ಸ್ಟಾಕ್‌ಹೋಮ್ (ಸ್ವೀಡನ್): ಶಿಕ್ಷಣ ತಜ್ಞ ಮಹಾರಾಷ್ಟ್ರದ ಅಶೋಕ ವಿಖೆ ಪಾಟೀಲ ಅವರ ಪುತ್ರಿ ನೀಲಾ ವಿಖೆ ಪಾಟೀಲ ಅವರು ಸ್ವೀಡನ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶನಿವಾರ ಘೋಷಿಸಲಾಗಿದೆ. ಸೆಪ್ಟೆಂಬರ್ 13 ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ 41 ವರ್ಷದ ಗ್ರೀನ್ ಪಾರ್ಟಿ ನಾಯಕಿ ನೀಲಾ ವಿಖೆ ಪಾಟೀಲ ಅವರು ಸ್ಟಾಕ್‌ಹೋಮ್ ಸಿಟಿ ಕ್ಷೇತ್ರದಿಂದ ಸಂಸದರಾಗಿ (MP) ಆಯ್ಕೆಯಾಗಿದ್ದಾರೆ.
ದೇಶದ ಎಡಪಂಥೀಯ ವಿಪಕ್ಷವು 176 ಸ್ಥಾನಗಳನ್ನು ಗೆಲ್ಲುವ ಮೂಲಕ ಅತ್ಯಲ್ಪ ಬಹುಮತ ಪಡೆದಿದೆ. ನೀಲಾ ಪಾಟೀಲ ಅವರು ಸ್ವೀಡನ್‌ನ 349 ಸದಸ್ಯ ಬಲದ ರಿಡ್ಸ್‌ಲಾಗ್ (Riksdag) ಪ್ರವೇಶಿಸಿದ್ದಾರೆ.
ನೀಲಾ ವಿಖೆ ಪಾಟೀಲ ಯಾರು?
ಸ್ವೀಡನ್‌ನಲ್ಲಿ ಜನಿಸಿದ ನೀಲಾ, ತಮ್ಮ ಆರಂಭಿಕ ವರ್ಷಗಳನ್ನು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಕಳೆದಿದ್ದಾರೆ. ಅವರು ಏಷ್ಯಾದ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆಯ ಸ್ಥಾಪಕ ವಿಠ್ಠಲರಾವ್ ವಿಕೇ ಪಾಟೀಲ ಅವರ ಮರಿಮೊಮ್ಮಗಳು ಮತ್ತು ದಿವಂಗತ ಕೇಂದ್ರ ಸಚಿವ ಬಾಲಾಸಾಹೇಬ ವಿಖೆ ಪಾಟೀಲ ಅವರ ಮೊಮ್ಮಗಳಾಗಿದ್ದಾರೆ. ನೀಲಾ ಅವರು ಮಹಾರಾಷ್ಟ್ರದ ಬಿಜೆಪಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ ಅವರ ಸಹೋದರ ಸಂಬಂಧಿಯಾಗಿದ್ದಾರೆ.
ಅವರು ಗೋಥೆನ್‌ಬರ್ಗ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಅರ್ಥಶಾಸ್ತ್ರ ಮತ್ತು ಕಾನೂನು ವಿಷಯದ ಪದವಿ ಹಾಗೂ ಎಂಬಿಎ (MBA) ಪಡೆದಿದ್ದಾರೆ ಮತ್ತು ಮ್ಯಾಡ್ರಿಡ್‌ನ ಕಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿಯೂ ಎಂಬಿಎ ಅಧ್ಯಯನ ಮಾಡಿದ್ದಾರೆ.
ಅವರು ಹಿಂದೆ ಸ್ಟೆಫಾನ್ ಲೋವ್‌ಫೆನ್ ಅವರ ಆಡಳಿತ ಅವಧಿಯಲ್ಲಿ ಸ್ವೀಡನ್ ಪ್ರಧಾನಿ ಕಚೇರಿಯಲ್ಲಿ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ, ಅಲ್ಲಿ ಅವರು ಹಣಕಾಸು, ತೆರಿಗೆ ಮತ್ತು ವಸತಿ ಕುರಿತು ಗಮನ ಹರಿಸಿದ್ದರು. ಅವರು ಸ್ಟಾಕ್‌ಹೋಮ್ ಮುನ್ಸಿಪಲ್ ಕೌನ್ಸಿಲ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೀಲಾ ಅವರು 25 ವರ್ಷಗಳಿಂದ ಗ್ರೀನ್ ಪಾರ್ಟಿ ಜೊತೆ ಗುರುತಿಸಿಕೊಂಡಿದ್ದಾರೆ ಮತ್ತು ಸ್ಟಾಕ್‌ಹೋಮ್ ಗ್ರೀನ್ ಪಾರ್ಟಿಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ. 2020 ರಿಂದ, ಅವರು ಜಾಗತಿಕ ವೃತ್ತಿಪರ ಸೇವಾ ಜಾಲವಾದ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ (PwC) ನಲ್ಲಿ ಕೆಲಸ ಮಾಡುತ್ತಿದ್ದಾರೆ, ಅಲ್ಲಿ ಅವರು ಕಾರ್ಯತಂತ್ರ, ನಿರ್ವಹಣೆ, ತಂತ್ರಜ್ಞಾನ ಮತ್ತು ರಿಸ್ಕ್ ಕನ್ಸಲ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್ 2025 ರಲ್ಲಿ, ಅವರು ಅಧಿಕೃತ ಸಾರ್ವಜನಿಕ ಲೆಕ್ಕಪರಿಶೋಧಕರಾದರು.
ಸ್ವೀಡನ್‌ನ ಎಡಪಕ್ಷದಿಂದ ಚುನಾವಣೆ ಗೆಲುವು
ಸ್ವೀಡನ್ ಚುನಾವಣಾ ಆಯೋಗದ ಪ್ರಕಾರ, ಸೆಪ್ಟೆಂಬರ್ 13 ರ ಚುನಾವಣೆಯಲ್ಲಿ ಸ್ವೀಡನ್‌ನ ಎಡಪಂಥೀಯ ವಿರೋಧ ಪಕ್ಷವು ಅತ್ಯಲ್ಪ ಬಹುಮತವನ್ನು ಪಡೆದುಕೊಂಡಿದೆ, ನಾಲ್ಕು ವಿರೋಧ ಪಕ್ಷಗಳು ದೇಶದ ಸಂಸತ್ತಾದ ರಿಡ್ಸ್‌ಲಾಗ್‌ನಲ್ಲಿ 349 ಸ್ಥಾನಗಳಲ್ಲಿ 176 ಅನ್ನು ಗೆದ್ದುಕೊಂಡಿವೆ.
ಆಡಳಿತ ಪಕ್ಷ ಹಾಗೂ ಅದರ ನಾಲ್ಕು ಮಿತ್ರಪಕ್ಷಗಳು 173 ಸ್ಥಾನಗಳನ್ನು ಪಡೆದಿವೆ. ವಿರೋಧ ಪಕ್ಷಗಳಲ್ಲಿ, ಗ್ರೀನ್ ಪಾರ್ಟಿಯು ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಮತ್ತು ಹಸಿರು ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ