ಮಂಗಳೂರು : ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಸರ್ಕಾರ ತೀರ್ಮಾನಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡಪಿ ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ (Second Additional Official Language) ನೀಡಲು ತೀರ್ಮಾನಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಘೋಷಣೆ ಮಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಎಂದು ಎಂದು ಕರೆಯಲ್ಪಡುವ ಹಾಗೂ ಸುಮಾರು 2,000 ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯ ಪ್ರಗತಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ, ಈ ಹಿಂದೆ ಡಾ. ಮೋಹನ ಆಳ್ವ ನೇತೃತ್ವದ ಸಮಿತಿಯು ಸಂವಿಧಾನದ 345ನೇ ವಿಧಿಯಡಿ ಎರಡನೇ ಅಧಿಕೃತ ಭಾಷಾ ಮಾನ್ಯತೆ ನೀಡಬಹುದು ಎಂದು ವರದಿ ಸಲ್ಲಿಸಿತ್ತು.
ಅಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಬಳಕೆಯಲ್ಲಿರುವ ತುಳುವಿಗೆ ರಾಜ್ಯ ಮಟ್ಟದಲ್ಲಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಸಿಕ್ಕಿರುವುದು, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಗಟ್ಟಿಯಾದ ವೇದಿಕೆಯನ್ನು ಕಲ್ಪಿಸಿಕೊಡಲಿದೆ.
ತುಳು ಭಾಷೆಯ ಮಾನ್ಯತೆಯ ಜೊತೆಗೆ, ಕರಾವಳಿ ಜನರ ಬಹುದಿನಗಳ ಮತ್ತೊಂದು ಬೇಡಿಕೆಯಾದ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಒಂದು ತಿಂಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದ್ದಾರೆ. ಅಲ್ಲದೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಲು ಹೊಸ ಟೂರಿಸಂ ಪಾಲಿಸಿ’ ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ