ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದ ಕಡಿದಾದ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಕಡಿದಾದ ತಿರುವಿನಲ್ಲಿ ಅತಿ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ ತಪ್ಪಿ ಮುನ್ನುಗ್ಗಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲು ವಾಹನವನ್ನು ರಸ್ತೆ ಬದಿಯ ಗುಡ್ಡದತ್ತ ತಿರುಗಿಸಿದ್ದಾನೆ. ಆದರೂ ನಿಯಂತ್ರಣ ತಪ್ಪಿದ್ದ ಮಿನಿ ಬಸ್ ಕೆಎಸ್ಆರ್ಟಿಸಿ ಬಸ್ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡೂ ವಾಹನಗಳು ಭಾಗಶಃ ಜಖಂಗೊಂಡಿವೆ.
ಅಪಘಾತದ ವೇಳೆ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಹಲವರು ಗಾಯಗೊಂಡಿದ್ದು, ಓರ್ವ ಮಹಿಳೆಗೆ ಕೈ ಮೂಳೆ ಮುರಿತ ಉಂಟಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ, ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿದರು.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ