ಹುಬ್ಬಳ್ಳಿ: ಕೆಎಎಚ್ಇಆರ್ (KAHER)ನ ಜೆಜಿಎಂಎಂ ಮೆಡಿಕಲ್ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ (ಸೆ.18) ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ (ಸೆ.19) ನಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಗಬ್ಬೂರು ಸಮೀಪದ ಕಾರ್ಯಕ್ರಮದ ಸ್ಥಳದಲ್ಲಿ ಬೆಳಿಗ್ಗೆ 11 ಗಂಟೆಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಅಮಿತ್ ಶಾ ಉದ್ಘಾಟಿಸಬೇಕಿತ್ತು. ಇದಕ್ಕಾಗಿ ಕಾರ್ಯಕ್ರಮದ ಸ್ಥಳದಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿತ್ತು. ಅಮಿತ್ ಶಾ ಅವರ ಆಗಮನದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮದ ಸುತ್ತಮುತ್ತ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿತ್ತು.
ಶನಿವಾರ ಬೆಳಿಗ್ಗೆ ಅಮಿತ್ ಶಾ ಅವರು ಆರೋಗ್ಯವಾಗಿಯೇ ಇದ್ದರು. ಆದರೆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ವಿಷಯವನ್ನು ತಿಳಿಸಿದ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (KAHER) ಕುಲಪತಿ ಪ್ರಭಾಕರ ಕೋರೆ, ‘ಕೇಂದ್ರ ಗೃಹ ಸಚಿವರು ಅಸ್ವಸ್ಥರಾಗಿದ್ದು, ವೈದ್ಯರ ಸಲಹೆಯ ಮೇರೆಗೆ ಹುಬ್ಬಳ್ಳಿಯ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. “ಈ ಸಂದೇಶವನ್ನು ನಿಮಗೆ ತಲುಪಿಸುವಂತೆ ಅವರು ನನಗೆ ತಿಳಿಸಿದ್ದಾರೆ,” ಎಂದೂ ಅವರು ಹೇಳಿದರು.
ಪರೀಕ್ಷಿಸಿದ ವೈದ್ಯರು ಕೆಲಕಾಲ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಎಲ್ಲ ಕಾರ್ಯಕ್ರಮ ರದ್ದುಪಡಿಸಿ ಅಮಿತ್ ಶಾ ಅಲ್ಲಿಂದ ನೇರವಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ