ಶ್ರೀನಗರ: ‘ವಂದೇ ಮಾತರಂ’ ರಾಷ್ಟ್ರಗೀತೆಯ ಪೂರ್ಣ ಆರು ಚರಣಗಳ ಗಾಯನದ ವಿಚಾರ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನಡುವಿನ ಹೊಸ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಶ್ರೀನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ‘ವಂದೇ ಮಾತರಂ’ನ ಆರು ಚರಣಗಳನ್ನು ಸಂಪೂರ್ಣವಾಗಿ ಹಾಡಲಾಗಿದ್ದು, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸಂಪೂರ್ಣ ಗಾಯನದ ಅವಧಿಯಲ್ಲಿ ಎದ್ದು ನಿಂತಿದ್ದರು. ಈ ಘಟನೆ ಬಳಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಪೂರ್ಣ ಆವೃತ್ತಿಯನ್ನು ಆಕ್ಷೇಪಿಸಿತು, ಆದರೆ ನ್ಯಾಷನಲ್ ಕಾನ್ಫರೆನ್ಸ್ ಅಧಿಕೃತ ಕಾರ್ಯಕ್ರಮಗಳಲ್ಲಿ ಸರ್ಕಾರದ ವಿಧಾನವನ್ನು ಸಮರ್ಥಿಸಿತು. ಬಿಜೆಪಿ ಅಬ್ದುಲ್ಲಾ ಕುಟುಂಬವನ್ನು ಶ್ಲಾಘಿಸಿದೆ.
ಕಾಂಗ್ರೆಸ್ನ ಆಕ್ಷೇಪ
ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಅವರು, ಮೈತ್ರಿ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ನಿಲುವನ್ನು ಟೀಕಿಸಿದ್ದಾರೆ. ಭಾರತದ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರಗೀತೆಗಳು ಮತ್ತು ರಾಷ್ಟ್ರೀಯ ಚಿಹ್ನೆಗಳಿಗೆ ಮಹತ್ವದ ಸ್ಥಾನವಿದ್ದರೂ, ಅವು ದೇಶದ ಬಹುತ್ವದ ಸ್ವರೂಪವನ್ನು ಪ್ರತಿಬಿಂಬಿಸಬೇಕು ಎಂದು ಅವರು ಹೇಳಿದ್ದಾರೆ.
“ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಷ್ಟೇ ಅಲ್ಲ, ನಂತರದ ಸಂವಿಧಾನಾತ್ಮಕ ಪಯಣದಲ್ಲಿಯೂ ‘ವಂದೇ ಮಾತರಂ’ಗೆ ನಿರ್ದಿಷ್ಟ ಸ್ಥಾನಮಾನ ರೂಪುಗೊಂಡಿದೆ. ಆದರೆ ನಮ್ಮ ಮೈತ್ರಿ ಪಕ್ಷದವರು ಅದರ ಪೂರ್ಣ ಆರು ಚರಣಗಳನ್ನು ಹಾಡುವ ಮೂಲಕ ಆ ಐತಿಹಾಸಿಕ ಮತ್ತು ಸಂವಿಧಾನಾತ್ಮಕ ಬೆಳವಣಿಗೆಯನ್ನು ಕಡೆಗಣಿಸಿದ್ದಾರೆ” ಎಂದು ಕರ್ರಾ ಹೇಳಿದ್ದಾರೆ.
ಸ್ವಾತಂತ್ರ್ಯದ ಬಳಿಕ ಅಂಗೀಕರಿಸಲಾದ ಎರಡು ಚರಣಗಳ ಆವೃತ್ತಿಯು, ರಾಷ್ಟ್ರಗೀತೆಯ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು ಭಾರತದ ಬಹುತ್ವದ ಮೌಲ್ಯಗಳು ಹಾಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಸಂವಿಧಾನಾತ್ಮಕ ಭರವಸೆಯ ನಡುವೆ ಸಮತೋಲನ ಸಾಧಿಸಿತ್ತು ಎಂದು ಅವರು ಅಭಿಪ್ರಾಯಪಟ್ಟರು.
“ಭಾರತದ ವೈವಿಧ್ಯತೆಯನ್ನು ರಾಷ್ಟ್ರೀಯ ಚಿಹ್ನೆಗಳು ಅಳವಡಿಸಿಕೊಳ್ಳುವಾಗ ಅವುಗಳ ಘನತೆ ಹೆಚ್ಚುತ್ತದೆ. ವೈವಿಧ್ಯತೆಯೇ ರಾಷ್ಟ್ರೀಯ ಚಿಹ್ನೆಗಳಿಗೆ ಹೊಂದಿಕೊಳ್ಳಬೇಕು ಎಂಬ ನಿರೀಕ್ಷೆ ಇರಬಾರದು” ಎಂದು ಅವರು ಹೇಳಿದ್ದಾರೆ.
ತಮ್ಮ ಆಕ್ಷೇಪ ದೇಶಭಕ್ತಿಗೆ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಕರ್ರಾ, “ಇದು ದೇಶಭಕ್ತಿಯನ್ನು ವ್ಯಕ್ತಪಡಿಸುವ ವಿಧಾನ ಕುರಿತ ಚರ್ಚೆ. ವೈವಿಧ್ಯಮಯ ಗಣರಾಜ್ಯದಲ್ಲಿ ದೇಶಭಕ್ತಿಯ ಅಭಿವ್ಯಕ್ತಿ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿರಬೇಕು. ರಾಷ್ಟ್ರೀಯ ಚಿಹ್ನೆಗಳು ಪ್ರತಿಯೊಬ್ಬ ಭಾರತೀಯನಿಗೂ ಸಮಾನವಾಗಿ ತಮ್ಮದೇ ಎಂಬ ಭಾವನೆ ಮೂಡಿಸಬೇಕು” ಎಂದು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಪ್ರತಿಕ್ರಿಯೆ
ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯ ವಕ್ತಾರ ತನ್ವೀರ್ ಸಾದಿಕ್, ಪಕ್ಷವು ಎರಡು-ಚರಣ ಅಥವಾ ಆರು-ಚರಣ ಆವೃತ್ತಿಯನ್ನು ಔಪಚಾರಿಕವಾಗಿ ಅಳವಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
“ಪಕ್ಷ ಮತ್ತು ಸರ್ಕಾರ ಎರಡು ವಿಭಿನ್ನ ಸಂಸ್ಥೆಗಳು. ಸರ್ಕಾರಿ ಕಾರ್ಯಕ್ರಮಗಳು ಸಂಬಂಧಿತ ನಿಯಮಾವಳಿಗಳಿಗೆ ಒಳಪಟ್ಟಿರುತ್ತವೆ” ಎಂದು ಅವರು ಹೇಳಿದರು. ಅದೇ ವೇಳೆ ಯಾರನ್ನೂ ‘ವಂದೇ ಮಾತರಂ’ ಹಾಡಲು ಬಲವಂತಪಡಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾಗವಹಿಸಿದ್ದ ಸಂದರ್ಭದ ವೀಡಿಯೊವನ್ನೂ ಉಲ್ಲೇಖಿಸಿದ ಸಾದಿಕ್, “ನಿಮ್ಮದೇ ಪಕ್ಷದ ರಾಜ್ಯದಲ್ಲಿರುವ ಉದಾಹರಣೆಯನ್ನೂ ಗಮನಿಸಿ” ಎಂದು ಕರ್ರಾಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಶ್ಲಾಘನೆ
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳ ಗಾಯನದ ವೇಳೆ ಎದ್ದು ನಿಂತಿದ್ದನ್ನು ಬಿಜೆಪಿ ಸ್ವಾಗತಿಸಿದೆ.
ಬಿಜೆಪಿ ಮುಖ್ಯ ವಕ್ತಾರ ಪ್ರತುಲ್ ಶಾ ದೇವ ಅವರು, “ಅಬ್ದುಲ್ಲಾಗಳು ರಾಷ್ಟ್ರಗೀತೆಗೆ ಹಾಗೂ ಅದರ ಹೊಸ ಮಾರ್ಗಸೂಚಿಗಳಿಗೆ ಗೌರವ ತೋರಿದ್ದಾರೆ. ಕಾಂಗ್ರೆಸ್ ಅವರಿಂದ ಪಾಠ ಕಲಿಯಬೇಕು” ಎಂದು ಹೇಳಿದ್ದಾರೆ. ಇತರೆ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿ, ರಾಷ್ಟ್ರೀಯ ಚಿಹ್ನೆಗಳ ಗೌರವಕ್ಕಿಂತ ರಾಜಕೀಯ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಎರಡು ಚರಣಗಳ ನಿಲುವಿಗೆ ಕಾಂಗ್ರೆಸ್ ಅಚಲ
ಇನ್ನೊಂದೆಡೆ ಕಾಂಗ್ರೆಸ್ ತನ್ನ ಐತಿಹಾಸಿಕ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಸಂಸದ ಪವನ್ ಖೇರಾ, “ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡ ಎರಡು ಚರಣಗಳನ್ನೇ ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಹಾಗೂ ಕಾಂಗ್ರೆಸ್ ಆಡಳಿತದ ಸರ್ಕಾರಗಳ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ” ಎಂದು ಹೇಳಿದರು. ಮೈತ್ರಿ ಪಕ್ಷಗಳೂ ಇದೇ ಸಂಪ್ರದಾಯವನ್ನು ಅನುಸರಿಸಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಈ ಮೂಲಕ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಭಿನ್ನಾಭಿಪ್ರಾಯವು ಪ್ರತಿಪಕ್ಷಗಳ ವಿಶಾಲ ಮೈತ್ರಿಕೂಟದೊಳಗಿನ ಮತ್ತೊಂದು ಭಿನ್ನಾಭಿಪ್ರಾಯವಾಗಿ ಹೊರಹೊಮ್ಮಿದೆ.


ನಿಮ್ಮ ಕಾಮೆಂಟ್ ಬರೆಯಿರಿ