ಜಮ್ಮು: “ಬೈ ಬೈ ಪಪ್ಪಾ…” – ಇವು ತಂದೆಗೆ ಫೋನ್ ಕರೆ ಮಾಡಿ ಯುವತಿಯೊಬ್ಬಳು ಆಡಿದ ಕೊನೆಯ ಮಾತುಗಳು. ಹೀಗೆಂದ ಆಕೆ ಸೇತುವೆಯ ಮೇಲಿಂದ ಭೋರ್ಗರೆಯುವ ಚೀನಾಬ್ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ನದಿಗೆ ಹಾರಿದ ಯುವತಿಯನ್ನು ಕೃಷ್ಣಲಾಲ ಎಂಬವರ ಪುತ್ರಿ ಪಾಯಲ್ ದೇವಿ ಎಂದು ಗುರುತಿಸಲಾಗಿದೆ. ಪ್ರಸ್ತುತ ಸ್ಥಳೀಯ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಯುವತಿಯ ಸುಳಿವು ಇನ್ನೂ ಸಿಕ್ಕಿಲ್ಲ.
ಘಟನೆಯ ವಿವರ:
ಪಾಯಲ್ ದೇವಿ ತನ್ನ ಗ್ರಾಮದ ಪರಿಚಿತ ವ್ಯಕ್ತಿಯೊಬ್ಬನ ಜೊತೆ ಮೋಟಾರ್ಸೈಕಲ್ನಲ್ಲಿ ಸ್ಥಳೀಯ ಜಾತ್ರೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರೇಮ್ ನಗರ ಸೇತುವೆಯ ಮೇಲೆ ಚಲಿಸುತ್ತಿದ್ದಾಗ, ಪಾಯಲ್ ಧರಿಸಿದ್ದ ದುಪಟ್ಟಾ ಮೋಟಾರ್ಸೈಕಲ್ನ ಚಕ್ರಕ್ಕೆ ಸಿಲುಕಿಕೊಂಡಿದೆ. ಹೀಗಾಗಿ ವಾಹನ ಸವಾರ ಬೈಕನ್ನು ಸೇತುವೆಯ ಪಕ್ಕದಲ್ಲಿ ನಿಲ್ಲಿಸಿದ್ದಾನೆ.
ಬೈಕ್ನಿಂದ ಕೆಳಗಿಳಿದ ಪಾಯಲ್, ನೇರವಾಗಿ ಸೇತುವೆಯ ರೈಲಿಂಗ್ ಕಡೆಗೆ ನಡೆದಿದ್ದಾಳೆ. ಅಲ್ಲಿ ನೆರೆದಿದ್ದ ಸಾರ್ವಜನಿಕರ ಬಳಿ ತಾನು ಜೀವನ ಕೊನೆಗೊಳಿಸಲು ನಿರ್ಧರಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದಾಳೆ. ಇದನ್ನು ಕೇಳಿ ಬೆಚ್ಚಿಬಿದ್ದ ದಾರಿಹೋಕರು, ,ಸ್ಥಳೀಯರು ಹಾಗೂ ಬೈಕ್ ಸವಾರ ಆಕೆಯನ್ನು ತಡೆಯಲು ಯತ್ನಿಸಿ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ನಂತರ ಬೈಕ್ ಸವಾರ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ತಂದೆ ಜೊತೆ ಮಾತನಾಡುತ್ತಲೇ ನದಿಗೆ ಧುಮುಕಿದ ಮಗಳು:
ಫೋನ್ನಲ್ಲಿ ಮಗಳ ಜೊತೆ ಮಾತನಾಡಿದ ತಂದೆ, ಯಾವುದೇ ಅನಾಹುತ ಮಾಡಿಕೊಳ್ಳದಂತೆ ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾರೆ. ಆದರೆ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲದ ಪಾಯಲ್, “ಇದು ನನ್ನದೇ ನಿರ್ಧಾರ, ನಾನೇ ಇದನ್ನು ಕೊನೆಗಾಣಿಸುತ್ತೇನೆ” ಎಂದು ಹೇಳಿ, ಕೊನೆಯದಾಗಿ “ಬೈ ಬೈ ಪಪ್ಪಾ” ಎನ್ನುತ್ತಿದ್ದಂತೆ ಪ್ರೇಮ್ ನಗರ ಸೇತುವೆಯಿಂದ ಚೀನಾಬ್ ನದಿಗೆ ಹಾರಿದ್ದಾಳೆ.
ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ತಂಡಗಳು ಹಾಗೂ ರಾಜ್ಯ ವಿಪತ್ತು ಶಮನ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರೇಮ್ ನಗರ ವ್ಯಾಪ್ತಿಯ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಯುವತಿಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ