ಪತ್ನಿ, ಮೂವರು ಪುತ್ರಿಯರನ್ನು ಕೊಂದ ಬಳಿಕವೂ ಸಹಜವಾಗಿದ್ದ ಆರೋಪಿ ; ಬೆಳಿಗ್ಗೆ ತಂದೆಗೆ ಚಹಾ ಮಾಡಿಕೊಟ್ಟು ಎಸ್ಕೇಪ್‌ !

ಜೈಪುರ: ರಾಜಸ್ಥಾನದ ಜೈಪುರ ನಗರದ ಕಾರ್ಧನಿ ಪ್ರದೇಶದಲ್ಲಿ ನಡೆದ ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಹುಲ್ ಝಾ ಎಂಬಾತ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಮನೆಯಲ್ಲೇ ಕಲ್ಲಿನಿಂದ ಜಜ್ಜಿ ಹತ್ಯೆಗೈದು, ಮರುದಿನ ಬೆಳಿಗ್ಗೆ ವೃದ್ಧ ತಂದೆಗೆ ಸ್ವತಃ ಚಹಾ ತಯಾರಿಸಿ ನೀಡಿದ ಬಳಿಕ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ರಾಹುಲ್ ಝಾ ತನ್ನ ಪತ್ನಿ ಗೀತಾ ಝಾ ಮತ್ತು ಮೂವರು ಪುತ್ರಿಯರನ್ನು ಕಲ್ಲಿನಿಂದ ತಲೆ ಹಾಗೂ ಮುಖಕ್ಕೆ ಪದೇಪದೇ ಜಜ್ಜಿ ಹತ್ಯೆ ಮಾಡಿದ್ದಾನೆ. ಈ ಕೃತ್ಯವು ಗುರುವಾರ ತಡರಾತ್ರಿ ನಡೆದಿರುವ ಸಾಧ್ಯತೆ ಇದ್ದು, ಆ ವೇಳೆ ನಾಲ್ವರೂ ಗಾಢ ನಿದ್ರೆಯಲ್ಲಿದ್ದರು ಎಂದು ಶಂಕಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಈ ಹತ್ಯೆಗಳ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯ ಮೊದಲ ಮಹಡಿಯಲ್ಲಿದ್ದ ಒಂದು ಕೊಠಡಿಯಲ್ಲಿ ಗೀತಾ ಝಾ ಅವರ ಮೃತದೇಹವನ್ನು ಪತ್ತೆಹಚ್ಚಿದರು. ಪುತ್ರಿಯರಾದ 23 ವರ್ಷದ ನಂದಿನಿ, 18 ವರ್ಷದ ರಾಧಿಕಾ ಹಾಗೂ 14 ವರ್ಷದ ಕಿರಿಯ ಪುತ್ರಿಯ ಮೃತದೇಹಗಳು ನೆಲ ಮಹಡಿಯ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ಸಹಿಸಲು ಸಾಧ್ಯವೇ ಇಲ್ಲ ; ಬ್ರಿಕ್ಸ್‌ ನವದೆಹಲಿ ಘೋಷಣೆಯಲ್ಲಿ ಪಹಲ್ಗಾಮ್‌ ದಾಳಿ ಖಂಡಿಸಿದ ನಾಯಕರು

ಘಟನಾ ಸ್ಥಳದಿಂದ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಕಲ್ಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರು ಗಾಢ ನಿದ್ರೆಯಲ್ಲಿದ್ದಾಗಲೇ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಹತ್ಯೆಯ ನಂತರ ನಡೆದ ಬೆಳವಣಿಗೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ನಾಲ್ವರನ್ನು ಹತ್ಯೆ ಮಾಡಿದ ಬಳಿಕವೂ ರಾಹುಲ್ ಝಾ ಯಾವುದೇ ಆತಂಕವಿಲ್ಲದಂತೆ ಸಾಮಾನ್ಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ ಸುಮಾರು 7 ಗಂಟೆಗೆ ಹಾಲು ಹಾಕುವವನಿಂದ ಹಾಲನ್ನು ಪಡೆದ ಆತ, ಮನೆಯಲ್ಲಿ ಚಹಾ ತಯಾರಿಸಿ ತನ್ನ ವೃದ್ಧ ತಂದೆ ಲಕ್ಷ್ಮೀನಾಥ ಅವರಿಗೆ ಸ್ವತಃ ಕೈಯಾರೆ ನೀಡಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ.ಪ್ರಸ್ತುತ ಆರೋಪಿ ರಾಹುಲ್ ಝಾನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತನಿಖೆಯಲ್ಲಿ ಇನ್ನಷ್ಟು ವಿವರಗಳು ಬೆಳಕಿಗೆ ಬಂದಿವೆ. ರಾಹುಲ್ ಝಾ ಷೇರು ವಹಿವಾಟು (ಶೇರ್ ಟ್ರೇಡಿಂಗ್) ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ. ಘಟನೆಗೆ ಕೆಲವೇ ದಿನಗಳ ಮೊದಲು ಗುಜರಾತ್‌ನಿಂದ ಜೈಪುರಕ್ಕೆ ಮರಳಿದ್ದ. ಪತ್ನಿ ಗೀತಾ ಝಾ ಮನೆಯ ಮೊದಲ ಮಹಡಿಯಲ್ಲಿ ಬೊಟಿಕ್ ನಡೆಸುತ್ತಿದ್ದರು. ಹಿರಿಯ ಪುತ್ರಿ ನಂದಿನಿ ಓದಿನ ಜೊತೆಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಳು.
ಇದಲ್ಲದೆ, ಹತ್ಯೆ ನಡೆದ ಮೂರು ದಿನಗಳ ಹಿಂದಷ್ಟೇ ರಾಹುಲ್ ತನ್ನ ಅಕ್ಕಪಕ್ಕದವರಿಂದ ₹25 ಸಾವಿರ ಸಾಲ ಪಡೆದಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ, ಕುಟುಂಬ ಕಲಹ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಭಾರತ–ಚೀನಾ ಸಹಕಾರಕ್ಕೆ ಹೊಸ ಸಂದೇಶ : ‘ಒಬ್ಬರ ಶಕ್ತಿ-ಸಾಮರ್ಥ್ಯದಿಂದ ಮತ್ತೊಬ್ಬರು ಕಲಿಯಬಹುದು’ ಎಂದ ಚೀನಾ ಅಧ್ಯಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement