ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯ ಅಂಗವಾಗಿ ನಡೆದ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತ ಹಾಗೂ ಚೀನಾ ದೇಶಗಳು ಪ್ರತಿಸ್ಪರ್ಧಿಗಳಾಗದೆ ಪರಸ್ಪರ ಪಾಲುದಾರರಾಗಿರಬೇಕು ಎಂಬ ಅತ್ಯಂತ ಮಹತ್ವದ ಒಮ್ಮತಕ್ಕೆ ಬಂದಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ.
ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ್ದ ಷಿ ಜಿನ್‌ಪಿಂಗ್ ಅವರ ಎರಡು ದಿನಗಳ ಭಾರತ ಭೇಟಿಯ ಬಗ್ಗೆ ಮಾತನಾಡಿದ ವಾಂಗ್ ಯಿ, ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿದ ಕಾರ್ಯತಂತ್ರದ, ದೀರ್ಘಾವಧಿಯ ಹಾಗೂ ಭವಿಷ್ಯದ ದಿಕ್ಕು ನಿರ್ಧರಿಸುವ ಮಹತ್ವದ ವಿಷಯಗಳ ಕುರಿತು ಮುಕ್ತ ಹಾಗೂ ಆಳವಾದ ಚರ್ಚೆ ನಡೆಸಿದರು ಎಂದು ಹೇಳಿದ್ದಾರೆ.
ಭಾರತ ಮತ್ತು ಚೀನಾ ಪರಸ್ಪರರ ಸಾಮರ್ಥ್ಯಗಳಿಂದ ಲಾಭ ಪಡೆಯಬೇಕು, ಒಬ್ಬರಿಗೊಬ್ಬರು ಬೆಂಬಲ ನೀಡಬೇಕು, ಯಶಸ್ಸಿಗೆ ನೆರವಾಗಬೇಕು ಹಾಗೂ ಸಾಮಾನ್ಯ ಅಭಿವೃದ್ಧಿಯ ಗುರಿಯನ್ನು ಒಟ್ಟಾಗಿ ಸಾಧಿಸಬೇಕು ಎಂದು ಷಿ ಜಿನ್‌ಪಿಂಗ್ ಅಭಿಪ್ರಾಯಪಟ್ಟಿದ್ದಾರೆ ಎಂದು ವಾಂಗ್ ಯಿ ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಬ್ರಿಕ್ಸ್ ಅಧ್ಯಕ್ಷತೆಯ ವಿಚಾರದಲ್ಲಿ ಪರಸ್ಪರ ಬೆಂಬಲ ನೀಡುವ ಕುರಿತೂ ಇಬ್ಬರು ನಾಯಕರು ಒಪ್ಪಂದಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಮೋದಿ-ಜಿನ್ ಪಿಂಗ್ ಭೇಟಿ ಜಾಗತಿಕ ಮಟ್ಟದಲ್ಲಿ ವ್ಯಾಪಕ ಗಮನ ಸೆಳೆದಿದೆ ಎಂದು ಹೇಳಿದ ವಾಂಗ್ ಯಿ, ಉಭಯ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಲ್ಲಿ ಭಾರತ-ಚೀನಾ ಸಂಬಂಧಗಳು ನಿಧಾನವಾಗಿ ಹಿನ್ನಡೆಯ ಹಂತದಿಂದ ಹೊರಬಂದು, “ಮರುಆರಂಭ” ಹಂತದಿಂದ “ಮರುಉನ್ನತಿ” ಹಂತದತ್ತ ಸಾಗಿವೆ ಎಂದು ಹೇಳಿದರು.
ಉಭಯ ದೇಶಗಳ ನಡುವಿನ ಸಹಕಾರದ ವಲಯಗಳು ವಿಸ್ತರಿಸುತ್ತಿವೆ, ವ್ಯಾಪಾರ ವಹಿವಾಟು ದಾಖಲೆ ಮಟ್ಟ ತಲುಪಿದೆ ಹಾಗೂ ಜನರ ನಡುವಿನ ಸಂಪರ್ಕಗಳು ಮತ್ತಷ್ಟು ಚುರುಕುಗೊಂಡಿವೆ ಎಂದು ಅವರು ತಿಳಿಸಿದರು. 280 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಮತ್ತು ಚೀನಾ ದೇಶಗಳ ಸಂಬಂಧ ಸುಧಾರಣೆಯನ್ನು ಜನರು ಸ್ವಾಗತಿಸುತ್ತಿದ್ದು, ಜಾಗತಿಕ ದಕ್ಷಿಣ ರಾಷ್ಟ್ರಗಳ (Global South) ಸಹಕಾರ ಬಲಪಡಿಸುವಲ್ಲಿ ಇದು ಪ್ರಮುಖ ಆಧಾರಸ್ತಂಭವಾಗಿದೆ ಎಂದರು.
ಭಾರತ ಮತ್ತು ಚೀನಾ ರಾಜಕೀಯ ಪರಸ್ಪರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವುದು, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಸೂಕ್ತವಾಗಿ ನಿರ್ವಹಿಸುವುದು ಹಾಗೂ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವುದಾಗಿ ಬದ್ಧತೆ ವ್ಯಕ್ತಪಡಿಸಿವೆ. ಉಭಯ ದೇಶಗಳ ಅಭಿವೃದ್ಧಿಯ ಪಥಗಳು ಪರಸ್ಪರರಿಗೆ ಅವಕಾಶವಾಗಿದ್ದು, ಅವುಗಳ ಸಹಕಾರವು ಕೇವಲ ದ್ವಿಪಕ್ಷೀಯ ಸಂಬಂಧಗಳ ವ್ಯಾಪ್ತಿಯನ್ನು ಮೀರಿ ಜಾಗತಿಕ ಮಹತ್ವವನ್ನು ಹೊಂದಿದೆ ಎಂದು ಅವರು ಹೇಳಿದರು.
ಸಂಬಂಧಗಳ ಸಾಮಾನ್ಯೀಕರಣ ಮತ್ತು ಸುಧಾರಣೆ ಸುಲಭವಾಗಿ ದೊರೆತಿಲ್ಲ; ಅದನ್ನು ಮೌಲ್ಯಯುತವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದ ವಾಂಗ್ ಯಿ, ಉಭಯ ನಾಯಕರ ನಡುವಿನ ಒಮ್ಮತವನ್ನು ಕಾರ್ಯರೂಪಕ್ಕೆ ತರಲು ಭಾರತವು ಚೀನಾದ ಜೊತೆ ಕೈಜೋಡಿಸಬೇಕು ಎಂದು ಆಶಿಸಿದರು. ಭಾರತ ಮತ್ತು ಚೀನಾ ಪ್ರತಿಸ್ಪರ್ಧಿಗಳಾಗದೆ ಪಾಲುದಾರರಾಗಿ ಉಳಿದುಕೊಂಡು, ಸಂಬಂಧಗಳಲ್ಲಿ ಹಿನ್ನಡೆ ಅಥವಾ ಸ್ಥಗಿತ ಉಂಟಾಗದಂತೆ ನಿರಂತರ ಪ್ರಗತಿ ಸಾಧಿಸಬೇಕು ಎಂದು ಅವರು ಹೇಳಿದರು.
ಗಡಿ ಸಮಸ್ಯೆಯನ್ನು ದ್ವಿಪಕ್ಷೀಯ ಸಂಬಂಧಗಳ ವಿಶಾಲ ಚೌಕಟ್ಟಿನಲ್ಲಿಯೇ ಪರಿಗಣಿಸಬೇಕು; ಸಂವಾದ ಮತ್ತು ಸಹಕಾರವೇ ಮುಂದಿನ ದಾರಿಯಾಗಿದೆ ಎಂದುಅಭಿಪ್ರಾಯಪಟ್ಟ ಅವರು, ಉಭಯ ದೇಶಗಳು ತಮ್ಮ ಅಭಿವೃದ್ಧಿ ಮತ್ತು ರಾಷ್ಟ್ರೀಯ ಪುನರುತ್ಥಾನವನ್ನು ವೇಗಗೊಳಿಸುವುದರ ಜೊತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಪ್ರಧಾನಿ ಮೋದಿ ಅವರ ಜೊತೆಗಿನ ಭೇಟಿಯಲ್ಲಿ ಮಾತನಾಡಿದ ಷಿ ಜಿನ್‌ಪಿಂಗ್, ಪರಸ್ಪರ ಗೌರವ ಮತ್ತು ತಿಳಿವಳಿಕೆಯ ಆಧಾರದ ಮೇಲೆ ರಾಜಕೀಯ ವಿವೇಕವನ್ನು ಬಳಸಿಕೊಂಡು ಅಡೆತಡೆಗಳನ್ನು ನಿವಾರಿಸಬೇಕು ಎಂದು ಕರೆ ನೀಡಿದರು. ದ್ವಿಪಕ್ಷೀಯ ಸಂಬಂಧಗಳು ಮತ್ತು ಗಡಿ ಸಮಸ್ಯೆಯ ಪರಿಹಾರ ಪ್ರಕ್ರಿಯೆ ಎರಡೂ ಸಮಾನಾಂತರವಾಗಿ ಮುನ್ನಡೆಯಬೇಕು ಹಾಗೂ ಪರಸ್ಪರ ಬಲವರ್ಧಕವಾಗಬೇಕು ಎಂದು ಅವರು ಹೇಳಿದರು. ಇದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಭಾರತವು ಸದಾ ಚೀನಾ-ಭಾರತ ಸಂಬಂಧಗಳನ್ನು ಕಾರ್ಯತಂತ್ರದ ಹಾಗೂ ದೀರ್ಘಾವಧಿಯ ದೃಷ್ಟಿಕೋನದಿಂದಲೇ ನೋಡಿದೆ ಎಂದು ತಿಳಿಸಿದರು ಎಂದು ವಾಂಗ್ ಯಿ ಹೇಳಿದರು. ಭಾರತವು ಚೀನಾಕ್ಕೆ ಪ್ರತಿಸ್ಪರ್ಧಿಯಲ್ಲ, ಪಾಲುದಾರನಾಗಲು ಸಿದ್ಧವಿದ್ದು, ಪರಸ್ಪರರ ಅಭಿವೃದ್ಧಿಯನ್ನು ಸವಾಲಾಗಿ ಅಲ್ಲ, ಅವಕಾಶವಾಗಿ ಪರಿಗಣಿಸುತ್ತದೆ ಎಂದು ಮೋದಿ ಹೇಳಿದ್ದಾರೆ ಎಂದು ವಾಂಗ್ ಯಿ ಉಲ್ಲೇಖಿಸಿದರು.
ಭಾರತ-ಚೀನಾ ಸಂಬಂಧಗಳ ಕುರಿತು ಭಾರತದ ನಿಲುವು ಯಾವುದೇ ಮೂರನೇ ದೇಶದ ಪ್ರಭಾವದಿಂದ ನಿರ್ಧಾರವಾಗುವುದಿಲ್ಲ. ಭಾರತೀಯ ಭೂಭಾಗವನ್ನು ಚೀನಾ ವಿರೋಧಿ ಚಟುವಟಿಕೆಗಳಿಗೆ ಬಳಸಲು ಯಾವುದೇ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ ಎಂದು ವಾಂಗ್ ಯಿ ತಿಳಿಸಿದ್ದಾರೆ.
ಚೀನಾದ ಜೊತೆಗೆ ಉನ್ನತ ಮಟ್ಟದ ಸಂಪರ್ಕಗಳನ್ನು ಮುಂದುವರಿಸುವುದು, ಕಾರ್ಯತಂತ್ರದ ಸಂವಹನವನ್ನು ಗಾಢಗೊಳಿಸುವುದು ಹಾಗೂ ಪರಸ್ಪರ ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಜನರ ನಡುವಿನ ಸಂಪರ್ಕಗಳನ್ನು ವಿಸ್ತರಿಸುವುದಕ್ಕೆ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಯನ್ನು ಉಭಯ ರಾಷ್ಟ್ರಗಳ ಸಾಮಾನ್ಯ ಹಿತಾಸಕ್ತಿಗಳ ಅಡಿಪಾಯವಾಗಿಸಿಕೊಳ್ಳುವುದು, ಸ್ನೇಹಪರ ಸಂಬಂಧಗಳು ಮತ್ತು ಪರಸ್ಪರ ಲಾಭದಾಯಕ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಸಾಂಸ್ಕೃತಿಕ ವಿನಿಮಯ, ಜನರ ನಡುವಿನ ಸಂಪರ್ಕ ಮತ್ತು ನೇರ ವಿಮಾನ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವುದಕ್ಕೂ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತ ಮತ್ತು ಚೀನಾ ಜನರ ನಡುವಿನ ಪರಸ್ಪರ ಅರಿವು ಹೆಚ್ಚುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧಗಳಿಗೆ ಸಾರ್ವಜನಿಕ ಬೆಂಬಲವೂ ಬಲಗೊಳ್ಳಲಿದೆ ಎಂದು ವಾಂಗ್ ಯಿ ಹೇಳಿದರು.
ಬ್ರಿಕ್ಸ್ ಅಧ್ಯಕ್ಷತೆಯ ವಿಚಾರದಲ್ಲಿ ಪರಸ್ಪರ ಬೆಂಬಲ ನೀಡುವುದು, ವಿಶ್ವಸಂಸ್ಥೆ (UN), ಶಾಂಘೈ ಸಹಕಾರ ಸಂಘಟನೆ (SCO) ಹಾಗೂ ಜಿ-20 (G20) ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಮನ್ವಯವನ್ನು ಬಲಪಡಿಸುವುದು ಮತ್ತು ಜಾಗತಿಕ ದಕ್ಷಿಣ ರಾಷ್ಟ್ರಗಳ ಸಹಕಾರವನ್ನು ಮುಂದುವರಿಸುವುದಕ್ಕೂ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
ಜಾಗತಿಕ ಅನಿಶ್ಚಿತತೆಯ ನಡುವೆಯೂ ಹೆಚ್ಚು ಬಹುಕೇಂದ್ರಿತ ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಹಾಗೂ ಸ್ಥಿರತೆ ಮತ್ತು ಪ್ರಗತಿಗೆ ಪೂರಕ ಶಕ್ತಿಗಳಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ವಾಂಗ್ ಯಿ ಅವರ ಹೇಳಿಕೆಗಳನ್ನು ವಿವರಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಷಿ ಜಿನ್‌ಪಿಂಗ್ ಮತ್ತು ನರೇಂದ್ರ ಮೋದಿ ಅವರ ನಡುವೆ ಮೂಡಿರುವ ಮಹತ್ವದ ಒಮ್ಮತಗಳನ್ನು ಕಾರ್ಯರೂಪಕ್ಕೆ ತರಲು ಚೀನಾವು ಭಾರತ ಜತೆಗೂಡಿ ಕೆಲಸ ಮಾಡಲಿದೆ ಎಂದು ಸೋಮವಾರ ಹೇಳಿದ್ದಾರೆ.
“ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ದಿಕ್ಕನ್ನು ನಿರ್ಧರಿಸಿದ್ದಾರೆ. ಅವರ ನಡುವೆ ಮೂಡಿರುವ ಮಹತ್ವದ ಒಮ್ಮತಗಳನ್ನು ಜಾರಿಗೆ ತರಲು ಚೀನಾ ಭಾರತ ಜತೆ ನಿಕಟವಾಗಿ ಕೆಲಸ ಮಾಡಲಿದೆ” ಎಂದು ಗುವೊ ಹೇಳಿದರು.
ಸಹಕಾರದ ಕ್ಷೇತ್ರಗಳನ್ನು ಇನ್ನಷ್ಟು ವಿಸ್ತರಿಸುವುದು, ಜನರ ನಡುವಿನ ಸಂಪರ್ಕಗಳನ್ನು ಗಾಢಗೊಳಿಸುವುದು, ಬಹುಪಕ್ಷೀಯ ವೇದಿಕೆಗಳಲ್ಲಿ ಸಮನ್ವಯವನ್ನು ಬಲಪಡಿಸುವುದು ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ನಿರಂತರವಾಗಿ ಸುಧಾರಿಸುವ ಕಾರ್ಯವನ್ನು ಚೀನಾ ಮುಂದುವರಿಸಲಿದೆ ಎಂದು ಅವರು ಹೇಳಿದರು. ಜೊತೆಗೆ, ಭಾರತದ ಅಭಿವೃದ್ಧಿ ಮತ್ತು ರಾಷ್ಟ್ರೀಯ ಪುನರುಜ್ಜೀವನಕ್ಕೆ ಚೀನಾ ದೃಢ ಬೆಂಬಲ ನೀಡಲಿದ್ದು, ಉಭಯ ದೇಶಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಹಾಗೂ ಸಮೃದ್ಧಿಗೆ ಒಟ್ಟಾಗಿ ಕೊಡುಗೆ ನೀಡಲಿವೆ ಎಂದರು.
ಇದೇವೇಳೆ, 2027ರಲ್ಲಿ ಬ್ರಿಕ್ಸ್ ಸಂಘಟನೆಯ ಅಧ್ಯಕ್ಷತೆಯನ್ನು ಚೀನಾ ವಹಿಸಿಕೊಳ್ಳಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ