ಬೆಂಗಳೂರು : ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಮನ್ಸೂಚನೆ ನೀಡಿದೆ. ಸೆಪ್ಟೆಂಬರ್ 12 ಮತ್ತು 13 ರಂದು ಮಲೆನಾಡು ಹಾಗೂ ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 12, 13 ಮತ್ತು 14ರಂದು ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸೆಪ್ಟೆಂಬರ್ 14ರಂದು ಅಂದರೆ ಗಣೇಶ ಹಬ್ಬದ ದಿನದಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 12ರಂದು ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯಿದೆ. ಸೆಪ್ಟೆಂಬರ್ 13ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆಪ್ಟಂಬರ್ 12 ಮತ್ತು 13ರಂದು ಉತ್ತರ ಕರ್ನಾಟಕದ ಬೀದರ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಸಹ ಮಳೆಯಾಗಲಿದೆ. ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಹವಾಮಾನ ವರದಿ:
ಹವಾಮಾನ ಇಲಾಖೆ ವರದಿ ಪ್ರಕಾರ, ಗಣೇಶ ಚತುರ್ಥಿ ಸಮಯದಲ್ಲಿ ನಗರದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಸೆಪ್ಟೆಂಬರ್ 12ರಂದು ನಗರ ಮತ್ತು ಗ್ರಾಮಾಂತರ ಪ್ರದೇಶಗಳೆರಡರಲ್ಲೂ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಕೆಲವು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 13ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಸೆಪ್ಟೆಂಬರ್ 14ರಂದು ಗುಡುಗು ಮತ್ತು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 15ರಂದು ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ