ಕೊಪ್ಪಳ : ಕೀಟಲೆ ಮಾಡುವವರ ಕೈಗೆ ಕೃತಕ ಬುದ್ಧಿಮತ್ತೆ (AI) ಸಿಕ್ಕಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ತಾಜಾಉದಾರಹರಣೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೆಲಸಕ್ಕೆ ಹೋಗಲು ಇಷ್ಟವಿಲ್ಲದ ಯುವಕನೊಬ್ಬ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಹುಲಿಯ ನಕಲಿ ಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನಂತರ ಆ ಸುದ್ದಿ ಕ್ಷನಾರ್ಧದಲ್ಲಿ ಕಾಡ್ಗಿಚ್ಚಿನಂತೆ ಕೊಪ್ಪಳ ಜಿಲ್ಲೆಯ ಕಾವಲಿ ಗ್ರಾಮದಲ್ಲಿ ದೊಡ್ಡ ಹಂಗಾಮಾವನ್ನೇ ಸೃಷ್ಟಿಸಿದೆ. ಈ ಕೀಟಲೆಯು ಗ್ರಾಮಸ್ಥರ ನಿದ್ರೆ ಕೆಡಿಸಿದ್ದಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ತಲೆಬಿಸಿಗೂ ಕಾರಣವಾಗಿತ್ತು. ಈ ಯುವಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಕೊಪ್ಪಳ ತಾಲೂಕಿನ ಕಾವಲಿ ಗ್ರಾಮದ ಈರಣ್ಣ ಎಂಬ ಯುವಕನ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಆತನ ತಂದೆ-ತಾಯಿ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಅವರು ಈರಣ್ಣನಿಗೂ ತಮ್ಮ ಕೆಲಸಕ್ಕೆ ಬರುವಂತೆ ಸೂಚಿಸಿದ್ದರು. ಆದರೆ, ಕಷ್ಟಪಟ್ಟು ಕೂಲಿ ಕೆಲಸ ಮಾಡಲು ಮನಸ್ಸಿಲ್ಲದ ಈ ಯುವಕ, ಕೆಲಸದಿಂದ ತಪ್ಪಿಸಿಕೊಳ್ಳಲು ವಿಚಿತ್ರ ಉಪಾಯವೊಂದನ್ನು ಹೂಡಿದ್ದಾನೆ. ಈತ ಎಐ ತಂತ್ರಜ್ಞಾನದ ಸಹಾಯದಿಂದ ನೈಜವಾಗಿ ಕಾಣುವಂತೆ ಹುಲಿ ಚಿತ್ರವನ್ನು ಸೃಷ್ಟಿಸಿ, ಅದನ್ನು ತನ್ನ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದ. “ಗ್ರಾಮದ ಹತ್ತಿರದ ಬೆಟ್ಟದಲ್ಲಿ ಹುಲಿ ಪ್ರತ್ಯಕ್ಷವಾಗಿದೆ” ಎಂಬ ಸುಳ್ಳು ಬರೆದು ಪೋಸ್ಟ್ ಮಾಡಿದ್ದ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ – ಬೆಚ್ಚಿಬಿದ್ದ ಗ್ರಾಮಸ್ಥರು:
ಈ ಇನ್‌ಸ್ಟಾಗ್ರಾಮ್ ಪೋಸ್ಟ್ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈಗಾಗಲೇ ಕೊಪ್ಪಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿ ಹಾಗೂ ಹುಲಿಗಳ ಹಾವಳಿ ಇದೆ ಎಂಬ ಸುದ್ದಿ ಹರಡಿದ್ದರಿಂದ ಕಂಗೆಟ್ಟಿದ್ದ ಗ್ರಾಮಸ್ಥರು, ಈ ಫೋಟೋ ನೋಡಿ ಕೂಲಿ ಕೆಲಸಕ್ಕೆ ಹೋಗಲು ತೀವ್ರ ಭಯಭೀತಗೆ ಒಳಗಾದರು. ಸುದ್ದಿ ಹರಡುತ್ತಿದ್ದಂತೆ ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ವಿಷಯ ತಲುಪಿ, ಅವರು ತಕ್ಷಣವೇ ಕಾರ್ಯಾಚರಣೆಗೆ ಇಳಿದರು.
ಇಲಾಖೆಯಿಂದ ತನಿಖೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು, ಫೋಟೋದ ಮೂಲವನ್ನು ಜಾಲಾಡಿದಾಗ ಅದು ಎಐ-ಜನರೇಟೆಡ್ (ಕೃತಕವಾಗಿ ಸೃಷ್ಟಿಸಿದ) ನಕಲಿ ಚಿತ್ರ ಎಂಬುದು ಸಾಬೀತಾಯಿತು. ತಕ್ಷಣವೇ ಈರಣ್ಣನ ಮನೆಗೆ ತೆರಳಿದ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡ ಈರಣ್ಣ, “ಪೋಷಕರೊಂದಿಗೆ ದಿನಗೂಲಿ ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಕೆಲಸ ತಪ್ಪಿಸಿಕೊಳ್ಳಲೆಂದೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ನಕಲಿ ಹುಲಿ ಚಿತ್ರವನ್ನು ಪೋಸ್ಟ್ ಮಾಡಿದ್ದೆ” ಎಂದು ಸತ್ಯ ಬಾಯ್ಬಿಟ್ಟಿದ್ದಾನೆ.
ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿ, ಇಲಾಖೆಯ ದಾರಿ ತಪ್ಪಿಸಿದ ಈ ಕೀಟಲೆ ಯುವಕನಿಗೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ, ಗಂಭೀರ ಎಚ್ಚರಿಕೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ