ಧಾರವಾಡ: ಮಹಾರಾಷ್ಟ್ರದ ಸೊಲ್ಲಾಪುರದಿಂದ ಧಾರವಾಡಕ್ಕೆ ಭಾನುವಾರ ಬಂದ ರೈಲಿನ ಮಹಿಳಾ ಬೋಗಿಯ ಆಸನದ ಕೆಳಗೆ ಅಡಗಿಸಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತ ಮಹಿಳೆಯ ವಯಸ್ಸು ಸುಮಾರು 30ರಿಂದ 35 ವರ್ಷಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ರೈಲು ಬೆಳಿಗ್ಗೆ ಸುಮಾರು 9:30ಕ್ಕೆ ಧಾರವಾಡ ರೈಲು ನಿಲ್ದಾಣಕ್ಕೆ ತಲುಪಿದ್ದರೂ, ಶವ ಪತ್ತೆಯಾದದ್ದು ಸುಮಾರು 11 ಗಂಟೆಯ ವೇಳೆಗೆ. ಬೋಗಿಯನ್ನು ಸ್ವಚ್ಛಗೊಳಿಸಲು ರೈಲ್ವೆ ಸಿಬ್ಬಂದಿ ಒಳಗೆ ಪ್ರವೇಶಿಸಿದಾಗ ಆಸನದ ಕೆಳಗೆ ಶವ ಕಂಡುಬಂದಿದೆ.
ಸೊಲ್ಲಾಪುರದಿಂದ ಶನಿವಾರ ರಾತ್ರಿ ಹೊರಟಿದ್ದ ರೈಲು ಭಾನುವಾರ ಬೆಳಿಗ್ಗೆ 9:30ಕ್ಕೆ ಧಾರವಾಡ ತಲುಪಿತ್ತು. ಶವ ಪತ್ತೆಯಾದ ತಕ್ಷಣ ರೈಲ್ವೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲ್ವೆ ಪೊಲೀಸರು ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಮೃತ ಮಹಿಳೆಯ ಕುತ್ತಿಗೆ, ಮುಖ ಮತ್ತು ಎದೆ ಭಾಗಗಳಲ್ಲಿ ಗಾಯಗಳ ಗುರುತುಗಳು ಕಂಡುಬಂದಿರುವುದರಿಂದ ಪ್ರಯಾಣದ ವೇಳೆ ಆಕೆಯನ್ನು ಹತ್ಯೆ ಮಾಡಿರಬಹುದೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಆರಂಭದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಪ್ರಾಥಮಿಕ ತನಿಖೆಯಲ್ಲಿ ಅತ್ಯಾಚಾರ ನಡೆದಿರುವ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಸ್ಪಷ್ಟತೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ದೊರೆಯಲಿದೆ ಎಂದು ಹೇಳಿದ್ದಾರೆ.
ಮಹಿಳೆಯ ಶವವನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮಹಿಳೆ ಯಾವ ರೀತಿಯಲ್ಲಿ ಮೃತಪಟ್ಟರು, ಗಾಯಗಳು ಯಾವಾಗ ಉಂಟಾದವು ಹಾಗೂ ಸಾವಿನ ಸಂದರ್ಭ ಏನು ಎಂಬುದರ ಕುರಿತು ಮರಣೋತ್ತರ ಪರೀಕ್ಷೆ ವರದಿ ನಿರ್ಣಾಯಕವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ