ಇಂಗ್ಲೆಂಡ್ನ ಟೆಲ್ಫೋರ್ಡ್ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ 33 ವರ್ಷದ ಯೆಮೆನ್ ಪ್ರಜೆಯೊಬ್ಬ ಬಸ್ನ್ನು ಕದ್ದು, ತಪ್ಪು ದಿಕ್ಕಿನಲ್ಲಿ ಅಪಾಯಕಾರಿಯಾಗಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 18ರಂದು ಸಂಜೆ ಸುಮಾರು 6:30ಕ್ಕೆ ಮೇಡ್ಲಿಯ ಕೋರ್ಟ್ ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಿಡಿಯೊದಲ್ಲಿ ಯೆಮೆನ್ ಪ್ರಜೆ ಅಲಿ ಬಾಲ್ಹಾದ್ ಎಂಬಾತ ಸಿಖ್ ಚಾಲಕನ ಗಡ್ಡವನ್ನು ಹಿಡಿದು ಎಳೆಯುವುದು ಹಾಗೂ ಬಳಿಕ ತನ್ನ ತಲೆಯಿಂದ ಚಾಲಕನ ತಲೆಗೆ ಬಲವಾಗಿ ಡಿಚ್ಚಿ ಹೊಡೆದು ಹಲ್ಲೆ ನಡೆಸುವುದು ಕಂಡುಬಂದಿದೆ. ಈ ವೇಳೆ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಮಹಿಳೆಯೊಬ್ಬರು, “ನೀವು ಅವರೊಂದಿಗೆ ಹೀಗೆ ಏಕೆ ವರ್ತಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
“ದಯವಿಟ್ಟು ಪೊಲೀಸರಿಗೆ ಕರೆ ಮಾಡಬಹುದೇ?” ಎಂದು ಚಾಲಕ ಆ ಮಹಿಳೆಯನ್ನು ಕೇಳಿದ್ದಾರೆ. “ಈ ವ್ಯಕ್ತಿಯನ್ನು ನನ್ನಿಂದ ದೂರ ಕರೆದುಕೊಂಡು ಹೋಗಿ” ಎಂದೂ ಮನವಿ ಮಾಡಿದ್ದಾರೆ.
ಬಳಿಕ ಬಾಲ್ಹಾದ್ ಬಸ್ನೊಳಗಿನ ವಿವಿಧ ಭಾಗಗಳನ್ನು ಎಳೆದು ಹಾನಿಗೊಳಿಸಿದ್ದಾನೆ. ಇದನ್ನು ಕಂಡ ಮಹಿಳೆ, “ನೀವು ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ನಂತರ ಚಾಲಕನ ಕ್ಯಾಬಿನ್ನಿಂದ ಒಂದು ವಸ್ತುವನ್ನು ಹೊರತೆಗೆದ ಬಾಲ್ಹಾದ್, ಅದರಿಂದ ಚಾಲಕನ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಸ್ ಅನ್ನು ತನಗೆ ಒಪ್ಪಿಸುವಂತೆ ಆತ ಪದೇಪದೇ ಚಾಲಕನನ್ನು ಒತ್ತಾಯಿಸಿದ್ದಾನೆ.
ಒಂದು ನಿಮಿಷಕ್ಕೂ ಹೆಚ್ಚು ಕಾಲ ಹಲ್ಲೆ ಮುಂದುವರಿದ ಬಳಿಕ ಬಾಲ್ಹಾದ್ ಚಾಲಕನನ್ನು ಬಸ್ನಿಂದ ಹೊರಕ್ಕೆ ತಳ್ಳಿ, ತಾನೇ ಚಾಲಕನ ಆಸನಕ್ಕೆ ಕುಳಿತು ಬಸ್ನ್ನು ಕೊಂಡೊಯ್ದಿದ್ದಾನೆ.
ಬಳಿಕ ಬಸ್ನ್ನು ಪಾರ್ಕ್ ವೇ ಮೂಲಕ ಹೈ ಸ್ಟ್ರೀಟ್ ಕಡೆಗೆ ತಪ್ಪು ದಿಕ್ಕಿನಲ್ಲಿ ಚಲಾಯಿಸಲಾಗಿದ್ದು, ಮಾರ್ಗಮಧ್ಯೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ವೆಸ್ಟ್ ಮರ್ಸಿಯಾ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೊದಲ್ಲಿ ಮಹಿಳೆಯೊಬ್ಬರು ಭಯದಿಂದ ಕಿರುಚುತ್ತಾ, ಜನರು ದಾರಿ ಬಿಡುವಂತೆ ಪದೇಪದೇ ಮನವಿ ಮಾಡುತ್ತಿರುವುದು ಕೇಳಿಸುತ್ತದೆ. “ಓ ಮೈ ಗಾಡ್” ಎಂದು ಆಕೆ ಕೂಗುತ್ತಿರುವುದೂ ಕೇಳಿಬರುತ್ತದೆ.
ಸಂಜೆ ಸುಮಾರು 6:37ಕ್ಕೆ ಪೊಲೀಸರಿಗೆ ಕರೆ ಬಂದಿದ್ದು, ಅಧಿಕಾರಿಗಳು ಕೋರ್ಟ್ ಸ್ಟ್ರೀಟ್ಗೆ ಧಾವಿಸಿದ್ದಾರೆ. ಬಳಿಕ ಬಸ್ನ್ನು ನಿಲ್ಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ದರೋಡೆ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಆರೋಪದ ಮೇಲೆ ಬಾಲ್ಹಾದ್ನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಇತರ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
10 ನಿಮಿಷದಲ್ಲೇ ಸ್ಥಳಕ್ಕೆ ಧಾವಿಸಿ ಆರೋಪಿಯ ಬಂಧನ
ಟೆಲ್ಫೋರ್ಡ್ ಸ್ಥಳೀಯ ಪೊಲೀಸ್ ವಿಭಾಗದ ಅಧೀಕ್ಷಕ ಎಡ್ವರ್ಡ್ ಹ್ಯಾನ್ಕಾಕ್ಸ್ ಮಾತನಾಡಿ, ಪೊಲೀಸರಿಗೆ ಮೊದಲ ಕರೆ ಬಂದ 10 ನಿಮಿಷಗಳೊಳಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮಾಲಿನ್ಸ್ಗೇಟ್ ಪೊಲೀಸ್ ಠಾಣೆಯಿಂದ ಶಸ್ತ್ರಸಜ್ಜಿತ ಅಧಿಕಾರಿಗಳನ್ನೂ ನಿಯೋಜಿಸಲಾಗಿತ್ತು.
ತನಿಖೆಗೆ ನೆರವಾಗುವಂತೆ ಪ್ರತ್ಯಕ್ಷದರ್ಶಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಕೋರ್ಟ್ ಸ್ಟ್ರೀಟ್, ಪಾರ್ಕ್ ವೇ ಅಥವಾ ಹೈ ಸ್ಟ್ರೀಟ್ ಪ್ರದೇಶಗಳಲ್ಲಿ ಡ್ಯಾಶ್ಕ್ಯಾಮ್, ಸಿಸಿಟಿವಿ, ಮೊಬೈಲ್ ಫೋನ್ ಅಥವಾ ಡೋರ್ಬೆಲ್ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದ್ದರೆ, ಅವುಗಳನ್ನು ಪರಿಶೀಲಿಸಿ ಪೊಲೀಸರಿಗೆ ನೀಡುವಂತೆ ಕೋರಲಾಗಿದೆ.
ಬಾಲ್ಹಾದ್ ಟೆಲ್ಫೋರ್ಡ್ ಪ್ರದೇಶಕ್ಕೆ ಸುಮಾರು ಒಂದು ವಾರದ ಹಿಂದಷ್ಟೇ ಬಂದಿದ್ದ ಎಂದು ನಂಬಲಾಗಿದೆ. ಆತನ ವಿರುದ್ಧ ವಾಹನವನ್ನು ಬಲವಂತವಾಗಿ ಕೊಂಡೊಯ್ದಿರುವುದು, ಹಲ್ಲೆ, ಗಂಭೀರ ದೈಹಿಕ ಹಾನಿ ಉಂಟುಮಾಡಲು ಯತ್ನ, ಅಪಾಯಕಾರಿಯಾಗಿ ವಾಹನ ಚಲಾಯಿಸಿರುವುದು, ದರೋಡೆ, ಅಂಗಡಿಯಿಂದ ಕಳ್ಳತನ, ಕೊಲೆ ಬೆದರಿಕೆ ಹಾಗೂ ಕ್ರಿಮಿನಲ್ ಹಾನಿಗೆ ಸಂಬಂಧಿಸಿದ ಮೂರು ಪ್ರಕರಣಗಳು ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ.
ಬಾಲ್ಹಾದ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೆಪ್ಟೆಂಬರ್ 21ರಂದು ಸೋಮವಾರ ಟೆಲ್ಫೋರ್ಡ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಹಾಜರುಪಡಿಸಲಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ