ ಸಂಘಟನಾ ಜವಾಬ್ದಾರಿ ಪಡೆದಿರುವ ಕೆಲ ಸಚಿವರು ಕೂಡ ಸಂಪುಟದಿಂದ ಹೊರಬೀಳುವ ಸಾಧ್ಯತೆ ಇದೆ. ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ಹರ್ಷ್ ಮಲ್ಹೋತ್ರಾ ಹಾಗೂ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ಪಂಕಜ ಚೌಧರಿ ನೇಮಕಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ನೇತೃತ್ವದ ತಂಡದಲ್ಲಿ ಕೆಲವು ಸಚಿವರಿಗೆ ಪ್ರಮುಖ ಸಂಘಟನಾ ಜವಾಬ್ದಾರಿಗಳನ್ನೂ ನೀಡಲಾಗಿದೆ. ಇದರ ಜೊತೆಗೆ ರಾಜ್ಯಸಭಾ ಅವಧಿ ಮುಗಿಯಲಿರುವ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ಬಿ.ಎಲ್. ವರ್ಮಾ ಅವರ ಸಚಿವ ಸ್ಥಾನವೂ ಚರ್ಚೆಯಲ್ಲಿದೆ.
ಬಿಜೆಪಿಯ ಸಾಂಪ್ರದಾಯಿಕ “ಒಬ್ಬ ವ್ಯಕ್ತಿಗೆ ಒಂದು ಹುದ್ದೆ” ನೀತಿ ಕೂಡ ಈ ಪುನರ್ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದ್ದ ಸ್ಮೃತಿ ಇರಾನಿ, ವಿನೋದ್ ತಾವಡೆ, ಸತೀಶ ಪೂನಿಯಾ ಹಾಗೂ ತರುಣ್ ಚುಗ್ ಅವರಿಗೆ ಸಚಿವ ಸ್ಥಾನ ಬದಲಾಗಿ ಪಕ್ಷದ ಸಂಘಟನಾ ಜವಾಬ್ದಾರಿಗಳನ್ನು ನೀಡಲಾಗಿದೆ.
ಯುವ ಮುಖಗಳಿಗೆ ಆದ್ಯತೆ
ಮೋದಿ 3.0 ಸರ್ಕಾರದಲ್ಲಿ ಸಚಿವ ಸಂಪುಟದ 65 ಶೇಕಡಕ್ಕೂ ಹೆಚ್ಚು ಸದಸ್ಯರು 51 ರಿಂದ 70 ವರ್ಷ ವಯೋಮಾನದವರಾಗಿದ್ದಾರೆ. 31 ರಿಂದ 50 ವರ್ಷದೊಳಗಿನವರ ಪ್ರಮಾಣ ಕೇವಲ 24 ಶೇಕಡಾ ಇದೆ.ಪ್ರಸ್ತುತ ಕನಿಷ್ಠ 12 ಸಂಪುಟ ಸಚಿವರು ಅಥವಾ ಸ್ವತಂತ್ರ ಪ್ರಭಾರ ಹೊಂದಿರುವ ಸಚಿವರು 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಬಿಹಾರದ ಮಿತ್ರಪಕ್ಷ ಎಚ್ಎಎಂ (HAM) ನಾಯಕ ಜೀತನ್ ರಾಮ್ ಮಾಂಝಿ (81) ಹಿರಿಯ ಸಚಿವರಾಗಿದ್ದರೆ, ಆಂಧ್ರಪ್ರದೇಶದ ಟಿಡಿಪಿ ನಾಯಕ ಕೆ. ರಾಮಮೋಹನ ನಾಯ್ಡು (38) ಕಿರಿಯ ಸಚಿವರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವ ನಾಯಕರು ಹಾಗೂ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮುಂದಿನ ಚುನಾವಣೆಗೆ ಹೊಸ ಸಂದೇಶ ನೀಡುವ ಪ್ರಯತ್ನ ನಡೆಯಬಹುದು ಎಂದು ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ಆಡಳಿತದ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಗಳಿರುವುದರಿಂದ ಈ ರಾಜ್ಯಗಳಿಂದ ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಿಗೂ ವಿಶೇಷ ಮಹತ್ವ ನೀಡಬಹುದಾಗಿದೆ.
ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ಮುಂದಿನ ವರ್ಷದ ಅಂತ್ಯದೊಳಗೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಹೀಗಾಗಿ ಈ ರಾಜ್ಯಗಳ ರಾಜಕೀಯ ಸಮೀಕರಣಗಳು ಸಚಿವ ಸಂಪುಟ ವಿಸ್ತರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಿತ್ರಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ?
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಪಕ್ಷದ ಲೋಕಸಭಾ ಸದಸ್ಯರ ಸಂಖ್ಯೆ ಇದೀಗ 13ಕ್ಕೆ ಏರಿಕೆಯಾಗಿದೆ. ಉದ್ಧವ್ ಠಾಕ್ರೆ ಬಣದ ಕೆಲ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾದ ಬಳಿಕ ಈ ಬಲವರ್ಧನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಏಕನಾಥ ಶಿಂಧೆ ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ ಶಿಂಧೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ಚರ್ಚೆ ಜೋರಾಗಿದೆ.
ಪಂಜಾಬ್ನಲ್ಲೂ ರಾಜಕೀಯ ಸಮೀಕರಣಗಳು ಬದಲಾಗುತ್ತಿವೆ. ರಾಘವ ಚಡ್ಡಾ ನೇತೃತ್ವದ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದರಿಂದ ಈ ಗುಂಪಿಗೆ ಸಚಿವ ಸಂಪುಟದಲ್ಲಿ ಪ್ರತಿನಿಧಿತ್ವ ಸಿಗುವ ಸಾಧ್ಯತೆ ಇದೆ. ಇವರಲ್ಲಿ ಸಂದೀಪ ಪಾಠಕ್ ಅವರಿಗೆ ಈಗಾಗಲೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಇದೇ ವೇಳೆ, ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳ (ಎಸ್ಎಡಿ) ನಡುವಿನ ಹಳೆಯ ಮೈತ್ರಿ ಪುನಃ ಜೀವಂತವಾಗುವ ಸಾಧ್ಯತೆಗಳೂ ಕೇಳಿಬರುತ್ತಿವೆ. 2020ರಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಿ ಮೋದಿ ಸಚಿವ ಸಂಪುಟ ತೊರೆದಿದ್ದ ಹರ್ಸಿಮ್ರತ್ ಕೌರ್ ಬಾದಲ್ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದೆ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸಮೀಕರಣ
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಎನ್ಸಿಪಿಐ ಮೂಲಕ ಎನ್ಡಿಎಗೆ ಬೆಂಬಲ ನೀಡಿರುವ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸಂಸದರ ಗುಂಪಿಗೂ ಸಚಿವ ಸಂಪುಟದಲ್ಲಿ ಅವಕಾಶ ದೊರೆಯಬಹುದು ಎನ್ನಲಾಗಿದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ವಿಜಯ ಅವರ ಟಿವಿಕೆ ನಡುವಿನ ಮೈತ್ರಿಯಿಂದ ಅಸಮಾಧಾನಗೊಂಡಿರುವ ಡಿಎಂಕೆ, ಇಂಡಿಯಾ ಮೈತ್ರಿಕೂಟದಿಂದ ದೂರ ಸರಿದು ಎನ್ಡಿಎಗೆ ಸೇರುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಬಣದೊಂದಿಗೆ ಎನ್ಸಿಪಿ ಪುನರ್ಏಕೀಕರಣವಾದರೆ, ಪಕ್ಷವು ಕೇಂದ್ರದಲ್ಲಿ ಹೆಚ್ಚಿನ ಸಚಿವ ಸ್ಥಾನಗಳನ್ನು ಕೇಳುವ ಸಾಧ್ಯತೆಯೂ ಇದೆ.
ಬಹುಖಾತೆ ಸಚಿವರ ಹೊರೆ ಕಡಿಮೆ ಮಾಡುವ ಯತ್ನ
ರಾಜಕೀಯ ಲೆಕ್ಕಾಚಾರಗಳ ಜೊತೆಗೆ ಆಡಳಿತಾತ್ಮಕ ಕಾರಣಗಳೂ ಪುನರ್ರಚನೆಗೆ ಕಾರಣವಾಗಬಹುದು. ಪ್ರಸ್ತುತ 14 ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.
ಅಮಿತ್ ಶಾ (ಗೃಹ ಮತ್ತು ಸಹಕಾರ), ಜೆ.ಪಿ. ನಡ್ಡಾ (ಆರೋಗ್ಯ ಹಾಗೂ ರಾಸಾಯನಿಕ-ರಸಗೊಬ್ಬರ), ಶಿವರಾಜ ಸಿಂಗ್ ಚೌಹಾಣ (ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ), ಮನೋಹರ ಲಾಲ್ ಖಟ್ಟರ್ (ವಸತಿ-ನಗರಾಭಿವೃದ್ಧಿ ಹಾಗೂ ವಿದ್ಯುತ್), ಎಚ್.ಡಿ. ಕುಮಾರಸ್ವಾಮಿ (ಭಾರೀ ಕೈಗಾರಿಕೆ ಮತ್ತು ಉಕ್ಕು), ರಾಜೀವ ರಂಜನ್ ಸಿಂಗ್ ‘ಲಲ್ಲನ್’ (ಪಂಚಾಯತ್ ರಾಜ್, ಮೀನುಗಾರಿಕೆ ಮತ್ತು ಪಶುಸಂಗೋಪನೆ), ಪ್ರಲ್ಹಾದ ಜೋಶಿ (ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಹಾಗೂ ಶಿಕ್ಷಣ), ಅಶ್ವಿನಿ ವೈಷ್ಣವ್ (ರೈಲ್ವೆ, ಮಾಹಿತಿ-ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್-ಐಟಿ), ಜ್ಯೋತಿರಾದಿತ್ಯ ಸಿಂಧಿಯಾ (ಸಂಪರ್ಕ ಮತ್ತು ಈಶಾನ್ಯಾಭಿವೃದ್ಧಿ), ಗಜೇಂದ್ರ ಸಿಂಗ್ ಶೇಖಾವತ್ (ಸಂಸ್ಕೃತಿ ಮತ್ತು ಪ್ರವಾಸೋದ್ಯಮ), ಕಿರಣ ರಿಜಿಜು (ಸಂಸತ್ತೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು), ಮನ್ಸುಖ್ ಮಾಂಡವಿಯಾ (ಕಾರ್ಮಿಕ, ಯುವಜನ ಹಾಗೂ ಕ್ರೀಡೆ) ಮತ್ತು ಜಿ. ಕಿಶನ್ ರೆಡ್ಡಿ (ಕಲ್ಲಿದ್ದಲು ಮತ್ತು ಗಣಿ) ಸೇರಿದಂತೆ ಹಲವರು ಬಹುಖಾತೆಗಳನ್ನು ನೋಡುತ್ತಿದ್ದಾರೆ.
ಹೀಗಾಗಿ ಸಚಿವ ಸಂಪುಟ ಪುನರ್ರಚನೆಯ ಮೂಲಕ ಹೊಸ ಮುಖಗಳಿಗೆ ಅವಕಾಶ ನೀಡುವುದರ ಜೊತೆಗೆ ಹಲವು ಸಚಿವರ ಮೇಲಿರುವ ಆಡಳಿತಾತ್ಮಕ ಹೊರೆಯನ್ನು ಹಂಚಿಕೆ ಮಾಡುವ ಪ್ರಯತ್ನವೂ ನಡೆಯುವ ಸಾಧ್ಯತೆ ಇದೆ.
ಒಟ್ಟಾರೆ, ಮೋದಿ ಸರ್ಕಾರದ ಮುಂದಿನ ಸಚಿವ ಸಂಪುಟ ಪುನರ್ರಚನೆ ಕೇವಲ ಹುದ್ದೆಗಳ ಬದಲಾವಣೆ ಮಾತ್ರವಾಗದೇ, 2029ರ ಲೋಕಸಭೆ ಚುನಾವಣೆ, ವಿವಿಧ ರಾಜ್ಯಗಳ ಚುನಾವಣಾ ಸವಾಲುಗಳು, ಮಿತ್ರಪಕ್ಷಗಳ ಸಮತೋಲನ, ಯುವ ನಾಯಕತ್ವದ ಉತ್ತೇಜನ ಮತ್ತು ಆಡಳಿತದ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡಿರುವ ದೊಡ್ಡ ರಾಜಕೀಯ ತಂತ್ರದ ಭಾಗವಾಗಿರಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ