ಕಾಸರಗೋಡು: ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಉಬ್ರಂಗಲದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತರನ್ನು ರಾಮಕೃಷ್ಣ ಭಟ್ (70) ಹಾಗೂ ಅವರ ಕಿರಿಯ ಸಹೋದರ ಕೇಶವ ಭಟ್ (65) ಎಂದು ಗುರುತಿಸಲಾಗಿದೆ. ಇಬ್ಬರೂ ಅವಿವಾಹಿತರಾಗಿದ್ದರು.
ಭಾನುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ರಾಮಕೃಷ್ಣ ಭಟ್ ಅವರು ಹಸುಗಳಿಗೆ ನೀರುಣಿಸಲು ಕೊಟ್ಟಿಗೆಗೆ ತೆರಳಿದ್ದರು. ಇದೇ ವೇಳೆ ಕೇಶವ ಭಟ್ ಮನೆಯಲ್ಲಿ ಪೂಜೆಯಲ್ಲಿ ನಿರತರಾಗಿದ್ದರು.
ಪೂಜೆ ಮುಗಿಸಿದ ಬಳಿಕ ಕೇಶವ ಭಟ್ ದನದ ಕೊಟ್ಟಿಗೆಗೆ ತೆರಳಿದಾಗ ರಾಮಕೃಷ್ಣ ಭಟ್ ಅವರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣವೇ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ರಾಮಕೃಷ್ಣ ಭಟ್ ಅವರನ್ನು ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಅಣ್ಣನ ಸಾವಿನ ದುಃಖದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿತು. ರಾಮಕೃಷ್ಣ ಭಟ್ ಅವರ ನಿಧನದ ಕೇವಲ ಮೂರುವರೆ ಗಂಟೆಗಳ ಬಳಿಕ, ರಾತ್ರಿ ಸುಮಾರು 10:30 ಗಂಟೆಗೆ ಕೇಶವ ಭಟ್ ಅವರು ಮನೆಯಲ್ಲೇ ಏಕಾಏಕಿ ಕುಸಿದು ಬಿದ್ದರು. ಅವರನ್ನು ಕೂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಕೇಶವ ಭಟ್ ಅವರ ಸಾವಿಗೂ ಹೃದಯಾಘಾತವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಒಂದೇ ದಿನ, ಕೇವಲ ಮೂರೂವರೆ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ಮೃತಪಟ್ಟಿರುವ ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರಿಗೆ ಒಬ್ಬ ಸಹೋದರ ಹಾಗೂ ಒಬ್ಬರು ಸಹೋದರಿ ಇದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ