ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅರಣ್ಯ ಸಚಿವೆ ಕೊಂಡ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದಾರೆ. ಈ ಕುರಿತು ಶಿಫಾರಸು ಪತ್ರವನ್ನು ರಾಜ್ಯಪಾಲ ಶಿವಪ್ರತಾಪ ಶುಕ್ಲಾ ಅವರಿಗೆ ಕಳುಹಿಸಿಕೊಡಲಾಗಿದೆ.
ಕೊಂಡ ಸುರೇಖಾ ಅವರ ಮಗಳು ಮುಖ್ಯಮಂತ್ರಿ ರೇವಂತ ರೆಡ್ಡಿ ವಿರುದ್ಧ ಬಹಿರಂಗವಾಗಿ ನಡೆಸಿದ್ದ ವಾಗ್ದಾಳಿ ಹಾಗೂ ವಾರಂಗಲ್ ಜಿಲ್ಲೆಯ ಪರಕಾಲ ಅಸೆಂಬ್ಲಿ ಕ್ಷೇತ್ರದ ಮೇಲಿನ ರಾಜಕೀಯ ಜಿದ್ದಾಜಿದ್ದಿಯೇ ಈ ಕಠಿಣ ಕ್ರಮಕ್ಕೆ ಮುಖ್ಯ ಕಾರಣವಾಗಿದೆ.
ಸಂಪುಟದಿಂದ ತೆಗೆದುಹಾಕಿರುವ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಕೊಂಡ ಸುರೇಖಾ ಅವರು ಮುಖ್ಯಮಂತ್ರಿ ರೇವಂತ ರೆಡ್ಡಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಕಾಂಗ್ರೆಸ್ ಪಕ್ಷ ತೊರೆಯುವ ಯಾವುದೇ ಆಲೋಚನೆ ಹೊಂದಿಲ್ಲ. ರೇವಂತ ರೆಡ್ಡಿ ಅವರು ನನ್ನನ್ನು ಬಲವಂತವಾಗಿ ಸಂಪುಟದಿಂದ ತೆಗೆದುಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ. ಸಚಿವೆಯಾಗಿ ಅಧಿಕಾರದಲ್ಲಿದ್ದಾಗಲೂ ತಾವು ಈ ಸರ್ಕಾರದಡಿಯಲ್ಲಿ ಹಲವು ಸಮಸ್ಯೆಗಳು ಮತ್ತು ಕಿರುಕುಳಗಳನ್ನು ಎದುರಿಸಿದ್ದಾಗಿ ಅವರು ತಿಳಿಸಿದ್ದಾರೆ.”ಹಿಂದೆ ರೇವಂತ ರೆಡ್ಡಿ ಅವರನ್ನು ನಿಂದಿಸಿದವರು, ಟೀಕಿಸಿದವರೆಲ್ಲರೂ ಇಂದು ಪ್ರಮುಖ ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ನನ್ನನ್ನು ಮಾತ್ರ ಟಾರ್ಗೆಟ್‌ ಮಾಡಲಾಗಿದೆ” ಎಂದು ಅವರು ಪ್ರಶ್ನಿಸಿದ್ದಾರೆ.

ವಿವಾದಕ್ಕೆ ಮೂಲ ಕಾರಣವೇನು?
ಸಂಪುಟದಲ್ಲಿನ ಈ ಬೆಂಕಿಗೆ ಪರಕಾಲ ವಿಧಾನಸಭಾ ಕ್ಷೇತ್ರದ ಮೇಲಿನ ರಾಜಕೀಯ ಹಿಡಿತವೇ ಮುಖ್ಯ ಕಾರಣಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಹನುಮಕೊಂಡ ಜಿಲ್ಲೆಯ ಪರಕಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ರೇವಂತ ರೆಡ್ಡಿ, ಮುಂಬರುವ ಚುನಾವಣೆಯಲ್ಲೂ ಹಾಲಿ ಶಾಸಕ ರೇವೂರಿ ಪ್ರಕಾಶ ರೆಡ್ಡಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.
ಇದಕ್ಕುತ್ತರಿಸಿದ್ದ ಸುರೇಖಾ ಅವರ ಮಗಳು ಕೊಂಡ ಸುಶ್ಮಿತಾ ಪಟೇಲ್ ಅವರು, “ಪರಕಾಲ ಎನ್ನುವುದು ‘ಕೊಂಡ ಕುಟುಂಬದ ಸಾಮ್ರಾಜ್ಯ’. ನಮ್ಮದೇ ಪ್ರದೇಶಕ್ಕೆ ಬಂದು ಪ್ರಕಾಶ ರೆಡ್ಡಿ ಪರವಾಗಿ ಮತ ಕೇಳಲು ನಿಮಗೇನು ಹಕ್ಕಿದೆ?” ಎಂದು ಮುಖ್ಯಮಂತ್ರಿ ವಿರುದ್ಧ ತಿರುಗಿಬಿದ್ದಿದ್ದರು. ಸುಶ್ಮಿತಾ ಕೂಡ ಮುಂದಿನ ಚುನಾವಣೆಯಲ್ಲಿ ಪರಕಾಲ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.
ವರಂಗಲ್‌ನಲ್ಲಿ ನಡೆದ ಮಾಧ್ಯಮ ಸಭೆಯಲ್ಲಿ ಸುಶ್ಮಿತಾ ಅವರು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ವಿರುದ್ಧ ತೀವ್ರ ಸ್ವರೂಪದ ಆರೋಪಗಳನ್ನು ಮಾಡಿದ್ದರು:
“ನೀವು (ರೇವಂತ ರೆಡ್ಡಿ) ಮತ್ತು ನಿಮ್ಮ ಸಹೋದರರು ತೆಲಂಗಾಣ ರಾಜ್ಯದ ಮೇಲೆ ಬಿದ್ದು ಲೂಟಿ ಮಾಡಿದ್ದೀರಿ ಬಿಟ್ಟರೆ, ಬೇರೇನೂ ಸಾಧಿಸಿಲ್ಲ. ನಮ್ಮ ಕುಟುಂಬದ ಜೊತೆ ಅನಗತ್ಯವಾಗಿ ಏತಕ್ಕೆ ಜಗಳಕ್ಕೆ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದರು.
ಸರ್ಕಾರಿ ಭೂಮಿ ಹಾಗೂ ಶೆಲ್ ಕಂಪನಿಗೆ ಸಂಬಂಧಿಸಿದಂತೆ ಬರೋಬ್ಬರಿ ₹200 ಕೋಟಿ ಮೌಲ್ಯದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು.
“ನಾವು ಕಾಪು ಮತ್ತು ಪದ್ಮಶಾಲಿ ಸಮುದಾಯಕ್ಕೆ ಸೇರಿದವರು. ನಮಗೆ ವ್ಯವಸಾಯ ಮತ್ತು ಬಟ್ಟೆ ನೇಯುವುದು ಗೊತ್ತು. ಆದರೆ ಮುಖ್ಯಮಂತ್ರಿ ಸುತ್ತಮುತ್ತ ಇರುವವರಂತೆ ಗುಲಾಮಗಿರಿ (Subservient) ಮಾಡುವುದು ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿ ಸುತ್ತಲಿರುವ ದಲ್ಲಾಳಿಗಳು ಅವರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ” ಎಂದು ಹೇಳಿದ್ದರು. ಎಐಸಿಸಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಮೇಲೆ ತಮಗೆ ಅಪಾರ ಗೌರವವಿದೆ ಎಂದೂ ಸುಶ್ಮಿತಾ ಸ್ಪಷ್ಟಪಡಿಸಿದ್ದರು.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

ಕಾಂಗ್ರೆಸ್‌ನಿಂದ ನೋಟಿಸ್ ಮತ್ತು ಸುರೇಖಾ ತಿರುಗೇಟು
ಸುಶ್ಮಿತಾ ಅವರ ಈ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದವು. ಹಲವು ಶಾಸಕರು ಸುರೇಖಾ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದರು.
ತೆಲಂಗಾಣ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಹಾಗೂ ಸಂಸದ ಮಳ್ಳು ರವಿ ಅವರು ಕೊಂಡ ಸುರೇಖಾ ಅವರಿಗೆ ವಿವರಣೆ ನೀಡುವಂತೆ 3 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ಅನ್ನು ತಿರಸ್ಕರಿಸಿದ ಸುರೇಖಾ, “ನನ್ನ ಮಗಳು ಸ್ವತಂತ್ರ ವ್ಯಕ್ತಿ. ಆಕೆಯ ರಾಜಕೀಯ ಅಭಿಪ್ರಾಯಗಳಿಗೆ ತಾಯಿಯಾಗಿ ನಾನು ಹೊಣೆಗಾರಳಾಗಲು ಸಾಧ್ಯವಿಲ್ಲ. ಕುಟುಂಬದ ಸಂಬಂಧದ ಆಧಾರದ ಮೇಲೆ ಒಬ್ಬರ ಅಭಿಪ್ರಾಯಕ್ಕೆ ಇನ್ನೊಬ್ಬರಿಂದ ಉತ್ತರ ಕೇಳುವುದು ಸರಿಯಲ್ಲ” ಎಂದು ಉತ್ತರಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರನ್ನು ಭೇಟಿಯಾಗಿದ್ದ ಸುರೇಖಾ, ತಮ್ಮ ಸಚಿವ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ ಎಂದು ತಮ್ಮ ಪರ ವಾದಿಸಿದ್ದರು.
ಮಗಳ ಸವಾಲು ಹಾಗೂ ತಾಯಿಯನ್ನು ಸಚಿವ ಸಂಪುಟದಿಂದ ವಜಾ ಮಾಡುವ ನಿರ್ಧಾರದಿಂದಾಗಿ ತೆಲಂಗಾಣ ಕಾಂಗ್ರೆಸ್‌ನೊಳಗಿನ ಆಂತರಿಕ ಭಿನ್ನಮತ ಈಗ ಬಹಿರಂಗ ರಾಜಕೀಯ ಸಮರಕ್ಕೆ ದಾರಿಮಾಡಿಕೊಟ್ಟಿದೆ.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement