ಬೆಂಗಳೂರು: ಸಾಲದ ಕಂತಿನ ಹಣ ಕೊಡದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ; ಮೂವರ ಬಂಧನ

ಬೆಂಗಳೂರು: ಸಾಲದ ಬಡ್ಡಿ ಹಣ ನೀಡಲು ಸಾಧ್ಯವಾಗದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರೇಷ್ಮಾ ಬಾನು, ನಜರತ್ ಹಾಗೂ ರೇಷ್ಮಾ ಪತಿ ಸುಹೇಲ್ ಎಂದು ಗುರುತಿಸಲಾಗಿದೆ. ಸಾಲದ ಬಡ್ಡಿ ಹಣ ಕೊಡದಿದ್ದರೆ ಮಹಿಳೆಯನ್ನು ವಿವಸ್ತ್ರಗೊಳಿಸಿದ ಸ್ಥಿತಿಯಲ್ಲಿ ವಿಡಿಯೋ ಚಿತ್ರೀಕರಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ತಾಯಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ ರಕ್ಷಣೆ ಮಾಡಿದ್ದಾರೆ.

ಮಾಹಿತಿ ಪ್ರಕಾರ, ಸಂತ್ರಸ್ತೆ ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಬಾನುವಿನಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬಳಿಕ ರೇಷ್ಮಾ ಮೂಲಕ ನಜರತ್ ಎಂಬಾಕೆಯಿಂದ ಮತ್ತೊಂದು 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಕಳೆದ ಆರು ತಿಂಗಳಿನಿಂದ ರೇಷ್ಮಾಗೆ ಮಹಿಳೆ ಬಡ್ಡಿ ಹಣ ಪಾವತಿಸಿರಲಿಲ್ಲ. ಜೊತೆಗೆ ಎರಡು ತಿಂಗಳಿನಿಂದ ಸಾಲದ ಕಂತುಗಳನ್ನೂ ಕಟ್ಟಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ರೇಷ್ಮಾ ಪದೇ ಪದೇ ಫೋನ್‌ ಮಾಡುತ್ತಿದ್ದುದರಿಂದ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು.
ಈ ವೇಳೆ ನಜರತ್ ಮಹಿಳೆಯನ್ನು ಸಂಪರ್ಕಿಸಿ ಕೆಲಸ ಕೊಡಿಸುವ ನೆಪದಲ್ಲಿ ತನ್ನ ಮನೆಗೆ ಕರೆಯಿಸಿಕೊಂಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮಹಿಳೆ ಅಲ್ಲಿಗೆ ತಲುಪುತ್ತಿದ್ದಂತೆ ರೇಷ್ಮಾ ಬಾನು ಮತ್ತು ಆಕೆಯ ಪತಿ ಸುಹೇಲ್ ಕೂಡ ಸ್ಥಳಕ್ಕೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಬಲವಂತವಾಗಿ ಆಟೋ ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಆಕೆಯನ್ನು ಕುಂಬಳಗೋಡು ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಯುವ ದಸರಾ ಉದ್ಘಾಟಕರಾಗಿ ಖ್ಯಾತ ನಟ ಪ್ರಭುದೇವಗೆ ಆಹ್ವಾನ

ಇದಲ್ಲದೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಅದರ ವಿಡಿಯೋ ಚಿತ್ರೀಕರಿಸಿರುವ ಆರೋಪಿಗಳು, ಸಾಲದ ಹಣವನ್ನು ತಕ್ಷಣ ನೀಡದಿದ್ದರೆ ಆ ವಿಡಿಯೋವನ್ನುಸಾಮಾನಿಜ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮಹಿಳೆ ಕಾಣೆಯಾಗಿರುವ ಕುರಿತು ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಿಳೆಯನ್ನು ಬಂಧನದಲ್ಲಿಟ್ಟಿದ್ದ ಸ್ಥಳವನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮಾ ಬಾನು, ನಜರತ್ ಮತ್ತು ಸುಹೇಲ್ ನನ್ನು ಬಂಧಿಸಿದ್ದಾರೆ.
ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಅಪಹರಣ, ಹಲ್ಲೆ, ಅಕ್ರಮ ಬಂಧನ, ಬೆದರಿಕೆ ಸೇರಿದಂತೆ ವಿವಿಧ ಕಾನೂನು ಕಲಂಗಳಡಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement