ನಮ್ಮದು ‘40%’ : ಜಾಗತಿಕ ಜಿಡಿಪಿಗೆ ಬ್ರಿಕ್ಸ್‌ ಕೊಡುಗೆ ಕೊಂಡಾಡಿ G7 ದೇಶಗಳಿಗೆ ತಿರುಗೇಟು ನೀಡಿದ ರಷ್ಯಾ ಅಧ್ಯಕ್ಷ ಪುತಿನ್

 ನವದೆಹಲಿ: ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಜಿ-7 (G7) ದೇಶಗಳಿಗಿಂತ ಬ್ರಿಕ್ಸ್‌ (BRICS) ಒಕ್ಕೂಟದ ಕೊಡುಗೆಯೇ ಅತ್ಯಂತ ಪ್ರಮುಖವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿ ನಡೆದ ಬ್ರಿಕ್ಸ್‌ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ಜಾಗತಿಕ ಜಿಡಿಪಿಯ ಶೇಕಡಾ 40 ಕ್ಕಿಂತ ಹೆಚ್ಚು ಪಾಲು ಬ್ರಿಕ್ಸ್‌ ರಾಷ್ಟ್ರಗಳಿಂದ ಬಂದಿದೆ. ಇದೇವೇಳೆ ಜಿ-7 ದೇಶಗಳ ಕೊಡುಗೆ ಕೇವಲ ಶೇಕಡಾ 29 ರಷ್ಟಿದೆ. ಹಳೆಯ ಆರ್ಥಿಕ ನಾಯಕರ ಸ್ಥಾನವನ್ನು ಈಗ ಹೊಸ ಬೆಳವಣಿಗೆಯ ಇಂಜಿನ್‌ಗಳು ಆಕ್ರಮಿಸಿಕೊಳ್ಳುತ್ತಿವೆ” ಎಂದು ಪುತಿನ್ ಹೇಳಿದರು.
ಪಾಶ್ಚಿಮಾತ್ಯ ದೇಶಗಳ ವಿರುದ್ಧ ವಾಗ್ದಾಳಿ
ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಅನ್ಯಾಯದ ಸ್ಪರ್ಧೆಯಲ್ಲಿ ತೊಡಗಿವೆ ಎಂದು ಆರೋಪಿಸಿದ ಪುತಿನ್, “ಇಂಧನ ಕೊಳವೆ ಮಾರ್ಗಗಳನ್ನು ಧ್ವಂಸಗೊಳಿಸುವುದು, ಸರಕು ಹಡಗುಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅಕ್ರಮ ನಿರ್ಬಂಧಗಳನ್ನು ಹೇರುವ ಮೂಲಕ ಇತರ ದೇಶಗಳ ಬೆಳವಣಿಗೆಯನ್ನು ತಡೆಯಲು ಯತ್ನಿಸಲಾಗುತ್ತಿದೆ. ರಷ್ಯಾವೊಂದರ ಮೇಲೆಯೇ 30,000ಕ್ಕೂ ಹೆಚ್ಚು ನಿರ್ಬಂಧಗಳನ್ನು ಹೇರಲಾಗಿದೆ. ಆದಾಗ್ಯೂ, ರಷ್ಯಾ ತನ್ನ ಸಾರ್ವಭೌಮತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸಿಕೊಂಡಿದೆ” ಎಂದರು.
ಬೇರೆಯವರ ಹಿತಾಸಕ್ತಿಗಳನ್ನು ಅನುಸರಿಸಲು ಬಯಸದೆ ತಮ್ಮದೇ ಆದ ಹಿತಾಸಕ್ತಿಗಳನ್ನು ನೋಡಿಕೊಳ್ಳುವವರ ವಿರುದ್ಧ ‘ದ್ವಿತೀಯ ಹಂತದ ನಿರ್ಬಂಧ’ಗಳ (secondary sanctions) ಬೆದರಿಕೆಯನ್ನೂ ಒಡ್ಡಲಾಗುತ್ತಿದೆ,” ಎಂದು ಪುತಿನ್ ಹೇಳಿದರು
‘ವಿಶ್ವದ ಅರ್ಧದಷ್ಟು ಜನಸಂಖ್ಯೆ ನಮ್ಮದು’: ಪ್ರಧಾನಿ ಮೋದಿ ಬಣ್ಣನೆ
ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್‌ ಒಕ್ಕೂಟದ ಸಾಮರ್ಥ್ಯವನ್ನು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಆರ್ಥಿಕ ಶಕ್ತಿ: ಬ್ರಿಕ್ಸ್‌ ರಾಷ್ಟ್ರಗಳು ವಿಶ್ವದ ಶೇ. 50 ರಷ್ಟು ಜನಸಂಖ್ಯೆ, ಶೇ. 40 ರಷ್ಟು ಜಿಡಿಪಿ ಮತ್ತು ಶೇ. 25 ಕ್ಕಿಂತ ಹೆಚ್ಚು ಜಾಗತಿಕ ವ್ಯಾಪಾರವನ್ನು ಪ್ರತಿನಿಧಿಸುತ್ತವೆ. ಜಾಗತಿಕ ಜಿಡಿಪಿ 2.5 ಪಟ್ಟು ಬೆಳೆದಿದ್ದರೆ, ಬ್ರಿಕ್ಸ್‌ ಜಿಡಿಪಿ 4.5 ಪಟ್ಟು ಬೆಳೆದಿದೆ. ತಂತ್ರಜ್ಞಾನ ಮತ್ತು ಹೊಸ ಅನ್ವೇಷಣೆಗಳಲ್ಲಿ ಬಿಆರ್‌ಐಸಿಎಸ್ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಯುದ್ಧಕ್ಕೆ ರಾಜತಾಂತ್ರಿಕತೆಯೇ ಪರಿಹಾರ
ಶೃಂಗಸಭೆಯ ಹೊರತಾಗಿ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುತಿನ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷಗಳ ಕುರಿತು ಚರ್ಚಿಸಿದ ಮೋದಿ, “ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ, ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಸೂಕ್ತ ಮಾರ್ಗ” ಎಂದು ಪುನರುಚ್ಚರಿಸಿದರು.
ಗಾಂಧಿ ಮತ್ತು ಬುದ್ಧನ ನಾಡಾದ ಭಾರತವು ಶಾಂತಿಯ ಹಾದಿಯನ್ನು ಬೆಂಬಲಿಸುತ್ತದೆ ಎಂದ ಮೋದಿ, ರಷ್ಯಾದಲ್ಲಿ ನಡೆಯಲಿರುವ 24 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪುತಿನ್ ನೀಡಿದ ಆಹ್ವಾನವನ್ನು ಸ್ವೀಕರಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement