₹22 ಸಾವಿರ ಕೋಟಿ ಸಾಲಕ್ಕೆ ಕೇವಲ ₹6.25 ಕೋಟಿ ಮರುಪಾವತಿ ಯೋಜನೆಗೆ ಎನ್‌ಸಿಎಲ್‌ಟಿ ಸಮ್ಮತಿ: ಉದ್ಯಮಿಗೆ ಭಾರೀ ರಿಲೀಫ್‌

ನವದೆಹಲಿ: ಎಸ್ಸೆಲ್‌ ಸಮೂಹದ ಸಂಸ್ಥಾಪಕ ಸುಭಾಷ ಚಂದ್ರ ಅವರು ಸಲ್ಲಿಸಿದ್ದ ಸಾಲ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (National Company Law Tribunal (NCLT)) ಅನುಮೋದನೆ ನೀಡಿದೆ.. ಈ ಯೋಜನೆಯ ಪ್ರಕಾರ, ಒಟ್ಟು ₹22,006.57 ಕೋಟಿ ಮೊತ್ತದ ಮಾನ್ಯಗೊಂಡ ಸಾಲದ ಬೇಡಿಕೆಗಳ ವಿರುದ್ಧ ಸಾಲದಾತರಿಗೆ ಕೇವಲ ₹6.25 ಕೋಟಿ ಮಾತ್ರ ವಿತರಿಸಲಾಗುತ್ತದೆ. ಈ ತೀರ್ಪಿನಿಂದ ಸಾಲದಾತರು ತಮ್ಮ ಬಾಕಿ ಮೊತ್ತದ ಕೇವಲ ಶೇ.0.028ರಷ್ಟು ಹಣವನ್ನು ಮಾತ್ರ ವಾಪಸು ಪಡೆಯಲಿದ್ದು, ಉಳಿದ ಶೇ.99.97ರಷ್ಟು ಮೊತ್ತ ‘ಹೇರ್‌ಕಟ್‌’ ಆಗಲಿದೆ. ಅಂದರೆ, ಸಾಲದಾತರು ತಮ್ಮ ಪ್ರತಿ ₹100 ಬಾಕಿಗೆ ಕೇವಲ ಮೂರು ಪೈಸೆಯಷ್ಟು ಹಣವನ್ನಷ್ಟೇ ಮರಳಿ ಪಡೆಯಲಿದ್ದಾರೆ.
2022ರಿಂದ ಸುಭಾಷ ಚಂದ್ರ ವಿರುದ್ಧ ವೈಯಕ್ತಿಕ ದಿವಾಳಿತನ ಪ್ರಕ್ರಿಯೆ ನಡೆಯುತ್ತಿದ್ದು, ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಈಗ ಸಮ್ಮಾನ್‌ ಕ್ಯಾಪಿಟಲ್‌) ಈ ಅರ್ಜಿಯನ್ನು ಸಲ್ಲಿಸಿತ್ತು. ವಿವೇಕ ಇನ್‌ಫ್ರಾಕಾನ್‌ಗೆ ನೀಡಲಾಗಿದ್ದ ₹170 ಕೋಟಿ ಸಾಲಕ್ಕೆ ಸುಭಾಷ ಚಂದ್ರ ವೈಯಕ್ತಿಕ ಗ್ಯಾರಂಟಿಯಾಗಿದ್ದರು. ಸಾಲ ಮರುಪಾವತಿಯಾಗದೆ ಕೆಟ್ಟ ಸಾಲವಾಗಿ ಪರಿವರ್ತನೆಯಾದ ಬಳಿಕ ಇಂಡಿಯಾಬುಲ್ಸ್‌ 2022ರಲ್ಲಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಯ ಸೆಕ್ಷನ್‌ 95ರ ಅಡಿಯಲ್ಲಿ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು 2024ರಲ್ಲಿ ನ್ಯಾಯಮಂಡಳಿ ಸ್ವೀಕರಿಸಿತ್ತು.
ಈ ವರ್ಷದ ಆರಂಭದಲ್ಲಿ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಂಗ ಸದಸ್ಯ ಅಶೋಕಕುಮಾರ ಭಾರದ್ವಾಜ ಮತ್ತು ತಾಂತ್ರಿಕ ಸದಸ್ಯೆ ರೀನಾ ಸಿನ್ಹಾ ಪುರಿ ಪರಸ್ಪರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರದ್ವಾಜ ಅವರು ಮರುಪಾವತಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಅಭಿಪ್ರಾಯಪಟ್ಟರೆ, ಪುರಿ ಅವರು ಯೋಜನೆಯಲ್ಲಿ ಗಂಭೀರ ಕಾನೂನು ಮತ್ತು ಪ್ರಕ್ರಿಯಾತ್ಮಕ ದೋಷಗಳಿವೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಎನ್‌ಸಿಎಲ್‌ಟಿ ಮೂರನೇ ಸದಸ್ಯರನ್ನು ನೇಮಿಸಿತ್ತು.
ಆಗಸ್ಟ್‌ 25ರಂದು ನ್ಯಾಯಾಂಗ ಸದಸ್ಯ ನಿಲೇಶ ಶರ್ಮಾ ಅವರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಅನುಮೋದನೆ ನೀಡಬೇಕೆಂದು ತೀರ್ಮಾನಿಸಿದರು. ಯೋಜನೆಯಡಿ ಸಾಲದಾತರಿಗೆ ₹6.25 ಕೋಟಿ ಹಂಚಿಕೆ ಮಾಡಲಾಗಿದ್ದು, ದಿವಾಳಿತನ ಪರಿಹಾರ ಪ್ರಕ್ರಿಯೆಯ ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ₹25 ಲಕ್ಷ ಮೀಸಲಿಡಲಾಗಿದೆ.
ಆದಾಗ್ಯೂ, ಸಮರ್ಪಕ ದಾಖಲೆಗಳಿಲ್ಲದೆ ಸಲ್ಲಿಸಲಾದ ಕೆಲವು ಸಾಲದ ಬೇಡಿಕೆಗಳನ್ನು ಹೊರಗಿಡುವ ಹಿನ್ನೆಲೆಯಲ್ಲಿ ಅಂತಿಮ ಮರುಪಾವತಿ ಮೊತ್ತದಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ. “ವೈಯಕ್ತಿಕ ಖಾತರಿದಾರರು ಸಲ್ಲಿಸಿರುವ ಮರುಪಾವತಿ ಯೋಜನೆಯನ್ನು ಐಬಿಸಿ 2016ರ ಸೆಕ್ಷನ್‌ 114ರ ಅಡಿಯಲ್ಲಿ ಅನುಮೋದಿಸಬೇಕಾಗಿದೆ” ಎಂದು ನಿಲೇಶ ಶರ್ಮಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಅವರು, ಸಾಲದಾತ ಅನಿಲಕುಮಾರ ಪರವಾಗಿ ಸಲ್ಲಿಸಲಾದ 960 ವ್ಯಕ್ತಿಗಳ ಬೇಡಿಕೆಗಳು ಹಾಗೂ ಸುನೀಲ ಜೈನ್‌ ಪರವಾಗಿ ಸಲ್ಲಿಸಲಾದ 300 ವ್ಯಕ್ತಿಗಳ ಬೇಡಿಕೆಗಳನ್ನು ಸಾಲದಾತರ ಪಟ್ಟಿಯಿಂದ ಕೈಬಿಡುವಂತೆ ರೆಸಲ್ಯೂಷನ್‌ ಪ್ರೊಫೆಷನಲ್‌ಗೆ (ಆರ್‌ಪಿ) ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ಸಾಲದಾತರ ಪಟ್ಟಿಯನ್ನು ಸಿದ್ಧಪಡಿಸಿದ ಬಳಿಕ ₹6.25 ಕೋಟಿ ಮೊತ್ತವನ್ನು ಉಳಿದ ಅರ್ಹ ಸಾಲದಾತರ ನಡುವೆ ಮರುಹಂಚಿಕೆ ಮಾಡಲಾಗುತ್ತದೆ.
ಈ ಯೋಜನೆಯನ್ನು ಹಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದವು. ಅಲ್ಪ ಪ್ರಮಾಣದ ಮರುಪಾವತಿ, ಸಾಲದ ಬೇಡಿಕೆಗಳ ಪರಿಶೀಲನಾ ವಿಧಾನ ಹಾಗೂ ಸುಭಾಷ ಚಂದ್ರ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಸಂಸ್ಥೆಗಳು ಮತದಾನದಲ್ಲಿ ಪಾಲ್ಗೊಂಡಿರುವ ಬಗ್ಗೆ ಅವು ಪ್ರಶ್ನೆ ಎತ್ತಿದ್ದವು.
ಈ ಯೋಜನೆಗೆ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ನೇತೃತ್ವದ ಕೆಲವು ಸಾಲದಾತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರಸ್ತಾಪಿತ ಮರುಪಾವತಿ ಮೊತ್ತ ಅತ್ಯಂತ ಕಡಿಮೆ ಇರುವುದರಿಂದ ಈ ಯೋಜನೆ ಕಾರ್ಯಸಾಧ್ಯವಲ್ಲ ಹಾಗೂ ಕಾನೂನುಬಾಹಿರ ಎಂದು ಅವರು ವಾದಿಸಿದ್ದರು.
ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ನ ಮಾನ್ಯಗೊಂಡ ಸಾಲದ ಮೊತ್ತ ₹1,322.39 ಕೋಟಿ ಇದ್ದರೂ, ಅದಕ್ಕೆ ಪ್ರತಿಯಾಗಿ ಕೇವಲ ₹38.09 ಲಕ್ಷ ಮಾತ್ರ ಪಾವತಿಸುವ ಪ್ರಸ್ತಾಪವಿದೆ. ಇದು ಒಟ್ಟು ಬಾಕಿಯ ಕೇವಲ ಶೇ.0.028ರಷ್ಟೇ ಎಂದು ಸಂಸ್ಥೆ ನ್ಯಾಯಮಂಡಳಿಯ ಗಮನಕ್ಕೆ ತಂದಿತ್ತು. ಅಲ್ಲದೆ, ₹6.5 ಕೋಟಿ ಪಾವತಿ ಮೊತ್ತ ಕೇವಲ ಸೂಚಕವಾಗಿದ್ದು, ಖಚಿತತೆ ಇಲ್ಲದ ಕಾರಣ ಅದನ್ನು ಅನುಮೋದಿಸಬಾರದು ಎಂದು ವಾದಿಸಿತ್ತು.
ಈಯೋಜನೆಗೆವಿರೋಧ ವ್ಯಕ್ತಪಡಿಸಿದ್ದ ಸಾಲದಾತರು, 2017ರಲ್ಲಿ ಸುಭಾಷ ಚಂದ್ರ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು ₹45,888 ಕೋಟಿ ಹಾಗೂ 2018ರಲ್ಲಿ ₹40,562 ಕೋಟಿ ಇತ್ತು ಎಂದು ತೋರಿಸುವ ದಾಖಲೆಗಳನ್ನು ಉಲ್ಲೇಖಿಸಿದ್ದರು. ಆದರೆ ಪ್ರಸ್ತುತ ಅವರ ನಿವ್ವಳ ಆಸ್ತಿ ಮೌಲ್ಯ ಕೇವಲ ₹31.79 ಕೋಟಿ ಎಂದು ತಿಳಿಸಲಾಗಿದೆ.
ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸಾಲದಾತರ ಮತದಾನದ ಹಕ್ಕು ಒಟ್ಟು ಶೇ.20ಕ್ಕಿಂತ ಕಡಿಮೆ ಇತ್ತು. ಮತ್ತೊಂದೆಡೆ, ಒಟ್ಟು ಮತದಾನ ಹಕ್ಕಿನ ಶೇ.80.81ರಷ್ಟು ಪಾಲು ಹೊಂದಿದ್ದ ಸಾಲದಾತರು ಯೋಜನೆಯನ್ನು ಬೆಂಬಲಿಸಿದ್ದರು ಎಂದು ಎನ್‌ಸಿಎಲ್‌ಟಿ ಗಮನಿಸಿತು.
ಈ ಎಲ್ಲ ಆಕ್ಷೇಪಣೆಗಳ ಪರಿಣಾಮವಾಗಿ ನ್ಯಾಯಾಂಗ ಸದಸ್ಯ ಹಾಗೂ ತಾಂತ್ರಿಕ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದಾಗಿ ಎನ್‌ಸಿಎಲ್‌ಟಿ ಅಧ್ಯಕ್ಷರು ಕಂಪನಿಗಳ ಕಾಯ್ದೆ-2013ರ ಸೆಕ್ಷನ್‌ 419(5)ರ ಅಡಿಯಲ್ಲಿ ಮೂರನೇ ಸದಸ್ಯರ ಅಭಿಪ್ರಾಯಕ್ಕಾಗಿ ವಿಷಯವನ್ನು ಉಲ್ಲೇಖಿಸಿದ್ದರು.
ವಿಚಾರಣೆಯ ವೇಳೆ ಅನಿಲಕುಮಾರ ಮತ್ತು ಸುನೀಲ ಜೈನ್‌ ಮೂಲಕ ಸಲ್ಲಿಸಲಾದ ಬೇಡಿಕೆಗಳಿಗೆ ಅಗತ್ಯ ದಾಖಲೆಗಳಿಲ್ಲದೇ ಅವುಗಳನ್ನು ಮಾನ್ಯಗೊಳಿಸಲಾಗಿದೆ ಎಂಬುದನ್ನು ನಿಲೇಶ ಶರ್ಮಾ ಗಮನಿಸಿದರು. ಇದನ್ನು ಆರ್‌ಪಿ ಅವರ ಲೋಪವೆಂದು ಅವರು ಗುರುತಿಸಿದರೂ, ಆ ಕಾರಣಕ್ಕೆ ಸಂಪೂರ್ಣ ಮರುಪಾವತಿ ಯೋಜನೆಯನ್ನು ರದ್ದುಪಡಿಸುವಷ್ಟು ಗಂಭೀರ ದೋಷವಲ್ಲ ಎಂದು ಅಭಿಪ್ರಾಯಪಟ್ಟರು.
ಇದಲ್ಲದೆ, ವೀಣಾ ಇನ್ವೆಸ್ಟ್‌ಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌, ಡೈರೆಕ್ಟ್‌ ಮೀಡಿಯಾ ಡಿಸ್ಟ್ರಿಬ್ಯೂಷನ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌, ವರ್ಲ್ಡ್‌ ಕ್ರೆಸ್ಟ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ, ಲೆಮನೇಡ್‌ ಕ್ಯಾಪಿಟಲ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ ಹಾಗೂ ಕಾರ್ಪ್‌ಕಾಲ್‌ ಕ್ಯಾಪಿಟಲ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ ಸಂಸ್ಥೆಗಳನ್ನು ಸುಭಾಷ್‌ ಚಂದ್ರ ಅವರ “ಸಹವರ್ತಿಗಳು” ಎಂದು ಐಬಿಸಿ ಸೆಕ್ಷನ್‌ 79(2)(g) ಅಡಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ತೀರ್ಮಾನಿಸಿದರು.
ಕುಟುಂಬ, ವ್ಯವಹಾರ ಅಥವಾ ವಾಣಿಜ್ಯ ಸಂಬಂಧಗಳಿವೆ ಎಂಬ ಆರೋಪದ ಆಧಾರದ ಮೇಲೆ ಕಾನೂನಿನಲ್ಲಿರುವ “ಸಹವರ್ತಿ” ಎಂಬ ವ್ಯಾಖ್ಯಾನವನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಸಂಸ್ಥೆಗಳ ಮತಗಳನ್ನು ಅಮಾನ್ಯಗೊಳಿಸಲು ಅವಕಾಶವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಅದೇ ವೇಳೆ, ಐಬಿಸಿ ಸೆಕ್ಷನ್‌ 115ರ ಅನ್ವಯ ಈ ಮರುಪಾವತಿ ಯೋಜನೆಗೆ ವಿರೋಧವಾಗಿ ಮತ ಚಲಾಯಿಸಿದ ಅಥವಾ ಮತದಾನದಿಂದ ದೂರ ಉಳಿದ ಸಾಲದಾತರಿಗೂ ಯೋಜನೆ ಕಡ್ಡಾಯವಾಗಿ ಅನ್ವಯವಾಗಲಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಈಗ ಬಹುಮತದ ಅಭಿಪ್ರಾಯವನ್ನು ಜಾರಿಗೆ ತರಲು ಪ್ರಕರಣವನ್ನು ಮೂಲ ಪೀಠದ ಮುಂದೆ ಅಂತಿಮ ಆದೇಶಕ್ಕಾಗಿ ಮಂಡಿಸಲಾಗುತ್ತದೆ. ಪ್ರಕರಣದಲ್ಲಿ ಸುಭಾಷ ಚಂದ್ರ ಪರ ವಕೀಲರಾದ ಜಿ.ಪಿ. ಮದಾನ್‌, ಆದಿತ್ಯ ಮದಾನ್‌ ಮತ್ತು ರಾಹುಲ್‌ ನರುಲಾ ವಾದ ಮಂಡಿಸಿದರು.
ರೆಸಲ್ಯೂಷನ್‌ ಪ್ರೊಫೆಷನಲ್‌ ಪರ ಸಜೀವ ದಿಯೋರಾ ಹಾಜರಿದ್ದರು. ವರ್ಲ್ಡ್‌ ಕ್ರೆಸ್ಟ್‌ ಅಡ್ವೈಸರ್ಸ್‌ ಎಲ್‌ಎಲ್‌ಪಿ, ವೀಣಾ ಇನ್ವೆಸ್ಟ್‌ಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಡೈರೆಕ್ಟ್‌ ಮೀಡಿಯಾ ಡಿಸ್ಟ್ರಿಬ್ಯೂಷನ್‌ ವೆಂಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪರ ಬಿಶ್ವಜಿತ್‌ ದುಬೆ, ಪ್ರತೀಕ ಮಿಶ್ರಾ ಮತ್ತು ಸುಮಿತ್‌ ಸಿಂಗ್‌ ಬಾಗ್ರಿ ವಾದ ಮಂಡಿಸಿದರು.
ಕೆನರಾ ಬ್ಯಾಂಕ್‌ ಪರ ಹಿರಿಯ ವಕೀಲ ರಿತಿನ್‌ ರೈ ಹಾಗೂ ವಕೀಲರಾದ ಅಂಜು ಜೈನ್‌, ಹಿತೇಶ ಸಾಚಾರ್‌, ರಿಫಾತ್‌ ತುಹಿದ್‌, ಭಾವನಾ ಪ್ರಜಾಪತಿ ಮತ್ತು ವಿನೇ ಪ್ರಧಾನ ಹಾಜರಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement