ಕರ್ನಾಟಕದ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ ಸರ್ಕಾರ ; ಅವು ಯಾವುವು ? ಪಟ್ಟಿ ಇಲ್ಲಿದೆ

ಬೆಂಗಳೂರು: ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಉಪ ಮುಖ್ಯಮಂತ್ರಿ, ಕಂದಾಯ ಸಚಿವ ಡಾ ಜಿ ಪರಮೇಶ್ವರ ಅವರು ಗುರುವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, 1976ರ ನಂತರ ಇದೇ ಮೊದಲ ಬಾರಿಗೆ ಇಂತಹ ಭೀಕರ ಬರಗಾಲ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 101 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲಾಗಿದೆ. 89 ತಾಲೂಕು ತೀವ್ರ ಬರ, ಇನ್ನೂ 12 ತಾಲೂಕುಗಳಲ್ಲಿ ಸಾಧಾರಣ ಬರ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.
ಶೇ 30 ರಷ್ಟು ಮಳೆ ಕೊರತೆ
ಜೂನ್ 1 ರಿಂದ ಆಗಸ್ಟ್ 26ರ ವರೆಗಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ವಾಡಿಕೆಯಂತೆ 666 ಮಿ.ಮೀ ಮಳೆಯಾಗಬೇಕಿತ್ತು. ಆದರೆ 465 ಮಿ.ಮೀ ಮಳೆಯಾಗಿದ್ದು, ಶೇ.30 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31, ಕರಾವಳಿಯಲ್ಲಿ ಶೇ.24 ರಷ್ಟು ಮಳೆ ಕೊರತೆ ದಾಖಲಾಗಿದೆ. ರಾಜ್ಯದ 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆ ವ್ಯಾಪ್ತಿಯಲ್ಲಿದ್ದು, 134 ತಾಲೂಕುಗಳು ಹೆಚ್ಚು ಕೊರತೆ ಎದುರಿಸಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಬರ ಕೈಪಿಡಿ-2020ರ ಮಾರ್ಗಸೂಚಿಯಂತೆ ‘ಟ್ರಿಗರ್-1’ ಅಡಿಯಲ್ಲಿ 134 ತಾಲೂಕುಗಳು ಅರ್ಹತೆ ಪಡೆದಿದ್ದವು. ಇದರಲ್ಲಿ ಬೆಳೆಗಳ ಸ್ಥಿತಿಗತಿ, ತೇವಾಂಶ ಮತ್ತಿತರ ಅಂಶಗಳನ್ನು ಆಧರಿಸಿ ‘ಗ್ರೌಂಡ್ ಟ್ರೂಥಿಂಗ್’ ಮಾಡಿದ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 89 ತಾಲೂಕುಗಳಲ್ಲಿ ತೀವ್ರ ಹಾಗೂ 12 ತಾಲೂಕುಗಳಲ್ಲಿ ಸಾಧಾರಣ ಬರ ಇದೆ. ಉಳಿದ 32 ತಾಲೂಕುಗಳಲ್ಲಿನ ಬರದ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ಶೀಘ್ರವೇ ಮನವಿ
ಬರಪೀಡಿತ ತಾಲೂಕುಗ಼ಳ ಬೆಳೆ ಹಾನಿ ಪರಿಹಾರಕ್ಕಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ (ಮನವಿ) ಸಲ್ಲಿಸಿ, ಮುಂದಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ, ನೀರಿನ ಸೌಲಭ್ಯವಿರುವ ರೈತರು ಮೂಕ ಪ್ರಾಣಿಗಳ ಹಿತದೃಷ್ಟಿಯಿಂದ ಮೇವು ಬೆಳೆಯಬೇಕು ಎಂದು ಕಂದಾಯ ಸಚಿವರೂ ಆದ ಪರಮೇಶ್ವರ ಮನವಿ ಮಾಡಿದರು.

ಬರಪೀಡಿತ ತಾಲೂಕುಗಳ ಪಟ್ಟಿ
ಬೆಂಗಳೂರು ನಗರ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ
ಬೆಂಗಳೂರು ಗ್ರಾಮಾಂತರ: ಹೊಸಕೋಟೆ, ನೆಲಮಂಗಲ, ದೇವನಹಳ್ಳಿ
ಬೆಂಗಳೂರು ದಕ್ಷಿಣ: ಮಾಗಡಿ, ರಾಮನಗರ
ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್
ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ
ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತುಮಕೂರು, ತುರುವೇಕೆರೆ
ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ
ದಾವಣಗೆರೆ: ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ದಾವಣಗೆರೆ
ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು
ಮೈಸೂರು: ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ
ಮಂಡ್ಯ: ಕೆ.ಆರ್.ಪೇಟೆ, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ
ಬಳ್ಳಾರಿ: ಬಳ್ಳಾರಿ, ಸಂಡೂರು, ಕುರುಗೋಡು, ಕಂಪ್ಲಿ
ಕೊಪ್ಪಳ: ಗಂಗಾವತಿ, ಕುಕನೂರು, ಕನಕಗಿರಿ
ರಾಯಚೂರು: ದೇವದುರ್ಗ, ಮಾಸ್ಕಿ, ಅರಕೇರಾ, ಲಿಂಗಸೂಗೂರು, ರಾಯಚೂರು
ಬೀದರ್: ಬೀದರ್, ಬಸವಕಲ್ಯಾಣ, ಹುಮ್ನಾಬಾದ್, ಚಿಟಗುಪ್ಪ
ಬಾಗಲಕೋಟೆ: ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಲಕಲ್
ವಿಜಯಪುರ: ವಿಜಯಪುರ, ನಿಡಗುಂದಿ, ಕೊಲ್ಹಾರ
ಗದಗ: ಗಜೇಂದ್ರಗಡ
ಹಾಸನ: ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ
ಚಿಕ್ಕಮಗಳೂರು: ಅಜ್ಜಂಪುರ, ಕೊಪ್ಪ, ನರಸಿಂಹರಾಜಪುರ, ತರೀಕೆರೆ
ಯಾದಗಿರಿ: ಶಹಾಪುರ
ವಿಜಯನಗರ: ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ
ಕೊಡಗು: ಸೋಮವಾರಪೇಟೆ
ಉತ್ತರ ಕನ್ನಡ: ಮುಂಡಗೋಡು, ಯಲ್ಲಾಪುರ

ಪ್ರಮುಖ ಸುದ್ದಿ :-   ವಿಜಯಪುರ : ಭೂತನಾಳ ಕೆರೆಯಲ್ಲಿ ತಾಯಿ-5 ಮಕ್ಕಳ ಮೃತದೇಹ ಪತ್ತೆ

ಅಂತರ್ಜಲ ತೀವ್ರ ಕುಸಿತ
ರಾಜ್ಯದ 132 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಜಲಾಶಯಗಳಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 815.70 ಟಿಎಂಸಿ ನೀರು ಸಂಗ್ರಹವಿದ್ದರೆ, ಈ ವರ್ಷ ಕೇವಲ 684.09 ಟಿಎಂಸಿ ನೀರು ಮಾತ್ರ ಇದೆ. ಪ್ರಸ್ತುತ 758 ಗ್ರಾಮಗಳಿಗೆ 149 ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 2059 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಮುನ್ಸೂಚನೆ ಇದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರೈತರಿಗೆ ಬೆಳೆ ವಿಮೆ 
ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಬೆಳೆ ವಿಮೆ ಅಡಿ ಬಿತ್ತನೆ ತಡೆ ವಿಶೇಷ ಅವಕಾಶದಡಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರು ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸರ್ಕಾರ ಪರವಾಗಿ ಅವರು ಮನವಿ ಮಾಡಿದರು.
ಫಸಲ್ ಬಿಮಾ ಯೋಜನೆಯಡಿ ಈ ಬಾರಿ ದಾಖಲೆ ಮಟ್ಟದಲ್ಲಿ 49 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಮಳೆ ಕೊರತೆಯಿಂದಾಗಿ ಒಂದು ವೇಳೆ ಬೀಜ ಬಿತ್ತಲು ಸಾಧ್ಯವಾಗದಿದ್ದರೂ ಸಹ ಬಿತ್ತನೆ ತಡೆ ಎಂಬ ವಿಶೇಷ ಕ್ಯಾಟಗರಿಯಡಿ ವಿಮಾ ಪರಿಹಾರ ಪಡೆಯಲು ಅವಕಾಶವಿದೆ. ಈ ಸೌಲಭ್ಯದ ಸದುಪಯೋಗ ಪಡೆಯಲು ಅನುಕೂಲವಾಗುವಂತೆ, ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ರೈತರು ಈ ಅವಕಾಶವನ್ನು ಬಳಸಿಕೊಂಡು ತಪ್ಪದೇ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬರದ ಕಾರಣದಿಂದ ಜನ ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ 16,460 ಕಾಮಗಾರಿಗಳನ್ನು ತೆಗೆದುಕೊಂಡು ಜುಲೈ-1 ರಿಂದ ಆಗಸ್ಟ್ 24ರವರೆಗೆ 66.73 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದೇವೆ. ಗುಳೆ ತಡೆಗೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕುಂದಾಪುರ : ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ ; 27 ಮೀನುಗಾರರ ರಕ್ಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement