ಸವದತ್ತಿ : ಇಂಚಲ ಗ್ರಾಮದಲ್ಲಿ ಹಳೆಯ 14 ಚಿನ್ನದ ನಾಣ್ಯಗಳು ಪತ್ತೆ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಹಳೆಯ 14 ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಗ್ರಾಮದ ಬಿಸಿಎಂ (BCM) ವಸತಿ ನಿಲಯದ ಸಮೀಪ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನೊಳಗೆ ಹೂತಿಟ್ಟಿದ್ದ ಪಾತ್ರೆಯೊಂದರಲ್ಲಿ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಪತ್ತೆಯಾದ 14 ನಾಣ್ಯಗಳ ಒಟ್ಟು ತೂಕ 54.8 ಗ್ರಾಂ ಆಗಿದ್ದು, ಅವುಗಳ ಅಂದಾಜು ಮೌಲ್ಯ ಸುಮಾರು ₹8.27 ಲಕ್ಷ ಎಂದು ತಿಳಿದುಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಈ ನಾಣ್ಯಗಳು ದೊರೆತರೂ ಕಾರ್ಮಿಕರು ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಯ ಸಮ್ಮುಖದಲ್ಲಿ ಕಾರ್ಮಿಕರು ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಹಸ್ತಾಂತರಿಸಿದರು. ಬಳಿಕ ತಹಶೀಲ್ದಾರ್ ಅವರು ಎಲ್ಲಾ ನಾಣ್ಯಗಳನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಿದ್ದಾರೆ.

ಈ ಚಿನ್ನದ ನಾಣ್ಯಗಳ ಪತ್ತೆಯು ಐತಿಹಾಸಿಕ ಕುತೂಹಲವನ್ನೂ ಹೆಚ್ಚಿಸಿದೆ. ನಾಣ್ಯಗಳ ಮೇಲೆ ಆನೆಯ ಚಿತ್ರವಿರುವುದು ಕಂಡುಬಂದಿದ್ದು, ಅವು ತಲಕಾಡಿನ ಗಂಗರ ಅರಸರ ಕಾಲಕ್ಕೆ ಸೇರಿರಬಹುದೆಂದು ಅಂದಾಜು ಮಾಡಲಾಗಿದೆ. ಗಂಗರ ರಾಜವಂಶದ ರಾಜಲಾಂಛನವೇ ಆನೆಯಾಗಿದ್ದ ಕಾರಣ ಈ ಊಹೆಗೆ ಬಲ ಸಿಕ್ಕಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಈ ನಾಣ್ಯಗಳು ಕ್ರಿ.ಶ. 10ನೇ ಶತಮಾನದಿಂದ 15ನೇ ಶತಮಾನದ ಅವಧಿಯದ್ದಾಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಆದರೆ ಅವುಗಳ ನಿಖರ ಕಾಲಮಾನ, ಮೂಲ ಹಾಗೂ ಐತಿಹಾಸಿಕ ಹಿನ್ನೆಲೆ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಈ ಬಗ್ಗೆ ಸಮಗ್ರ ವೈಜ್ಞಾನಿಕ ಪರಿಶೀಲನೆ ನಡೆದ ಬಳಿಕವೇ ಸ್ಪಷ್ಟ ಮಾಹಿತಿ ದೊರೆಯಲಿದೆ.

ಪ್ರಮುಖ ಸುದ್ದಿ :-   ಅಕ್ಷರ ಸೇವೆಯ ಅಪ್ರತಿಮ ಸಾಧಕ ಪ್ರೊಫೆಸರ್‌ ‘ಯಾದವಾಡ ಸರ್’

ನಾಣ್ಯಗಳ ಮೇಲಿನ ಗೋಚರ ಲಕ್ಷಣಗಳನ್ನು ಆಧರಿಸಿ ಅವು ಸುಮಾರು 800ರಿಂದ 1,000 ವರ್ಷಗಳಷ್ಟು ಪುರಾತನವಾಗಿರಬಹುದು ಎಂದು ಊಹಿಸಲಾಗಿದೆ. ಹೀಗಾಗಿಈ ನಾಣ್ಯಗಳು ಈಗ ಇತಿಹಾಸ ಸಂಶೋಧಕರು ಹಾಗೂ ಪುರಾತತ್ವ ತಜ್ಞರ ಗಮನ ಸೆಳೆದಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಕಾರ್ಮಿಕರ ಪ್ರಾಮಾಣಿಕತೆಯನ್ನು ಸವದತ್ತಿ ತಾಲೂಕು ಆಡಳಿತ ಶ್ಲಾಘಿಸಿದೆ. ನಾಣ್ಯಗಳ ಐತಿಹಾಸಿಕ ಮಹತ್ವ, ಮೂಲ ಮತ್ತು ನಿಖರ ಕಾಲಮಾನವನ್ನು ನಿರ್ಧರಿಸಲು ಪುರಾತತ್ವ ಇಲಾಖೆಯ ತಜ್ಞರ ಪರಿಶೀಲನೆಗೆ ಕಾಯಲಾಗುತ್ತಿದೆ.
ಪುರಾತತ್ವ ಇಲಾಖೆಯ ತಜ್ಞರು ನಾಣ್ಯಗಳನ್ನು ಪರಿಶೀಲಿಸಿದ ಬಳಿಕವೇ ಅವುಗಳ ನಿಜವಾದ ವಯಸ್ಸು, ಐತಿಹಾಸಿಕ ಮಹತ್ವ ಹಾಗೂ ಅಧಿಕೃತ ಮೌಲ್ಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement