ಆನ್‌ಲೈನ್‌ನಲ್ಲಿ ವಿಷಕಾರಿ ʼದತ್ತೂರʼ ಮಾರಾಟ: ಅಮೆಜಾನ್‌, ಇನ್‌ಸ್ಟಾಮಾರ್ಟ್‌, ಬಿಗ್‌ಬಾಸ್ಕೆಟ್‌ ಆಹಾರ ಲೈಸನ್ಸ್‌ ಸಸ್ಪೆಂಡ್‌

ಬೆಂಗಳೂರು: ವಿಷಕಾರಿ ಸಸ್ಯವಾದ ಧತ್ತೂರ (Datura)ವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್‌,  ಇನ್‌ಸ್ಟಾಮಾರ್ಟ್‌ ಹಾಗೂ ಬಿಗ್‌ಬಾಸ್ಕೆಟ್‌ಗೆ ನೀಡಲಾಗಿದ್ದ ಆಹಾರ ಪರವಾನಗಿಗಳನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ಅಮಾನತುಗೊಳಿಸಿದೆ. ಇಲಾಖೆಯಿಂದ ಮುಂದಿನ ಆದೇಶ ಹೊರಬೀಳುವವರೆಗೆ ಈ ಅಮಾನತು ಜಾರಿಯಲ್ಲಿರಲಿದೆ.
ಇತ್ತೀಚೆಗೆ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಧತ್ತೂರದ ಹಣ್ಣುಗಳು ಹಾಗೂ ಬೀಜಗಳನ್ನು ಮಾನವ ಬಳಕೆಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು. ಕೆಲವು ಪ್ಯಾಕೆಟ್‌ಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ನೀಡುವ ಪರವಾನಗಿ ಅಥವಾ ನೋಂದಣಿ ಸಂಖ್ಯೆಗಳೂ ಮುದ್ರಿತವಾಗಿದ್ದವು. ಇದರಿಂದ ಆಹಾರ ಸಂಬಂಧಿತ ಉತ್ಪನ್ನಗಳಂತೆ ಈ ವಸ್ತುಗಳನ್ನು ಹೇಗೆ ಪಟ್ಟಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿವೆ.

ಧತ್ತೂರವು ವಿಷಕಾರಿ ಸಸ್ಯವಾಗಿದ್ದು, ಅದರ ಸೇವನೆಯು ಮಾನವ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಮತ್ತು ಬಿಗ್‌ಬಾಸ್ಕೆಟ್‌ ಸೇರಿದಂತೆ ಸಂಬಂಧಿತ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಿಗೆ ಧತ್ತೂರವನ್ನು ಮಾನವ ಬಳಕೆಗಾಗಿ ಮಾರಾಟ ಮಾಡುವ ಎಲ್ಲಾ ಆನ್‌ಲೈನ್‌ ಪಟ್ಟಿಗಳು ಹಾಗೂ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ ಧತ್ತೂರವನ್ನು ಆಹಾರ ಉತ್ಪನ್ನವೆಂದು ಪರಿಗಣಿಸಿ ಮಾರಾಟ, ವಿತರಣೆ ಅಥವಾ ಪ್ರದರ್ಶನ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಆದೇಶಿಸಲಾಗಿದೆ. ಕೇವಲ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಷ್ಟೇ ಅಲ್ಲದೆ, ಈ ಉತ್ಪನ್ನಗಳನ್ನು ಪೂರೈಸುತ್ತಿದ್ದ ಮಾರಾಟಗಾರರು ಹಾಗೂ ಕಂಪನಿಗಳ ಪರವಾನಗಿ ಮತ್ತು ನೋಂದಣಿಗಳ ಅಮಾನತಿಗೂ ಇಲಾಖೆ ಕ್ರಮ ಕೈಗೊಂಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಈ ವಿಚಾರದಲ್ಲಿ ಅಮೆಜಾನ್‌ ಯಾವುದೇ ಉತ್ತರವನ್ನು ಸಲ್ಲಿಸಿಲ್ಲ ಎಂದು ಇಲಾಖೆ ತಿಳಿಸಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿದೆ. ಇನ್ನೊಂದೆಡೆ ಬಿಗ್‌ಬಾಸ್ಕೆಟ್‌ ಧತ್ತೂರದ ಮಾರಾಟವನ್ನು ಈಗಾಗಲೇ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಉತ್ಪನ್ನಗಳನ್ನು ಪಟ್ಟಿ ಮಾಡುವ ಅಗತ್ಯ ಬಂದರೆ “NOT FOR HUMAN CONSUMPTION” (ಮಾನವ ಬಳಕೆಗೆ ಅಲ್ಲ) ಎಂಬ ಎಚ್ಚರಿಕೆ ಲೇಬಲ್‌ ಅಳವಡಿಸಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.
ಆನ್‌ಲೈನ್‌ ವೇದಿಕೆಗಳು ಹಾಗೂ ಸಂಬಂಧಿತ ಪಕ್ಷಗಳಿಂದ ಇಲಾಖೆ ಅನುಸರಣೆ ವರದಿಗಳನ್ನು ಕೋರಿದೆ. ಇಲಾಖೆಯ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ದತ್ತೂರಿ ಹಣ್ಣು ಮತ್ತು ಬೀಜಗಳನ್ನ ಕೆಲವರು ಆಯುರ್ವೇದ ಅಥವಾ ಸಾಂಪ್ರದಾಯಿಕ ಔಷಧೀಯ ಉದ್ದೇಶಗಳಿಗಾಗಿ ಹಾಗೂ ಧಾರ್ಮಿಕ ಪೂಜೆಗಳಿಗೆ ಬಳಸುತ್ತಾರೆ. ಆದರೆ ಧತ್ತೂರವು ವಿಷಕಾರಿ ಸಸ್ಯವಾಗಿರುವುದರಿಂದ ಅದನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಹೀಗಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾರಾಟ ಮಾಡಬಾರದು ಎಂದು ತಜ್ಞರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement