ಮುಂಬೈ : ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಪ್ರೇಮ ವೈಫಲ್ಯದ ಕಾರಣಕ್ಕೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೊಬ್ಬನೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಆತನೇ ಬಂಧನಕ್ಕೊಳಗಾಗಿದ್ದಾನೆ.
ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿ ರಿತುಜಾ ಪಾಟೀಲ ಅವರ ತಂದೆ ಅಮೃತ್ ಪಾಟೀಲ ಅವರು ನಂದುರ್ಬಾರ್‌ನ ಕೋಚಿಂಗ್ ಸಂಸ್ಥೆ ನಡೆಸುತ್ತಿದ್ದ ಪ್ರವೀಣ ಪಾಟೀಲ ಅವರಿಂದ ತಮ್ಮ ಮಗಳಿಗಾಗಿ ಪ್ರಶ್ನೆಪತ್ರಿಕೆಯನ್ನು ಖರೀದಿಸಿದ್ದರು. ಈ ಸಂಬಂಧ ಪ್ರವೀಣ ಪಾಟೀಲ ಮತ್ತು ಕೆಲ ಎಂಪಿಎಸ್‌ಸಿ ಅಧಿಕಾರಿಗಳ ನಡುವೆ ಆರಂಭಿಕ ಹಂತದಲ್ಲಿ ₹5 ಲಕ್ಷ ವ್ಯವಹಾರ ನಡೆದಿರುವುದು ಪತ್ತೆಯಾಗಿದ್ದು, ಒಟ್ಟು ಹಣಕಾಸು ವ್ಯವಹಾರವು ಸುಮಾರು ₹12 ಲಕ್ಷದವರೆಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಶ್ನೆಪತ್ರಿಕೆ ಪಡೆದಿದ್ದ ರಿತುಜಾ, ಅದನ್ನು ತನ್ನ ಆಗಿನ ಪ್ರಿಯಕರ ಗೌರವ ಪಾಟೀಲ ಜೊತೆ ಹಂಚಿಕೊಂಡಿದ್ದಳು. ಆದರೆ ಮಾರ್ಚ್ 22ರಂದು ನಡೆದ ಪರೀಕ್ಷೆಯಲ್ಲಿ ರಿತುಜಾ ಆಯ್ಕೆಯಾದರೆ, ಗೌರವ ಅನುತ್ತೀರ್ಣನಾಗಿದ್ದ. ಇದರಿಂದ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಾವರ ಪ್ರೇಮ ಸಂಬಂಧ ಮುರಿದುಬಿದ್ದಿತ್ತು.
ಸರ್ಕಾರಿ ಉದ್ಯೋಗ ಪಡೆದ ಬಳಿಕ ರಿತುಜಾ ತನ್ನನ್ನು ಬಿಡಬಹುದು ಎಂಬ ಆತಂಕಕ್ಕೊಳಗಾದ ಗೌರವ್, ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಎಂಪಿಎಸ್‌ಸಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾನೆ. ಬಳಿಕ ದೂರು ಹಿಂಪಡೆಯಲು ಪ್ರಯತ್ನಿಸಿದರೂ, ಅಷ್ಟರಲ್ಲೇ ತನಿಖೆ ಆರಂಭವಾಗಿತ್ತು. ಇದು ಇಡೀ ಪ್ರಕರಣ ಬೆಳಕಿಗೆ ಬರಲು ಕಾರಣವಾಯಿತು.
ತಜ್ಞರು ಸಿದ್ಧಪಡಿಸಿದ್ದ ಪ್ರಶ್ನೆ ಬ್ಯಾಂಕ್‌ನಿಂದ ಅಕ್ರಮವಾಗಿ ಪ್ರಶ್ನೆಗಳನ್ನು ತೆಗೆದು, ಪರೀಕ್ಷೆಗೆ ಮುನ್ನ ಹೊಸ ಪ್ರಶ್ನೆಪತ್ರಿಕೆ ರಚಿಸಿ ರಹಸ್ಯವಾಗಿ ಮಾರಾಟ ಮಾಡಲಾಗಿದ್ದ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆ (IPC), ಮಹಾರಾಷ್ಟ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ತಡೆ ಕಾಯ್ದೆ–2024 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ–1988ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ರಿತುಜಾ ಅವರ ಮಾಜಿ ಪ್ರಿಯಕರ ಗೌರವ್ ಪಾಟೀಲ ಸಹ ಸೇರಿದ್ದಾರೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 2ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಡ್ರಗ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ರದ್ದು
ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆಯಡಿಯಲ್ಲಿ ಗ್ರೂಪ್-ಬಿ ಹುದ್ದೆಗಳಾದ ಡ್ರಗ್ ಇನ್ಸ್‌ಪೆಕ್ಟರ್ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಲೋಕಸೇವಾ ಆಯೋಗ ರದ್ದುಗೊಳಿಸಿದೆ.
ಈ ನೇಮಕಾತಿಗೆ ಸಂಬಂಧಿಸಿದ ಆಫ್‌ಲೈನ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾರ್ಚ್ 22ರಂದು ಮಹಾರಾಷ್ಟ್ರದ ಆರು ವಿಭಾಗೀಯ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಜೂನ್ 12ರಂದು ಫಲಿತಾಂಶ ಪ್ರಕಟವಾಗಿದ್ದು, 506 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಇವರಲ್ಲಿ 488 ಅಭ್ಯರ್ಥಿಗಳು ಜುಲೈ 1ರಿಂದ ಜುಲೈ 22ರವರೆಗೆ ನಡೆದ ಸಂದರ್ಶನಗಳಲ್ಲಿ ಭಾಗವಹಿಸಿದ್ದರು.
ಜುಲೈ 22ರಿಂದ ಜುಲೈ 26ರ ನಡುವೆ, ಪರೀಕ್ಷೆಗೆ ಎರಡು ದಿನಗಳ ಮುನ್ನ ಕೆಲ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಅಥವಾ ಪ್ರಶ್ನೆಗಳನ್ನು ಪಡೆದಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ಅಭ್ಯರ್ಥಿಗಳು ಹಾಗೂ ಜನಪ್ರತಿನಿಧಿಗಳಿಂದ ಎಂಪಿಎಸ್‌ಸಿಗೆ ದೂರುಗಳು ಬಂದಿದ್ದವು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗಿನ ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸುವ ಬದಲು ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ಆಯೋಗ ನಿರ್ಧರಿಸಿದೆ. ಆದರೆ, ಮರುಪರೀಕ್ಷೆ ನಡೆಸಲಾಗುವುದು ಎಂದು ಎಂಪಿಎಸ್‌ಸಿ ಸ್ಪಷ್ಟಪಡಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಜೊತೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನೂ ಪಾವತಿಸಬೇಕಾಗಿಲ್ಲ ಎಂದು ಆಯೋಗ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ