ನಂದಿಗ್ರಾಮ ಉಪಸಮರ : ಮಮತಾಗೆ ಶಾಕ್‌ ಮೇಲೆ ಶಾಕ್‌; ಚಿಹ್ನೆ ಬದಲು, ಕೈಕೊಟ್ಟ ಅಭ್ಯರ್ಥಿ ; ಕಾಂಗ್ರೆಸ್ಸಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಕೈ ಅಭ್ಯರ್ಥಿ ಬಂಧನ !

ಕೋಲ್ಕತ್ತಾ: ಅಕ್ಟೋಬರ್ 6 ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯು ಅಚ್ಚರಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ ಡೇ ನಾಮಪತ್ರ ವಾಪಸಾತಿ, ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಕಾಂಗ್ರೆಸ್‌ಗೆ ದಿಢೀರ್ ಬೆಂಬಲ ಘೋಷಣೆ, ಹಾಗೂ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಕೊಲೆ ಪ್ರಕರಣದಲ್ಲಿ ಬಂಧನ—ಈ ಮೂರು ಪ್ರಮುಖ ಘಟನೆಗಳೊಂದಿಗೆ ಪಶ್ಚಿಮ ಬಂಗಾಳ ರಾಜಕೀಯ ಕಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ನಂದಿಗ್ರಾಮ ಉಪಚುನಾವಣೆಗೆ ಮಮತಾ ಬ್ಯಾನರ್ಜಿ ಬಣದಿಂದ ಸಂಚಿತಾ ಪ್ರಧಾನ ದೇಯ್ ಕಣಕ್ಕಿಳಿದಿದ್ದರು. ಆದರೆ ಮಮತಾ ಬ್ಯಾನರ್ಜಿ ಅವರಿಗೆ ಆಘಾತಕಾರಿ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಜೊತೆ ನಡೆದ ಮಾತುಕತೆಯ ಬಳಿಕ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.
ಇದರ ಬೆನ್ನಲ್ಲೇ ಶುಕ್ರವಾರ ಕಾಳಘಾಟ್ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ನ ಮಿಲನ್ ಪ್ರಧಾನ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದರು. ಹಾಗೂಇಂಡಿಯಾ ಮೈತ್ರಿಕೂಟವನ್ನು ಬಲಪಡಿಸಲು ಕಾಂಗ್ರೆಸ್ ಅನ್ನು ಬೆಂಬಲಿಸುವುದಾಗಿ ಹೇಳಿದರು. ಹಾಗೂ ಕೈ ಪಕ್ಷವನ್ನು ತಮ್ಮ “ಸೋದರ ಪಕ್ಷ” ಎಂದು ಬಣ್ಣಿಸಿದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ಬೆಂಬಲ ನೀಡಲು ಮಮತಾ ಸ್ವತಂತ್ರರು. ಆದರೆ ನಾವು ಅವರ ಬೆಂಬಲ ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಬಂಧನ
ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಹಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2007ರ ನಂದಿಗ್ರಾಮ ಭೂ ಸ್ವಾಧೀನ ವಿರೋಧಿ ಹೋರಾಟದ ಸಂದರ್ಭದಲ್ಲಿ ನಡೆದಿದ್ದ ಹಳೆಯ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. 2007ರ ಈ ಹೋರಾಟವೇ ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದ ಅತ್ಯಂತ ನಿರ್ಣಾಯಕ ತಿರುವುಗಳಲ್ಲಿ ಒಂದಾಗಿದ್ದು, 34 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಎಡಪಕ್ಷಗಳ (Left Front) ವಿರುದ್ಧ ಟಿಎಂಸಿ ನೆಲೆಯೂರಲು ಇದು ಸಹಾಯ ಮಾಡಿತ್ತು. 2011ರಲ್ಲಿ ಅಧಿಕಾರಕ್ಕೆ ಬಂದ ಟಿಎಂಸಿ, 2026ರಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾಗುವವರೆಗೆ ಬಂಗಾಳದಲ್ಲಿ ನಿರಂತರವಾಗಿ ಆಳಿತ್ತು.
ಈ ಬಂಧನದ ವಿರುದ್ಧ ವಿಪಕ್ಷಗಳು ತೀವ್ರ ಆಕ್ರೋಶ
“ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಕೆಲವೇ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಂಧಿಸಿರುವುದು ನಂಬಲಸಾಧ್ಯ. ಇದು ಅವರೇಕೆ ಇಷ್ಟು ಭಯಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ, “ಬಿಜೆಪಿಯ ಬಂಗಾಳದಲ್ಲಿ ಪ್ರಜಾಪ್ರಭುತ್ವವು ವೆಂಟಿಲೇಟರ್‌ನಲ್ಲಿದೆ. 19 ವರ್ಷಗಳ ಹಳೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಬಂಧಿಸಿರುವುದು ಬಿಜೆಪಿ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುತ್ತಿರುವುದಕ್ಕೆ ಸಾಕ್ಷಿ. ಬ್ರಿಟಿಷರನ್ನೇ ಓಡಿಸಿದ ಪಕ್ಷ ನಮ್ಮದು, ಇಂತಹ ಅಗ್ಗದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ಪ್ರಮುಖ ಸುದ್ದಿ :-   ಪರೀಕ್ಷೆಯಲ್ಲಿ ಉತ್ತರ ಪಡೆಯಲು ಚಾಟ್‌ಜಿಪಿಟಿ ಬಳಕೆ: ಪ್ರಾಧ್ಯಾಪಕರಿಗೆ ಸಿಕ್ಕಿಬಿದ್ದ ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ

 ಮಮತಾ ಬ್ಯಾನರ್ಜಿಗೆ ಚಿಹ್ನೆ ಶಾಕ್
ಈ ಎಲ್ಲ ರಾಜಕೀಯ ನಾಟಕಗಳ ನಡುವೆ, ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರಿನ ಮೇಲೂ ದೊಡ್ಡ ವಿವಾದ ಉಂಟಾಗಿದೆ. ಅಕ್ಟೋಬರ್ 6ರ ಉಪಚುನಾವಣೆಗಾಗಿ ಚುನಾವಣಾ ಆಯೋಗವು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ (All India Trinamool Congress) ಹೆಸರು ಮತ್ತು ಪಕ್ಷದ ಸಾಂಪ್ರದಾಯಿಕ ‘ಹುಲ್ಲು ಮತ್ತು ಹೂವು’ (flowers and grass) ಚಿಹ್ನೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ (freeze ಮಾಡಿದೆ). ತೃಣಮೂಲ ಕಾಂಗ್ರೆಸ್ಸಿನ ಎರಡು ಬಣಗಳು ಪಕ್ಷದ ಚಿಹ್ನೆ ಹಾಗೂ ಹೆಸರಿಗಾಗಿ ಹಕ್ಕು ಮಂಡಿಸಿದ್ದರಿಂದ ಹಾಗೂ ಉಪಚುನಾವಣೆಗೆ ಮೊದಲು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಸಾಧ್ಯವಾಗಿದ್ದರಿಂದ ಚುನಾವಣೆ ಆಯೋಗವು ಈ ನಿರ್ದಾರ ತೆಗೆದುಕೊಂಡಿದೆ.
ಆಯೋಗವು ಮಮತಾ ಬ್ಯಾನರ್ಜಿ ಬಣಕ್ಕೆ ‘ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ (Mamata All India Trinamool Congress) ಎಂಬ ಹೆಸರನ್ನು ನೀಡಿದ್ದು, ‘ಫುಟ್‌ಬಾಲ್ ಪ್ಲೇಯರ್‌’ (Football Player) ಚಿಹ್ನೆಯನ್ನು ನೀಡಿದೆ.
ಅರೂಪ್ ರಾಯ್ ನೇತೃತ್ವದ ಪ್ರತಿಸ್ಪರ್ಧಿ ಬಣಕ್ಕೆ ‘ಪ್ರಜಾಸತ್ತಾತ್ಮಕ ತೃಣಮೂಲ ಕಾಂಗ್ರೆಸ್’ (Democratic Trinamool Congress) ಎಂಬ ಹೆಸರನ್ನು ನೀಡಿ, ‘ಎನ್ವಲಪ್‌’ (Envelope) ಚಿಹ್ನೆಯನ್ನು ನೀಡಲಾಗಿದೆ.
ಒಟ್ಟಾರೆಯಾಗಿ, ಅಭ್ಯರ್ಥಿಗಳ ನಾಮಪತ್ರ ವಾಪಸಾತಿ, ದಿಢೀರ್ ಬೆಂಬಲ ಘೋಷಣೆ, ಹಳೆಯ ಕೊಲೆ ಪ್ರಕರಣದ ಬಂಧನ ಮತ್ತು ಚುನಾವಣಾ ಆಯೋಗದ ಚಿಹ್ನೆ ಬದಲಾವಣೆಯಂತಹ ರೋಚಕ ತಿರುವುಗಳೊಂದಿಗೆ ಈ ಉಪಚುನಾವಣೆ ಇಡೀ ದೇಶದ ಗಮನ ಸೆಳೆದಿದೆ.

ಪ್ರಮುಖ ಸುದ್ದಿ :-   ವಿಡಿಯೋ | ಸ್ನೇಹಿತರ ಜಗಳದ ಬಳಿಕ ರೋಷಾವೇಶ ; ಗೆಳೆಯರಿದ್ದ ಕಾರಿಗೆ ಪದೇ ಪದೇ ಥಾರ್‌ ಡಿಕ್ಕಿ ಹೊಡೆಸಿದ ಯುವಕ !

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement