ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆಯೇ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ
ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ 15 ಕಡೆ ದಾಳಿ ನಡೆದಿದೆ. ಇಂದು, ಬುಧವಾರ ಬೆಳಿಗ್ಗೆ ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇ.ಡಿ. ಅಧಿಕಾರಿಗಳ ತಂಡವು ಸಚಿವರ ಮನೆಯೊಳಗೆ ಪ್ರವೇಶಿಸಿ ಪರಿಶೀಲನೆ ಆರಂಭಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಬಾರ್ ಲೈಸೆನ್ಸ್ ಅಕ್ರಮ ಹಾಗೂ ಹವಾಲಾ ಹಣಕಾಸು ವ್ಯವಹಾರದ ಲಿಂಕ್ ಆಧಾರದ ಮೇಲೆ ಈ ಶೋಧ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.
ಮನೆಯಲ್ಲಿರುವ ಪ್ರಮುಖ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳ ಪರಿಶೀಲನೆ ನಡೆಸಲಾಗತ್ತಿದೆ. ಸಚಿವರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಜೂನ್ ತಿಂಗಳಲ್ಲಿ ಮಂಜುನಾಥ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಇ.ಡಿ., ಅಕ್ರಮ ಬೇನಾಮಿ ಆಸ್ತಿ ಮತ್ತು ಅನುಮಾನಾಸ್ಪದ ವಿದೇಶಿ ವಹಿವಾಟಿನ ಆರೋಪದಡಿಯಲ್ಲಿ ಒಟ್ಟು ₹13.3 ಕೋಟಿ ಮೌಲ್ಯದ ಆಸ್ತಿ ಮತ್ತು ನಗದನ್ನು ಜಪ್ತಿ ಮಾಡಿತ್ತು. ಕಾರ್ಯಾಚರಣೆಯ ವೇಳೆ ಮಂಜುನಾಥ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, ಸುಮಾರು ಸುಮಾರು 5.5 ಕೋಟಿ ರೂ. ನಗದು ಹಾಗೂ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.
ಮಂಜುನಾಥ ಅವರ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ, ಅನಧಿಕೃತ ಸಾರಾಯಿ ಲೈಸೆನ್ಸ್‌ಗಳನ್ನು ಕೊಡಿಸಲು ಸಚಿವ ಸತೀಶ ಜಾರಕಿಹೊಳಿ ಅವರು ಸಹಾಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಭದ್ರತಾ ಸಿಬ್ಬಂದಿಯೊಂದಿಗೆ ಏಕಾಏಕಿ ಬೆಂಗಳೂರಿನ ಡಾಲರ್ಸ್ ಕಾಲೋನಿ ಮನೆಯಲ್ಲಿ ಇ.ಡಿ.ಶೋಧ ಕಾರ್ಯ ಆರಂಭಿಸಿದೆ. ಸುಮಾರು 18 ವಾಹನಗಳಲ್ಲಿ ಬಂದ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಬೆಂಗಳೂರಿನ ಒಟ್ಟು ಆರು ಕಡೆಗಳಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿರುವ ಸಚಿವರ ನಿವಾಸ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ