ಮಡಿಕೇರಿ: ಮಗಳಿಗೆ ಗದರಿದ್ದಕ್ಕೆ ತಾಯಿ-ಮಗಳ ಜೀವನ ದುರಂತ ಅಂತ್ಯ ಕಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮನೆಗೆ ತಡವಾಗಿ ಬಂದಿದ್ದ ವಿಚಾರಕ್ಕೆ ತಾಯಿ ಗದರಿದ್ದರಿಂದ ಮನನೊಂದ ಮಗಳು ಕೆರೆಗೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು 45 ವರ್ಷದ ಪ್ರೇಮಾ ಮತ್ತು ಅವರ 14 ವರ್ಷದ ಮಗಳು ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಕರಿಕೆಯ ಆಶ್ರಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕಾ ಶನಿವಾರ ಶಾಲೆಯಿಂದ ಊರಿಗೆ ಬಂದಿದ್ದಳು. ಆದರೆ ಮನೆಗೆ ತಡವಾಗಿ ಬಂದಿದ್ದ ಕಾರಣಕ್ಕೆ ತಾಯಿ ಪ್ರೇಮಾ ಆಕೆಯನ್ನು ಗದರಿಸಿದ್ದರು. ಇದರಿಂದ ಮನನೊಂದ ಪ್ರಿಯಾಂಕಾ, ಮನೆಯ ಸಮೀಪದಲ್ಲಿದ್ದ ಕೆರೆಗೆ ಹಾರುವುದಾಗಿ ಬೆದರಿಸಿ ಆ ಕಡೆಗೆ ಓಡಿ ಹೋಗಿದ್ದಾಳೆ.
ಇದರಿಂದ ಆತಂಕಗೊಂಡ ತಾಯಿ ಪ್ರೇಮಾ ಆಕೆಯನ್ನು ತಡೆಯಲು ಅವಳ ಹಿಂದೆಯೇ ಓಡಿದ್ದಾರೆ. ಆದರೆ ಅವರು ಕೆರೆಯ ಬಳಿಗೆ ತಲುಪುವಷ್ಟರಲ್ಲಿ ಪ್ರಿಯಾಂಕಾ ಕೆರೆಗೆ ಹಾರಿದ್ದಳು. ಮಗಳನ್ನು ಹೇಗಾದರೂ ರಕ್ಷಿಸಬೇಕು ಎಂಬ ಆತುರದಲ್ಲಿ ಈಜು ಬಾರದಿದ್ದರೂ ಪ್ರೇಮಾ ಕೂಡ ಕೆರೆಗೆ ಹಾರಿದ್ದಾರೆ. ಸ್ಥಳೀಯರು ಇಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿದರೂ ಕೆರೆ ಸುಮಾರು 15ರಿಂದ 20 ಅಡಿ ಆಳವಿದ್ದ ಕಾರಣ ಸಾಧ್ಯವಾಗಲಿಲ್ಲ. ಪರಿಣಾಮ ತಾಯಿ-ಮಗಳು ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪ್ರೇಮಾ ಅವರ ಪತಿ ಹಲವು ವರ್ಷಗಳ ಹಿಂದೆ ದೂರವಾಗಿದ್ದರು. ಆದರೂ ಮಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂಬ ಆಶಯದಿಂದ ತಾಯಿ ಕೂಲಿ ಕೆಲಸ ಮಾಡಿಕೊಂಡು ಮಗಳನ್ನು ಆಶ್ರಮ ಶಾಲೆಯಲ್ಲಿ ಓದಿಸುತ್ತಿದ್ದರು. ಆದರೆ ಇದೀಗ ತಾಯಿ-ಮಗಳ ಬದುಕು ದುರಂತವಾಗಿ ಅಂತ್ಯಗೊಂಡಿದೆ.
ಸೋಮವಾರ ಕತ್ತಲಾದ ಕಾರಣ ಮೃತದೇಹಗಳ ಪತ್ತೆ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ