ಆಪರೇಷನ್ ಸಿಂಧೂರ : ಪಾಕ್ ಪರಮಾಣು ನೆಲೆ ಮೇಲೆ ಭಾರತ ದಾಳಿ ಮಾಡಿತ್ತೇ? ಮಾಜಿ ಸಿಡಿಎಸ್‌ ಹೇಳಿದ್ದೇನು..?

ನವದೆಹಲಿ: ಭಾರತವು ಕಳೆದ ವರ್ಷದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸ್ಕಾರ್ದು ವಾಯುನೆಲೆ ಮೇಲೆ ದಾಳಿ ನಡೆಸಲು ಯೋಜಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಆ ಕಾರ್ಯಾಚರಣೆಯನ್ನು ಕೈಬಿಡಬೇಕಾಯಿತು ಎಂದು ಭಾರತದ ಮಾಜಿ ರಕ್ಷಣಾ ಸಿಬ್ಬಂದಿ (CDS) ಮುಖ್ಯಸ್ಥ ಜನರಲ್ ಅನಿಲ ಚೌಹಾಣ ಬಹಿರಂಗಪಡಿಸಿದ್ದಾರೆ.
ನವದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ಮಾತನಾಡಿದ ಅವರು, ಭಾರತೀಯ ವಾಯುಪಡೆಗೆ ಸ್ಕಾರ್ದು ನೆಲೆಯ ಮೇಲೆ ದಾಳಿ ನಡೆಸಲು ಅನುಮತಿ ನೀಡಲಾಗಿತ್ತು ಎಂದು ದೃಢಪಡಿಸಿದರು. ಆದರೆ ಹವಾಮಾನ ವೈಪರೀತ್ಯದ ಕಾರಣ ಗುರಿಯನ್ನು ಬದಲಾಯಿಸಿ ಬಲೂಚಿಸ್ತಾನದ ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಲಾಯಿತು ಎಂದು ವಿವರಿಸಿದರು.
ಸ್ಕಾರ್ದು ನೆಲೆ, ಅಧಿಕೃತವಾಗಿ ಪಿಎಎಫ್ ಬೇಸ್ ಖಾದ್ರಿ (PAF Base Qadri) ಎಂದು ಕರೆಯಲ್ಪಡುತ್ತದೆ. ಇದು ಪಾಕಿಸ್ತಾನ ವಾಯುಪಡೆಯ ಮುಂಚೂಣಿ ಕಾರ್ಯಾಚರಣಾ ನೆಲೆಯಾಗಿದ್ದು, ಪಿಒಕೆಯ ಗಿಲ್ಗಿತ್-ಬಾಲ್ಟಿಸ್ತಾನದ ಸ್ಕಾರ್ದು ಪ್ರದೇಶದ ಸಮೀಪದಲ್ಲಿದೆ.

ಈ ಕುರಿತು ಮಾತನಾಡಿದ ಜನರಲ್ ಚೌಹಾಣ, “ವಾಯುಪಡೆಯ ಮುಖ್ಯಸ್ಥರು ಸರ್ಗೋಧಾ ಮೇಲೆ ದಾಳಿ ನಡೆಸಬಹುದೇ ಎಂದು ನನ್ನನ್ನು ಕೇಳಿದ್ದರು. ನಾನು ‘ಮುಂದುವರಿಯಿರಿ’ ಎಂದು ಹೇಳಿದೆ. ಜೊತೆಗೆ ಇನ್ನೂ ಎರಡು ಗುರಿಗಳನ್ನು ಗುರುತಿಸಲು ಸೂಚಿಸಿದೆ. ಅವುಗಳಲ್ಲಿ ಒಂದು ಸ್ಕಾರ್ದು. ನಾವು ಅದಕ್ಕೂ ಅನುಮೋದನೆ ನೀಡಿದ್ದೆವು. ಆದರೆ ಕೆಲವೇ ಸಮಯದಲ್ಲಿ ಸ್ಕಾರ್ದುವಿನಲ್ಲಿ ಹವಾಮಾನ ಹದಗೆಟ್ಟ ಕಾರಣ ಗುರಿಯನ್ನು ಬದಲಾಯಿಸಿ ಭೋಲಾರಿಗೆ ದಾಳಿ ನಡೆಸಲಾಯಿತು” ಎಂದು ಹೇಳಿದರು.
ಭೋಲಾರಿ ದಾಳಿಯೇ ಮೇ 10ರ ಕಾರ್ಯಾಚರಣೆಯ ಪ್ರಮುಖ ಸಂಕೇತ
ಮೇ 10ರಂದು ಭಾರತೀಯ ವಾಯುಪಡೆ ನಡೆಸಿದ ಭೋಲಾರಿ ಹ್ಯಾಂಗರ್ ಮೇಲಿನ ದಾಳಿ ಆ ಕಾರ್ಯಾಚರಣೆಯ ಅತ್ಯಂತ ಗಮನಾರ್ಹ ಘಟನೆಯಾಗಿ ಪರಿಣಮಿಸಿತ್ತು. ಗಾಂಧಿನಗರ ಮೂಲದ ಭಾರತೀಯ ವಾಯುಪಡೆಯ ದಕ್ಷಿಣ ಪಶ್ಚಿಮ ವಾಯು ಕಮಾಂಡ್ ಈ ದಾಳಿಯನ್ನು ನಡೆಸಿತ್ತು.
ನಂತರ ಬಹಿರಂಗಗೊಂಡ ಉಪಗ್ರಹ ಚಿತ್ರಗಳಲ್ಲಿ ಹ್ಯಾಂಗರ್‌ನ ಮೇಲ್ಛಾವಣಿಯಲ್ಲಿ ಭಾರಿ ರಂಧ್ರ ಉಂಟಾಗಿರುವುದು, ಒಳಭಾಗ ಕುಸಿದಿರುವುದು ಹಾಗೂ ರನ್‌ವೇ ಸಂಪರ್ಕ ಪ್ರದೇಶದಲ್ಲಿ ಅವಶೇಷಗಳು ಚದುರಿರುವುದು ಕಂಡುಬಂದಿತ್ತು. ಸ್ಫೋಟದಿಂದ ಅವಶೇಷಗಳು ಹೊರಕ್ಕೆ ಎಸೆಯಲ್ಪಟ್ಟಿರುವುದು ಸ್ಪಷ್ಟವಾಗಿದ್ದು, ಹಾನಿ ಒಂದೇ ಕಟ್ಟಡಕ್ಕೆ ಸೀಮಿತವಾಗಿರುವುದರಿಂದ ಇದು ಅತ್ಯಂತ ನಿಖರವಾದ ದಾಳಿಯಾಗಿತ್ತು ಎಂಬುದು ತಿಳಿದುಬಂದಿತ್ತು.

ಪ್ರಮುಖ ಸುದ್ದಿ :-   ಇರಾನ್‌ಗೆ ಹೊಡೆತ ನೀಡಲು ಅಮೆರಿಕ ಕ್ರಮ ; 4 ಭಾರತೀಯ ಕಂಪನಿಗಳು, 3 ಭಾರತೀಯರ ಮೇಲೆ ನಿರ್ಬಂಧ

ಪಾಕಿಸ್ತಾನದ ಪರಮಾಣು ಕೇಂದ್ರ ಕಿರಾಣಾ ಹಿಲ್ಸ್‌ಗೆ ಡ್ರೋನ್ ಅಪ್ಪಳಿಸಿತ್ತು
ಇದೇ ವೇಳೆ ಮತ್ತೊಂದು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ ಜನರಲ್ ಚೌಹಾಣ, ಪಾಕಿಸ್ತಾನದ ಸೇನೆಯ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಮುಖ ಪ್ರದೇಶವಾದ ಕಿರಾಣಾ ಹಿಲ್ಸ್ ಮೇಲೂ ಭಾರತೀಯ ಲಾಯಿಟರ್ ಮ್ಯೂನಿಷನ್ (Loiter Munition) ಡ್ರೋನ್ ಅಪ್ಪಳಿಸಿತ್ತು ಎಂದು ದೃಢಪಡಿಸಿದರು.
ಆದರೆ ಇದು ಉದ್ದೇಶಪೂರ್ವಕ ದಾಳಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಭಾರತೀಯ ಡ್ರೋನ್ ಸರ್ಗೋಧಾ ಪ್ರದೇಶದ ರಡಾರ್ ವ್ಯವಸ್ಥೆಗಳನ್ನು ಹುಡುಕಿ ದಾಳಿ ಮಾಡಲು ಕಳುಹಿಸಲಾಗಿತ್ತು. ಆದರೆ ಅದು ತನ್ನ ಗುರಿಯನ್ನು ಪತ್ತೆಹಚ್ಚದೇ ಇಂಧನ ಕಡಿಮೆಯಾದ ಕಾರಣ ಕಿರಾಣಾ ಹಿಲ್ಸ್ ಪ್ರದೇಶದಲ್ಲಿ ಅಪ್ಪಳಿಸಿರಬಹುದು ಎಂದು ವಿವರಿಸಿದರು.
“ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಕಿರಾಣಾ ಹಿಲ್ಸ್ ನಮ್ಮ ಗುರಿಯಾಗಿರಲಿಲ್ಲ ಎಂದು ಸರಿಯಾಗಿ ಸ್ಪಷ್ಟಪಡಿಸಿದ್ದರು. ನಾನು ಅದರ ಹಿನ್ನೆಲೆಯನ್ನು ವಿವರಿಸಬಲ್ಲೆ,” ಎಂದು ಚೌಹಾಣ ಹೇಳಿದರು.
“ಸರ್ಗೋಧಾ ಮೇಲೆ ದಾಳಿಗೆ ಮುನ್ನ ನಾವು ಅನೇಕ ಲಾಯಿಟರ್ ಮ್ಯೂನಿಷನ್‌ಗಳನ್ನು ಕಳುಹಿಸಿದ್ದೆವು. ಕಿರಾಣಾ ಹಿಲ್ಸ್ ಸರ್ಗೋಧಾದಿಂದ ಸುಮಾರು 10 ಕಿಲೋಮೀಟರ್ ಉತ್ತರಕ್ಕೆ ಇದೆ. ಆ ಡ್ರೋನ್‌ಗಳು ಸರ್ಗೋಧಾ ಸುತ್ತಮುತ್ತಲಿನ ರಡಾರ್‌ಗಳನ್ನು ಹುಡುಕುತ್ತಾ ಸುಮಾರು ಎರಡು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಆ ಅವಧಿಯಲ್ಲಿ ಗುರಿ ಸಿಗದಿದ್ದರೆ ಅವು ಎಲ್ಲಾದರೂ ಅಪ್ಪಳಿಸುತ್ತವೆ. ಬಹುಶಃ ಅವುಗಳಲ್ಲಿ ಒಂದೊಂದು ಕಿರಾಣಾ ಹಿಲ್ಸ್‌ನ ಬೆಟ್ಟವೊಂದಕ್ಕೆ ಅಪ್ಪಳಿಸಿರಬಹುದು” ಎಂದು ಅವರು ವಿವರಿಸಿದರು.
ಜನರಲ್ ಚೌಹಾಣ ಅವರ ಈ ಹೇಳಿಕೆಗಳು, ಆಪರೇಷನ್ ಸಿಂಧೂರ್ ವೇಳೆ ಭಾರತ ಕೈಗೊಂಡಿದ್ದ ವಾಯು ಕಾರ್ಯಾಚರಣೆಗಳ ವ್ಯಾಪ್ತಿ, ಗುರಿ ಆಯ್ಕೆ ಹಾಗೂ ಕಿರಾಣಾ ಹಿಲ್ಸ್ ಘಟನೆಯ ಕುರಿತು ಇದುವರೆಗೆ ಇದ್ದ ಹಲವು ಊಹಾಪೋಹಗಳಿಗೆ ಹೊಸ ಬೆಳಕು ಚೆಲ್ಲಿವೆ.

ಪ್ರಮುಖ ಸುದ್ದಿ :-   ಮೋದಿ 3.0 ಸಚಿವ ಸಂಪುಟಕ್ಕೆ ಶೀಘ್ರ ಮೇಜರ್ ಸರ್ಜರಿ ? 12 ಖಾಲಿ ಸ್ಥಾನಗಳಿಗೆ ಯಾರಿಗೆ ಅವಕಾಶ, ಯಾರಿಗೆ ಕೊಕ್‌ ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement