ನವದೆಹಲಿ: ಎಲ್ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಮರುಬುಕ್ಕಿಂಗ್ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿದೆ. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ ಗೋಪಿ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದ ಪರಿಣಾಮ ಎಲ್ಪಿಜಿ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಮರುಬುಕ್ಕಿಂಗ್ಗೆ 45 ದಿನಗಳ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ಬಾಕಿ ಉಳಿದಿದ್ದ ರಿಫಿಲ್ಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಗೃಹಬಳಕೆದಾರರಿಗೆ 25 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ಕಿಂಗ್ ಮಾಡಲು ಅವಕಾಶ ನೀಡಿದೆ. ಇನ್ಮುಂದೆ ದೇಶದ ಯಾವುದೇ ಭಾಗದ (ನಗರ ಹಾಗೂ ಗ್ರಾಮೀಣ) ಗೃಹ ಎಲ್ಪಿಜಿ ಬಳಕೆದಾರರು ಒಂದು ಸಿಲಿಂಡರ್ ಕಾಯ್ದಿರಿಸಿದ 25 ದಿನಗಳ ನಂತರ ಮುಂದಿನ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು.
ಈ ಸಂಬಂಧ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯ ಸೂಚನೆ ನೀಡಿದೆ ಎಂದು ಸಚಿವ ಸುರೇಶ ಗೋಪಿ ತಿಳಿಸಿದ್ದಾರೆ.
ಪೈಪ್ ಗ್ಯಾಸ್ ಕಡೆಗೆ ಗ್ರಾಹಕರ ಒಲವು
ಇನ್ನೊಂದೆಡೆ, ದೇಶದಲ್ಲಿ ಎಲ್ಪಿಜಿ ಬಳಕೆಯಲ್ಲಿ ಕುಸಿತವಾಗಿದೆ. ಆಗಸ್ಟ್ ತಿಂಗಳಲ್ಲಿ ಎಲ್ಪಿಜಿ ಮಾರಾಟವು 16.1 ಶೇಕಡಾ ಇಳಿದು 2.42 ಮಿಲಿಯನ್ ಟನ್ಗೆ ತಲುಪಿದೆ. ಜುಲೈ ತಿಂಗಳಲ್ಲೂ ಬೇಡಿಕೆ 17.4 ಶೇಕಡಾ ಕುಸಿತ ಕಂಡಿತ್ತು.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಳಿಕ ಹಲವು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಪೈಪ್ ಮೂಲಕ ಪೂರೈಕೆಯಾಗುವ ನೈಸರ್ಗಿಕ ಅನಿಲದ (PNG) ಕಡೆಗೆ ತಿರುಗಿರುವುದೇ ಎಲ್ಪಿಜಿ ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ