ನವದೆಹಲಿ: ದೆಹಲಿಯ ದ್ವಾರಕಾದ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.2 ಕೆಜಿ ತೂಕದ ದೊಡ್ಡ ಪ್ರಮಾಣದ ಕೂದಲಿನ ಉಂಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.
20 ವರ್ಷ ವಯಸ್ಸಿನ ಈ ವಿದ್ಯಾರ್ಥಿನಿಯು ಕಳೆದ 11 ವರ್ಷಗಳಿಂದ ಯಾರಿಗೂ ತಿಳಿಯದಂತೆ ತನ್ನದೇ ಕೂದಲನ್ನು ತಿನ್ನುವ ಅಸಾಮಾನ್ಯ ಅಭ್ಯಾಸವನ್ನು ಹೊಂದಿದ್ದಳು ಎಂದು ಹೇಳಲಾಗಿದೆ.
ವೈದ್ಯರ ಮಾಹಿತಿ ಪ್ರಕಾರ, ಯುವತಿಗೆ ಸ್ವಲ್ಪ ಸಮಯದಿಂದ ತೀವ್ರ ಹೊಟ್ಟೆನೋವು, ವಾಕರಿಕೆ ಮತ್ತು ಆಗಾಗ್ಗೆ ವಾಂತಿಯಾಗುವ ಸಮಸ್ಯೆ ಕಾಡುತ್ತಿತ್ತು. ಇದರೊಂದಿಗೆ ಹಸಿವಿಲ್ಲದಿರುವುದು, ಗಮನಾರ್ಹವಾಗಿ ತೂಕ ಇಳಿಕೆಯಾಗಿತ್ತು. ಹಾಗೂ ನಿರಂತರ ಆಯಾಸ ಉಂಟಾಗುತ್ತಿತ್ತು. ಆರೋಗ್ಯವು ಹದಗೆಟ್ಟಾಗ ಆಕೆಯ ಕುಟುಂಬದವರು ದ್ವಾರಕಾದ ಮಣಿಪಾಲ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಹೊಟ್ಟೆಯ ಮೇಲ್ಭಾಗದಲ್ಲಿ ಗಡಸಾದ ಗಂಟೊಂದು ಇರುವುದು ಕಂಡುಬಂದಿದೆ. ತಕ್ಷಣವೇ ‘ಅಪ್ಪರ್ ಗ್ಯಾಸ್ಟ್ರೋಇಂಟೆಸ್ಟೈನಲ್ ಎಂಡೋಸ್ಕೋಪಿ’ ಪರೀಕ್ಷೆ ನಡೆಸಲಾಗಿದ್ದು, ಹೊಟ್ಟೆಯೊಳಗೆ ವೈದ್ಯಕೀಯ ಭಾಷೆಯಲ್ಲಿ ‘ಟ್ರಿಕೋಬೆಜೋರ್’ (Trichobezoar) ಎಂದು ಕರೆಯಲ್ಪಡುವ ದೊಡ್ಡ ಹಾಗೂ ದಟ್ಟವಾದ ಕೂದಲಿನ ಉಂಡೆ ಇರುವುದು ಪತ್ತೆಯಾಗಿದೆ.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮಿನಿಮಲ್ ಆಕ್ಸೆಸ್, ಬೇರಿಯಾಟ್ರಿಕ್, ಜಿಐ ಮತ್ತು ರೋಬೋಟಿಕ್ ಸರ್ಜರಿಯ ಅಧ್ಯಕ್ಷರಾದ ಡಾ. ಸಂದೀಪ ಅಗರ್ವಾಲ್ ಅವರು, ಅದು ‘ಜೆ’ (J) ಆಕಾರದಲ್ಲಿದ್ದು, ಆಹಾರ ನಾಳ ಮತ್ತು ಹೊಟ್ಟೆ ಸೇರುವ ಜಂಕ್ಷನ್ನಿಂದ ಸಣ್ಣ ಕರುಳಿನ ಆರಂಭದವರೆಗೆ ಹಬ್ಬಿತ್ತು ಎಂದು ತಿಳಿಸಿದ್ದಾರೆ.
ಮಾನವನ ದೇಹವು ಕೂದಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ, ವರ್ಷಗಳ ಕಾಲ ಸೇವಿಸಿದ ಕೂದಲು ಆಹಾರದೊಂದಿಗೆ ಹೊಟ್ಟೆಯಲ್ಲಿ ಸಂಗ್ರಹಗೊಂಡು ಗಟ್ಟಿಯಾಗಿ ಉಂಡೆಯಂತಾಗಿತ್ತು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಈ ಬೃಹತ್ ಕೂದಲಿನ ರಾಶಿಯು ಹೊಟ್ಟೆಯ ಬಹುಪಾಲ ಭಾಗವನ್ನು ಸಂಪೂರ್ಣವಾಗಿ ಆವರಿಸಿಕೊಂಡು ತೀವ್ರ ಸ್ವರೂಪದ ಊತ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗಿತ್ತು.
ವೈದ್ಯರು ಆರಂಭದಲ್ಲಿ ಎಂಡೋಸ್ಕೋಪಿ ಮೂಲಕ ಈ ಅಪಾಯಕಾರಿ ಕೂದಲಿನ ಉಂಡೆಯನ್ನು ಒಡೆಯಲು ಪ್ರಯತ್ನಿಸಿದರು. ಆದರೆ ಕೂದಲಿನ ಉಂಡೆಯು ಅಳತೆಯಲ್ಲಿ ಅತ್ಯಂತ ದೊಡ್ಡದಾಗಿದ್ದು ದಟ್ಟವಾಗಿದ್ದ ಕಾರಣ ಅದನ್ನು ಸಂಪೂರ್ಣವಾಗಿ ಒಡೆದು ತೆಗೆಯುವುದು ಅಸಾಧ್ಯವಾಯಿತು. ಹೊಟ್ಟೆಯೊಳಗೆ ಅತ್ಯಂತ ಕಡಿಮೆ ಜಾಗವಿದ್ದು, ಹೊಟ್ಟೆಯ ಒಳಪದರವು ಗಾಯಗೊಳ್ಳುವ ಹೆಚ್ಚಿನ ಅಪಾಯವಿತ್ತು. ಹೀಗಾಗಿ ವೈದ್ಯರ ತಂಡವು ಲ್ಯಾಪರೊಸ್ಕೋಪಿಕ್ ನೆರವು ಪಡೆಯಲು ನಿರ್ಧರಿಸಿತು. ಹೊಟ್ಟೆಯ ಸಣ್ಣ ಛೇದನದ (incision) ಮೂಲಕ ಹೊಟ್ಟೆಯ ಒಳಪದರಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಈ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆಯಲಾಯಿತು” ಎಂದು ಅವರು ವಿವರಿಸಿದ್ದಾರೆ.
ಕೂದಲನ್ನು ಪದೇ ಪದೇ ತಿನ್ನುವ ಅಥವಾ ಅಗಿಯುವ ಈ ಮಾನಸಿಕ ಅಭ್ಯಾಸವನ್ನು ‘ಟ್ರಿಕೋಫೇಜಿಯಾ’ (Trichophagia) ಎಂದು ಕರೆಯಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಜನರು ಸಾಮಾನ್ಯವಾಗಿ ಈ ವರ್ತನೆಯನ್ನು ಗಂಭೀರ ವೈದ್ಯಕೀಯ ಸಮಸ್ಯೆಯೆಂದು ಆರಂಭದಲ್ಲಿ ಗುರುತಿಸುವುದಿಲ್ಲ ಮತ್ತು ವೈದ್ಯರ ಬಳಿಯೂ ಇದರ ಬಗ್ಗೆ ಹೇಳಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿಯೇ ಇಂತಹ ಕೂದಲಿನ ಉಂಡೆಗಳು ವರ್ಷಗಟ್ಟಲೆ ಹೊಟ್ಟೆಯಲ್ಲಿ ಮೌನವಾಗಿ ಬೆಳೆದು ಗಂಭೀರ ಸ್ವರೂಪದ ಅಪಾಯವನ್ನುಂಟುಮಾಡುತ್ತವೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ, ಯುವತಿಯ ಹೊಟ್ಟೆಯ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗಿವೆ. ಆಕೆಯ ಹಸಿವು ಸುಧಾರಿಸಿದ್ದು, ಸಾಮಾನ್ಯ ರೀತಿಯಲ್ಲಿ ಆಹಾರ ಸೇವಿಸಲು ಆರಂಭಿಸಿದ್ದಾಳೆ. ಈಗ ಆಕೆಯ ತೂಕ ಸಹ ಕ್ರಮೇಣ ಹೆಚ್ಚುತ್ತಿದ್ದು, ತನ್ನ ಅಧ್ಯಯನವನ್ನು ಮರುಪ್ರಾರಂಭಿಸಿದ್ದಾಳೆ.
ಈ ಶಸ್ತ್ರಚಿಕಿತ್ಸೆಯು ಕೇವಲ ದೈಹಿಕ ಸಮಸ್ಯೆಯನ್ನು ಮಾತ್ರ ಪರಿಹರಿಸುತ್ತದೆ ಎಂದಿರುವ ವೈದ್ಯರು, ‘ಟ್ರಿಕೋಫೇಜಿಯಾ’ ಸಮಸ್ಯೆಯ ಹಿಂದಿನ ಮೂಲ ಕಾರಣವನ್ನು ಗುರುತಿಸಿ ಸೂಕ್ತ ಮಾನಸಿಕ ಬೆಂಬಲವನ್ನು ನೀಡುವುದು ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ