ವಾಷಿಂಗ್ಟನ್ : ಅಮೆರಿಕದ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ (University of North Texas – UNT) ಭಾರತೀಯ ಮೂಲದ ಎಂಜಿನಿಯರ್ ದಂಪತಿ ಅನುರಾಧಾ ಸಿನ್ಹಾ ಮತ್ತು ವಿಕಾಸ ಸಿನ್ಹಾ ಅವರು 2 ಕೋಟಿ ಡಾಲರ್ (ಸುಮಾರು ₹190 ಕೋಟಿ) ದೇಣಿಗೆ ನೀಡಿ ಕೃತಕ ಬುದ್ಧಿಮತ್ತೆ (AI) ಹಾಗೂ ಸುಧಾರಿತ ವಿಶ್ಲೇಷಣಾ ತಂತ್ರಜ್ಞಾನಗಳಿಗಾಗಿ ಹೊಸ ಕಾಲೇಜು ಸ್ಥಾಪಿಸಲು ನೆರವಾಗಿದ್ದಾರೆ. ವಿಶ್ವವಿದ್ಯಾಲಯವು ಈ ಕಾಲೇಜಿಗೆ “ಅನುರಾಧಾ ಮತ್ತು ವಿಕಾಸ ಸಿನ್ಹಾ ಕಾಲೇಜ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಅಡ್ವಾನ್ಸ್ಡ್ ಅನಾಲಿಟಿಕ್ಸ್” ಎಂದು ಹೆಸರಿಡುವುದಾಗಿ ಘೋಷಿಸಿದೆ.
ಈ ದೇಣಿಗೆಯಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಅವಕಾಶಗಳು ಲಭ್ಯವಾಗಲಿವೆ. ವಿಶ್ವವಿದ್ಯಾಲಯದ ಅಧ್ಯಕ್ಷ ಹ್ಯಾರಿಸನ್ ಕೆಲ್ಲರ್ ಅವರು, “ವಿಕಾಸ ಮತ್ತು ಅನುರಾಧಾ ಅವರ ಕೊಡುಗೆ ನಮ್ಮ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಅಧ್ಯಯನ ಮಾಡಲು ಮತ್ತು ಅವುಗಳನ್ನು ಪ್ರಾಯೋಗಿಕವಾಗಿ ಬಳಸಲು ಅವಕಾಶ ಕಲ್ಪಿಸಲಿದೆ ಎಂದು ಹೇಳಿದ್ದಾರೆ.
ಹೊಸ ಕಾಲೇಜು ಎರಡು ಪ್ರಮುಖ ವಿಭಾಗಗಳ ಸುತ್ತ ಸಂಘಟಿತವಾಗಲಿದೆ. ‘ಡಿವಿಷನ್ ಆಫ್ ಅಪ್ಲೈಡ್ ಇಂಟೆಲಿಜೆನ್ಸ್ ಅಂಡ್ ಇನ್ಫರ್ಮ್ಯಾಟಿಕ್ಸ್’ ವಿಭಾಗವು ಬುದ್ಧಿವಂತ ವ್ಯವಸ್ಥೆಗಳ (intelligent systems) ನಿರ್ಮಾಣ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದರೆ, ‘ಡಿವಿಷನ್ ಆಫ್ ಇನ್ಫರ್ಮೇಶನ್ ಅಂಡ್ ಲರ್ನಿಂಗ್ ಅಪ್ಲಿಕೇಶನ್ಸ್’ ವಿಭಾಗವು ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಮಾನವ ಹಾಗೂ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಅಧ್ಯಯನಕ್ಕೆ ಒತ್ತು ನೀಡಲಿದೆ.
ಈ ಕಾಲೇಜು ಕೃತಕ ಬುದ್ಧಿಮತ್ತೆ, ಬುದ್ಧಿವಂತ ವ್ಯವಸ್ಥೆಗಳು (intelligent systems) ಮತ್ತು ಡೇಟಾ ವಿಶ್ಲೇಷಣೆಯ ಪ್ರಮುಖ ಶೈಕ್ಷಣಿಕ ಹಾಗೂ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಸೈಬರ್ ಭದ್ರತೆ, ಡೇಟಾ ಸೈನ್ಸ್, ಆರೋಗ್ಯ ಮಾಹಿತಿ ವಿಜ್ಞಾನ, ಮಾಹಿತಿ ವಿಜ್ಞಾನ, ಗ್ರಂಥಾಲಯ ವಿಜ್ಞಾನ ಹಾಗೂ ಕಲಿಕಾ ತಂತ್ರಜ್ಞಾನಗಳಂತಹ ವಿವಿಧ ಕ್ಷೇತ್ರಗಳ ಪರಿಣತಿಯನ್ನು ಒಂದೇ ವೇದಿಕೆಗೆ ತರಲಿದೆ.
ಸಿನ್ಹಾ ದಂಪತಿಯ ದೇಣಿಗೆಯಿಂದ ಕಾಲೇಜಿನ ಆಡಳಿತ, ವಿದ್ಯಾರ್ಥಿವೇತನಗಳು, ವಿಶೇಷ ಪ್ರಾಧ್ಯಾಪಕ ಹುದ್ದೆಗಳು, ಉದ್ಯಮಶೀಲತೆ ಮತ್ತು ಇಂಕ್ಯುಬೇಷನ್ ಕಾರ್ಯಕ್ರಮಗಳು, ಸುಧಾರಿತ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಬೆಂಬಲ ನೀಡುವ ಆರು ಶಾಶ್ವತ ನಿಧಿಗಳು ಸ್ಥಾಪನೆಯಾಗಲಿವೆ.
ಈ ಕುರಿತು ಪ್ರತಿಕ್ರಿಯಿಸಿದ ಬ್ರಾಡ್ಕಾಮ್ ಸಂಸ್ಥೆಯ ಉಪಾಧ್ಯಕ್ಷ ವಿಕಾಸ ಸಿನ್ಹಾ, “ನಮಗೆ ದೊರೆತ ಅವಕಾಶವನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವುದೇ ಈ ದೇಣಿಗೆಯ ಉದ್ದೇಶ. ವಲಸಿಗರು ಕೇವಲ ಅಮೆರಿಕನ್ ಕನಸಿನ ಭಾಗವಾಗಿರುವುದಿಲ್ಲ; ಆ ಕನಸನ್ನು ನಿರ್ಮಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಣ ನಮ್ಮ ಜೀವನದಲ್ಲಿ ಅನೇಕ ಬಾಗಿಲುಗಳನ್ನು ತೆರೆದಿದೆ. ಅದೇ ಅವಕಾಶವನ್ನು ಇತರರಿಗೂ ನೀಡಲು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಹೊಸ ಕಾಲೇಜಿನ ಅಡಿಯಲ್ಲಿ ‘ಅಪ್ಲೈಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಡೇಟಾ ಸೈನ್ಸ್ ಇನ್ಸ್ಟಿಟ್ಯೂಟ್’ ಕೂಡ ಕಾರ್ಯನಿರ್ವಹಿಸಲಿದೆ. ಇದು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಎಐ ಮತ್ತು ಡೇಟಾ ವಿಶ್ಲೇಷಣಾ ಸಂಶೋಧನೆಗಳನ್ನುಒಟ್ಟಿಗೆ ತರುವುದರ ಜೊತೆಗೆ ಅಂತರ್ಶಾಖಾ ಸಂಶೋಧನೆ, ಸಂಯುಕ್ತ ಮೂಲಸೌಕರ್ಯ, ಬಾಹ್ಯ ಸಂಶೋಧನಾ ಅನುದಾನ ಮತ್ತು ಕೈಗಾರಿಕಾ ಸಹಭಾಗಿತ್ವಗಳಿಗೆ ಉತ್ತೇಜನ ನೀಡಲಿದೆ.
ಅನುರಾಧಾ ಮತ್ತು ವಿಕಾಸ ಸಿನ್ಹಾ ದಂಪತಿ ಭಾರತದಲ್ಲಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದ ನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ನಂತರ ಇಬ್ಬರೂ ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದರು. ವಿಕಾಸ ಸಿನ್ಹಾ ಅವರು ಬಳಿಕ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರಿಸಿ, 2023ರಲ್ಲಿ ಯುಎನ್ಟಿಯಿಂದ ಪಿಎಚ್ಡಿ ಪದವಿ ಪಡೆದಿದ್ದರು.
ಈ ದಂಪತಿ 2024ರಲ್ಲಿ ‘ಅನುರಾಧಾ ಮತ್ತು ವಿಕಾಸ ಸಿನ್ಹಾ ಡಿಪಾರ್ಟ್ಮೆಂಟ್ ಆಫ್ ಡೇಟಾ ಸೈನ್ಸ್’ ಸ್ಥಾಪನೆಗೆ ದೇಣಿಗೆ ನೀಡಿದ್ದರು. ವಿದ್ಯಾರ್ಥಿವೇತನ, ಅಧ್ಯಾಪಕರ ಬೆಂಬಲ, ಸಂಶೋಧನೆ ಮತ್ತು ವಿಶೇಷ ಯೋಜನೆಗಳಿಗೆ ನಿಧಿಯನ್ನೂ ಸ್ಥಾಪಿಸಿದ್ದರು. 2025ರಲ್ಲಿ ಅವರು ‘ಸಿನ್ಹಾ ಇನೋವೇಶನ್ ಲ್ಯಾಬ್ ಫಾರ್ ಡೇಟಾ ಸೈನ್ಸ್’ ಸ್ಥಾಪನೆಗೆ ಮತ್ತೊಂದು ಮಹತ್ವದ ಕೊಡುಗೆ ನೀಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ